ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಬಿಜೆಪಿಯ ೧೦ ವರ್ಷದ ಆಡಳಿತದಲ್ಲಿ ಭಾರತೀಯರು ಮೆಚ್ಚುವಂತ ಆಡಳಿತವನ್ನು ಪ್ರಧಾನಿ ಮೋದಿ ನೀಡಿದ್ದಾರೆ. ೩೭೦ ಕಲಂ ರದ್ದುಗೊಳಿಸಿ ಭಾರತದ ಏಕತೆ ಗಟ್ಟಿಗೊಳಿಸಿದ್ದಾರೆ. ಭಾರತವನ್ನು ವಿಶ್ವಗುರುವನ್ನಾಗಿಸಲು ಪ್ರಧಾನಿ ಮೋದಿ ಕೊಡುಗೆ ಅಪಾರವಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿದರು.ಮಂಗಳವಾರ ಪಟ್ಟಣದ ವಿವಿಧ ವಾರ್ಡಗಳಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರ ಮತಯಾಚನೆ ಮಾಡಿ ಮಾತನಾಡಿ, ರೈತರ ಸಂಕಷ್ಟಕ್ಕೆ ಸ್ಪಂದಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ವರ್ಷಕ್ಕೆ ₹ 6 ಸಾವಿರ ಕೊಟ್ಟರೆ, ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದಾಗ ರಾಜ್ಯ ಸರ್ಕಾರದಿಂದ ₹ ೪ ಸಾವಿರ ಕೊಡುತ್ತಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ರೈತರಿಗೆ ನೀಡುತ್ತಿದ್ದ ₹ 4 ಸಾವಿರ ಬಂದ್ ಮಾಡಿತು. ರೈತ ವಿರೋಧಿ ನಿರ್ಣಯ ಮಾಡಿದ ಇವರು ರೈತರ ಪರನಾ ಎಂದ ಪ್ರಶ್ನಿಸಿದ ಅವರು, ಪ್ರಧಾನಿ ಮೋದಿ ಅವರ ಆಡಳಿತದ ಅವಧಿಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ ಸಾಕಷ್ಟು ಅಭಿವೃದ್ಧಿಪರ ಕೆಲಸ ಮಾಡಿ ತೋರಿಸಿದ್ದಾರೆ. ಆದ್ದರಿಂದ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡೋಣ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳ ನಂತರ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಮಾಡಿ ಹಿಂದೂ ಸಮಾಜದ ಗೌರವವನ್ನು ಪ್ರಧಾನಿ ಮೋದಿ ಎತ್ತಿ ಹಿಡಿದಿದ್ದಾರೆ. ಬಹಳ ವಷರ್ಗಳಿಂದ ಕಗ್ಗಂಟಾಗಿದ್ದ ದೇಶದ ಅನೇಕ ಸಮಸ್ಯೆಗಳು ಮೋದಿ ಆಡಳಿತದಲ್ಲಿ ಬಗೆಹರಿದಿವೆ. ಜಲಜೀವನ್ ಮಷೀನ್ ಮೂಲಕ ಮನೆ ಮನೆಗೆ ನಲ್ಲಿ ನೀರು ಒದಗಿಸಲಾಗುತ್ತಿದೆ. ಉಜ್ವಲ ಯೋಜನೆಯಡಿ ಸುಮಾರು ೧೨ ಕೋಟಿ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗಿದೆ. ಆಯುಸ್ಮಾನ್ ಭಾರತ್ ಅಡಿಯಲ್ಲಿ ₹ ೫ ಲಕ್ಷವರೆಗೆ ಉಚಿತ ಆರೋಗ್ಯ ಚಿಕಿತ್ಸೆ, ರಾಷ್ಟ್ರೀಯ ಶಿಕ್ಷಣ ನೀತಿ ಮುಂತಾದ ಅಭಿವೃದ್ಧಿ ಕಾರ್ಯಗಳಿಂದ ದೇಶವನ್ನು ಸದೃಢಗೊಳಿಸುತ್ತಿದ್ದಾರೆ.ಬಿಜೆಪಿ ಅಭಿವೃದ್ಧಿಪರ ಆಡಳಿತ ಸಹಿಸದ ಕಾಂಗ್ರೆಸ್ ರಾಜ್ಯ, ದೇಶವನ್ನು ದಿವಾಳಿಯತ್ತ ಕೊಂಡೊಯ್ಯುವ ಹುನ್ನಾರ ನಡೆಸಿದೆ. ದೇಶದ ಅಭಿವದ್ಧಿ, ಭದ್ರತೆ, ಅಖಂಡತೆಗಾಗಿ ಬರುವ ಚುನಾವಣೆಯಲ್ಲಿ ಬಿಜೆಪಿ ಮತ ನೀಡಿ ಪ್ರಧಾನಿ ಮೋದಿ ಕೈ ಬಲಪಡಿಸೋಣ ಎಂದು ಹೇಳಿದರು.
ಬಿಜೆಪಿ ಮುಖಂಡ ದ್ಯಾವಪ್ಪ ದಂಧರಗಿ, ಮಲ್ಲಿಕಾರ್ಜುನ ಅಂಗಡಿ, ಬಸವಂತಪ್ಪ ಸಂಕಾನಟ್ಟಿ, ಮಾಜಿ ಪಪಂ ಅಧ್ಯಕ್ಷ ವಿಠ್ಠಲ ಬಾಗೆವಾಡಿ, ಮಲ್ಲಪ್ಪ ಶಂಬೊಜಿ, ವಿ.ಜಿ. ರೆವಡಿಗಾರ, ಬಸವರಾಜ ಉಮಚಗಿಮಠ, ರಾಮಣ್ಣ ಕಾಳಪ್ಪಗೋಳ, ಸಂಗಪ್ಪ ಕಟಗೇರಿ, ಶ್ರೀಶೈಲ ಯಂಕಂಚಿಮಠ, ವಿಠ್ಠಲ ನಿಂಬಾಳಕರ, ಶಿವಪ್ಪ ಮಸೂತಿ, ಹುಚ್ಚಪ್ಪ ಕೌಲಗಿ, ಪರಶುರಾಮ ಮಮದಾಪುರ, ನಿಂಗಪ್ಪ ದಂಧರಗಿ, ಸಿದ್ದು ಮಾದರ, ಸಂತೋಷ ನಿಂಬಾಳಕರ, ಶೇಖರ ಗೊಳಸಂಗಿ, ಪ್ರಕಾಶ ಮಂಚಲಕರ, ರಾಘವೇಂದ್ರ ನಾಯ್ಕರ, ವಿಠ್ಠಲ ಗಡ್ಡದ ಸೇರಿದಂತೆ ಇತರರು ಇದ್ದರು.