ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಮಗೆ ಸ್ವಾತಂತ್ರ‍್ಯ ಸುಲಭದಿಂದ ಬಂದಿಲ್ಲ. ಅದು ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ಲಭಿಸಿದೆ. ಗಾಂಧೀಜಿಯವರ ಶಾಂತಿ, ಸಮಾನತೆ, ಸೌಹಾರ್ದತೆಯನ್ನು ನಾವು ಉಳಿಸಿಕೊಂಡು ಹೋಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ 155ನೇ ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸುಮಾರು 84 ದೇಶಗಳು ಗಾಂಧೀಜಿ ಯವರ ಪ್ರತಿಮೆಯನ್ನು ಹೊಂದಿವೆ. ಸಾಮಾನ್ಯವಾಗಿ ಎಲ್ಲರೂ ಅವರ ಚಿಂತನೆಗೆ ಮಾರು ಹೋಗಿದ್ದಾರೆ ಎಂದರು.
ಇಡೀ ದೇಶ ಒಂದೇ ವೇದಿಕೆ. ನಾವೆಲ್ಲ ಒಂದೇ ತಾಯಿ ಮಕ್ಕಳು. ಒಂದೇ ವೇದಿಕೆಯಲ್ಲಿ ಎಲ್ಲ ಧರ್ಮದವರು ಸೇರಲು ಕಾರಣ ಗಾಂಧೀಜಿ ಮತ್ತು ಅಂಬೇಡ್ಕರ್ ರಂತಹವರು. ನಾವೆಲ್ಲ ನಮ್ಮ ಸಂವಿಧಾನವನ್ನು ತಿಳಿಯಬೇಕು. ನಾವೆಲ್ಲ ಒಂದೇ ಎಂಬ ಭಾವನೆ ಬರಬೇಕು. ಅದೇ ಉದ್ದೇಶದಿಂದ ಸೆ.5ರಂದು ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿದಿನ ಸಂವಿಧಾನ ಪೀಠಿಕೆ ಓದಲು ಆದೇಶಿಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನ ಪೀಠಿಕೆ ಓದುವ ಮೂಲಕ ಗೌರವ ತೋರಬೇಕು. ನಾವೆಲ್ಲ ಒಂದೇ ಎಂಬ ಭಾವನೆ ಮೂಡಬೇಕು ಎಂದು ಹೇಳಿದರು.ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ವಿಶ್ವದಲ್ಲೇ ಶಾಂತಿ ನೆಲೆಸಲು ಗಾಂಧೀಜಿಯವರು ಶಾಂತಿ ಸಂದೇಶ ಸಾರಿದ್ದಾರೆ. ಸ್ವದೇಶಿ ವಸ್ತುಗಳ ಬಳಕೆ, ಸ್ವಾವಲಂಬನೆ ಸೂತ್ರ, ಸ್ವಚ್ಛ ಭಾರತ ಸಂಕಲ್ಪದಂತಹ ಅವರು ಹಾಕಿ ಕೊಟ್ಟ ಹಾದಿಯಲ್ಲಿ ನಾವೆಲ್ಲ ಸಾಗಬೇಕು. ಸಮಾಜವನ್ನು ಶ್ರೀಮಂತಗೊಳಿಸಬೇಕು ಎಂದ ಅವರು ನಮ್ಮ ತಂದೆ, ತಾಯಿ ಹೆಸರಿನಲ್ಲಿ, ಹುಟ್ಟಿದ ದಿನಗಳಂದು ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಬೆಳೆಸುವ ಸಂಕಲ್ಪವನ್ನು ಇಂದು ಮಾಡೋಣ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ಗಾಂಧೀಜಿಯವರ ಜೀವನ ಕಥೆ ಓದಿ, ತಿಳಿದು ಅವರ ತತ್ವಗಳನ್ನು ನಾವು ಅಳವಡಿಸಿಕೊಳ್ಳಬೇಕು. ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಅವರು ನಡೆದರು. ಶಾಂತಿ ಮತ್ತು ಸ್ವಾತಂತ್ರ‍್ಯದ ಬದುಕಿಗೆ ಗಾಂಧಿ ಮತ್ತು ಅಂಬೇಡ್ಕರ್‌ರಂತಹ ಮಹಾನ್ ವ್ಯಕ್ತಿಗಳು ಕಾರಣ ಎಂದರು.ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ದೇಶ ಹೇಗಿರಬೇಕು ಎಂದು ಗಾಂಧೀಜಿ ಮೊದಲೇ ತಿಳಿಸಿದ್ದಾರೆ. ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಲು ಹೇಳಿಕೊಟ್ಟಿದ್ದಾರೆ. ಅವರು ತಮ್ಮ ನಡವಳಿಕೆಯಿಂದ ಮಹಾತ್ಮರಾಗಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಕೂಡ ಮಹಾನ್ ವ್ಯಕ್ತಿಯಾಗಿದ್ದು, ಪ್ರಾಮಾಣಿಕತೆಗೆ ಇನ್ನೊಂದು ಹೆಸರಾಗಿದ್ದಾರೆ. ಗಾಂಧೀಜಿಯವರು ತಮ್ಮ ಜೀವನದ ಉದ್ದಕ್ಕೂ ರಾಮನ ಭಜನೆ ಮಾಡುತ್ತಿದ್ದರು ಎಂದು ತಿಳಿಸಿದರು.
ಉಪನ್ಯಾಸಕ ಅಣ್ಣಪ್ಪ ಮಳಮಠ್ ಮಾತನಾಡಿ, ಗಾಂಧಿ ನಮ್ಮಂತೆ ಸಾಮಾನ್ಯವಾಗಿ ಬದುಕಿದವರು. ಅವರನ್ನು ಆರಾಧನಾ ನೆಲೆಯಿಂದ ನೋಡದೆ ಒಬ್ಬ ಮನುಷ್ಯ ನಾಗಿ ನೋಡಿದಾಗ ಹೆಚ್ಚು ಅರ್ಥ ಆಗುತ್ತಾರೆ. ಸತ್ಯಕ್ಕಾಗಿ ಬದುಕಿದವರು ಎಂದರು.ಕಾರ್ಯಕ್ರಮದಲ್ಲಿ ಸರ್ವಧರ್ಮ ಪಠನೆ ಮಾಡಲಾಯಿತು. ಭಗವದ್ಗೀತೆ ಪಠನೆಯನ್ನು ಕು.ಐಶೂಬಾಯಿ ನೆರವೇರಿಸಿದರು. ಕುರಾನ್ ಪಠನೆಯನ್ನು ಮೌಲ್ವಿ ಲತೀಫ್ ಸಾಬ್ ಮತ್ತು ಸ್ಟ್ಯಾನ್ಲಿ ಡಿಸೋಝ ಬೈಬಲ್ ಪಠನ ಮಾಡಿದರು.
ಗಾಂಧಿ ಜಯಂತಿ ಪ್ರಯುಕ್ತ ಫ್ರೌಢಶಾಲೆ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಲಾಯಿತು.ಜಿ.ಪಂ.ಸಿಇಒ ಎನ್.ಹೇಮಂತ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಾರುತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.