ಸಾರಾಂಶ
ಹೊಸಪೇಟೆ: ಕರ್ನಾಟಕ ಶರಣರು ಕಂಡ ನಾಡಾಗಿದೆ. ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲರೂ ಸೌಹಾರ್ದಯುತವಾಗಿ ಬದುಕಿ, ಮಾನವ ಧರ್ಮ ಕಾಪಾಡೋಣ ಎಂದು ಬಳ್ಳಾರಿ ಸಂಸದ ಇ. ತುಕಾರಾಂ ಹೇಳಿದರು.
ನಗರದ ಸಿದ್ದಿಪ್ರಿಯಾ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆರು ಜಿಲ್ಲೆಗಳ ಹಜ್ ಯಾತ್ರಿಕರ ತರಬೇತಿ ಶಿಬಿರದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲಾ ಧರ್ಮಗಳ ಸಾರ ಒಂದೇ ಅದು ಮನುಷ್ಯ ತತ್ವವಾಗಿದೆ. ಎಲ್ಲರನ್ನೂ ಒಳಗೊಂಡು ಬದುಕುವುದೇ ನಿಜವಾದ ಮನುಷ್ಯನ ಗುಣವಾಗಿದೆ. ನಮ್ಮ ಆಚಾರ, ವಿಚಾರ ಬೇರೆ ಇರಬಹುದು ಅಷ್ಟೇ, ನಾವೆಲ್ಲರೂ ಮನುಷ್ಯ ಜಾತಿಯವರು ಎಂಬುದನ್ನು ಮರೆಯಬಾರದು. ನಾನು ಎಲ್ಲ ಜಾತಿ, ಜನಾಂಗ, ಧರ್ಮದವರ ಪ್ರತಿನಿಧಿಯಾಗಿದ್ದು ಎಲ್ಲರೂ ನನಗೆ ಸಮಾನರಾಗಿದ್ದಾರೆ. ಯಾರಿಗೂ ಅನ್ಯಾಯವಾಗದಂತೆ ಸೇವೆ ತಲುಪಿಸುವೆ ಎಂದು ಭರವಸೆ ನೀಡಿದರು.ಡಾ. ಬಾಬಾ ಸಾಹೇಬರು ಬರೆದ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಲಾಗಿದೆ. ದೇಶದಲ್ಲಿ ಎಷ್ಟೇ ಗೊಂದಲ ಸೃಷ್ಟಿಯಾದರೂ ಮುಸ್ಲಿಮರು ಕಾಯಕವನ್ನು ಬಿಟ್ಟಿಲ್ಲ. ಈ ಸಮಾಜ ಎಂದಿಗೂ ಬೇಡುವುದಕ್ಕೆ ಹೋಗದೇ ದುಡಿದು ತಿನ್ನುವ ಸಂಸ್ಕೃತಿ ಉಳಿಸಿಕೊಂಡಿದ್ದಾರೆ. ಯಾರ ಬಳಿಯೂ ದೇಣಿಗೆ ಕೇಳುವ ಜಾಯಮಾನ ಹೊಂದಿಲ್ಲ. ದಾನಗುಣ ಬೆಳೆಸಿಕೊಂಡಿದ್ದೀರಿ, ನಾನು ಕೂಡ ಈ ಸಮಾಜ ಮತ್ತು ಧರ್ಮವನ್ನು ತೀರಾ ಹತ್ತಿರದಿಂದ ಬಲ್ಲೇ ಎಂದರು.
ರಾಜ್ಯ ಹಜ್ ಕಮಿಟಿ ಅಧ್ಯಕ್ಷ ಜುಲ್ಫಿಕರ್ ಅಹಮ್ಮದ್ ಖಾನ್ ( ಟಿಪ್ಪು) ಮಾತನಾಡಿ, ಸರ್ಕಾರಗಳು ಹಜ್ ಯಾತ್ರಾರ್ಥಿಗಳಿಗೆ ಸಹಕಾರ ನೀಡುತ್ತಿದ್ದು, ಮುಸ್ಲಿಂ ಬಾಂಧವರು ಸರ್ಕಾರ ನೀಡುವ ಶೈಕ್ಷಣಿಕ ಮತ್ತು ಆರ್ಥಿಕ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಯಾತ್ರೆಯನ್ನು ಯಶಸ್ವಿಯಾಗಿ ನೆರವೇರಿಸಬೇಕು. ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಕೊಪ್ಪಳ, ಗದಗ ಹಾಗೂ ಬಾಗಲಕೋಟ ಜಿಲ್ಲೆಗಳಿಂದ 639 ಯಾತ್ರಿಗಳು ಅಗಮಿಸಿದ್ದು , ಆಗಮಿಸಿರುವ ಯಾತ್ರಾರ್ಥಿಗಳಿಗೆ ತರಬೇತಿ ನೀಡಿ, ಹಜ್ ಯಾತ್ರೆಗೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದರು.ಹುಡಾ ಅಧ್ಯಕ್ಷ ಎಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ಮಾತಾನಾಡಿ, ಹಜ್ ಯಾತ್ರಿಗಳು ಈ ದೇಶದ ಒಳಿತಿಗಾಗಿ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಬೇಕು, ನಿಮ್ಮ ಯಾತ್ರೆಯು ಸುಖಕರವಾಗಿರಲಿ ಎಂದರು.
ಈ ಹಜ್ ತರಬೇತಿಯನ್ನು ಕರ್ನಾಟಕ ಹಜ್ ತರಬೇತಿ ಪೋರಂನ ನಿವೃತ್ತ ಕೆಎಎಸ್ ಅಧಿಕಾರಿ ಎಜಾಜ್ ಅಹಮ್ಮದ್ ಹಾಗೂ ಅವರ ತಂಡದವರು ನೀಡಿದರು.ರಾಜ್ಯ ಹಜ್ ಕಮಿಟಿ ಮಾಜಿ ಅಧ್ಯಕ್ಷ ದಾದಾ ಸಾಹೇಬ್, ಅಂಜುಮನ್ ಕಮಿಟಿಯ ಪದಾಧಿಕಾರಿಗಳಾದ ಬಿ.ಅನ್ಸರ್ ಬಾಷಾ, ಫಿರೋಜ್ ಖಾನ್, ಅಬೂಬ್ ಕರ್, ಕೆ.ಮೋಸಿನ್, ಸದ್ದಾಂ ಹುಸೇನ್, ಡಾ. ದರ್ವೇಶ್, ಗುಲಾಮ್ ರಸೂಲ್, ವಿಜಯನಗರ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ದಾದಾಪೀರ್, ನಗರಸಭೆ ಸದಸ್ಯ ಅಸ್ಲಂ ಮಾಳಗಿ, ಜಿಲ್ಲಾ ವಕ್ಫ್ ಮಾಜಿ ಅಧ್ಯಕ್ಷ ಟಿ. ರಫೀಕ್, ಮುಖಂಡರಾದ ಎಚ್.ಎನ್. ಎಫ್, ಅಲಿಬಾಬಾ, ಖಲಂದರ್, ಖಾಜಾ ಹುಸೇನ್‌ನಿಯಾಜಿ ಮತ್ತಿತರರಿದ್ದರು.