ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
1976ರಲ್ಲಿ ಇಂದಿರಾ ಗಾಂಧಿಯವರು ಸಂವಿಧಾನದಲ್ಲಿ ಜಾತ್ಯಾತೀತವಾದ ಮತ್ತು ಸಮಾಜವಾದವೆಂಬ ಎರಡು ಶಬ್ಧ ಸೇರಿಸಿ ಹಿಂದೂಗಳಿಗೆ ಅನ್ಯಾಯ ಮಾಡಿದರು. ಈಗ ಅದೇ ಸಂವಿಧಾನದಲ್ಲಿ ಜಾತ್ಯಾತೀತವೆಂಬ ಶಬ್ಧ ತೆಗೆದು ಹಿಂದೂ ರಾಷ್ಟ್ರದ ಶಬ್ಧ ಸೇರಿಸಿ ಪುನಃ ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಲು ನಾವೆಲ್ಲರೂ ಕಾನೂನು ಮಾರ್ಗದಲ್ಲಿ ಹೋರಾಟ ಮಾಡಬೇಕೆಂದು ನ್ಯಾಯವಾದಿ ಬಲದೇವ ಸಣ್ಣಕ್ಕಿ ಹೇಳಿದರು.ಮಂಗಳವಾರ ಮುಧೋಳದಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಹಿಂದೂ ರಾಷ್ಟ್ರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದ ಪೂರ್ವದಲ್ಲಿ ಅಖಂಡವಾಗಿದ್ದ ಭಾರತವನ್ನು 1947ರ ನಂತರ ಧರ್ಮದ ಆಧಾರದ ಮೇಲೆ ಇಬ್ಭಾಗ ಮಾಡಿದಾಗ ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರವಾಯಿತು. ಆದರೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಲಿಲ್ಲ ಎಂದು ದೂರಿದರು.
ಜೀತೇಂದ್ರ ರಾಜೋಜಿರಾವ್ ಜಾಧವ ದೇಸಾಯಿ ಮಾತನಾಡಿ, ಜಗತ್ತಿನ ಅನೇಕ ನಾಗರಿಕತೆಗಳು, ಸಂಸ್ಕೃತಿಗಳು ನಾಶವಾದರೂ ಸಹ ನಮ್ಮ ಸಂಸ್ಕೃತಿ ಇನ್ನೂ ಜೀವಂತವಾಗಿಯೇ ಇದೆ. ಅಮೇರಿಕಾದಲ್ಲಿ ಜಗತ್ತಿನ ಎಲ್ಲಾ ನಾಗರಿಕರು ಇದ್ದಾರೆ. ಭಾರತದಲ್ಲಿ ಜಗತ್ತಿನ ಎಲ್ಲಾ ಪಂಥೀಯರು ಇದ್ದಾರೆ. ಎಲ್ಲರನ್ನು ಗೌರವಿಸುವ ನಮ್ಮ ಮೇಲೆ ಆಘಾತಗಳು ಆಗುತ್ತಿವೆ. ಅಂತಹ ಸಮಯದಲ್ಲಿ ಹಿಂದೂ ರಾಷ್ಟ್ರದ ಸೂರ್ಯ ಉದಯಿಸುತ್ತಿದ್ದಾನೆಂಬುದು ಈ ಅಧಿವೇಶನದಿಂದ ಅನುಭವಕ್ಕೆ ಬರುತ್ತಿದೆ ಎಂದರು.ದುಂಡಯ್ಯ ಶಂಕರಯ್ಯ ಹೀರೆಮಠ ಅವರು ಮಾತನಾಡಿ, ನಮ್ಮ ಭೂಮಿಯಲ್ಲಿ ಅಪಾರ ಸಂಪತ್ತಿದೆ. ಈ ಸಂಪತ್ತು, ಸಂಸ್ಕಾರಗಳನ್ನು ಲೂಟಿ ಮಾಡಲು ನಿರಂತರ ಪ್ರಯತ್ನಗಳಾಗುತ್ತಿವೆ. ಪ್ರಸ್ತುತ ಸಮಯದಲ್ಲಿ ನಾವೆಲ್ಲರೂ ಸಂಘಟಿತರಾಗಿರುವುದು ಬಹಳ ಮಹತ್ವದಿದೆ. ಕಾರಣ ಸಂಘಟನೆಯಲ್ಲಿ ಶಕ್ತಿಯಿದೆ. ಆದರೆ ನಮ್ಮ ಮರ್ಯಾದೆ, ಗೌರವ ಎಂಬ ಪ್ರತಿಷ್ಠೆಯನ್ನಿಟ್ಟುಕೊಂಡು ಹಿಂದೂ ರಾಷ್ಟ್ರಕ್ಕಾಗಿ ಹೋರಾಡಲು ನಾವು ಮುಂದೆ ಬರುತ್ತಿಲ್ಲ, ಅದೇ ನಮಗೆ ಮುಳುವಾಗಿದೆ. ಈಗ ನಾವು ಪ್ರತಿಷ್ಠೆಯನ್ನು ಬಿಟ್ಟು ಸ್ವಂತದ ಉಳಿವಿಗಾಗಿ ಸಂಘಟಿತರಾಗೋಣ ಎಂದರು.
ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡರ ಮಾತನಾಡಿ, ಎಲ್ಲಾ ಹಿಂದೂ ಸಂಘಟನೆಗಳು ಹಿಂದೂ ರಾಷ್ಟ್ರದ ವಿಚಾರ ಬಂದಾಗ ತಮ್ಮ ತಮ್ಮ ಸಂಘಟನೆ ಬದಿಗಿಟ್ಟು ಹಿಂದೂ ರಾಷ್ಟ್ರದ ಸ್ಥಾಪನೆ ಸಂಕಲ್ಪದೊಂದಿಗೆ ಒಗ್ಗಟ್ಟಾಗಿ ಹೋರಡಬೇಕಾಗಿದೆ. ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ರಾಷ್ಟ್ರದ ಉದ್ಘೋಷಣೆಯೊಂದಿಗೆ ಕಳೆದ 12 ವರ್ಷಗಳಿಂದ ಹಿಂದೂ ರಾಷ್ಟ್ರ ಅಧಿವೇಶನ ಆಯೋಜಿಸಿ 800ಕ್ಕೂ ಹೆಚ್ಚು ಹಿಂದೂ ಸಂಘಟನೆ ಪ್ರತಿನಿಧಿ ಮತ್ತು ಹಿಂದುತ್ವ ನಿಷ್ಠರನ್ನು ಒಟ್ಟಾಗಿಸಿ ರಾಷ್ಟ್ರಾದ್ಯಾಂತ ಹಿಂದೂ ರಾಷ್ಟ್ರಕ್ಕಾಗಿ ಹೋರಾಟ ಪ್ರಾರಂಭವಾಗಿದೆ. 2023ರಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ಯಾವುದೇ ಧರ್ಮವನ್ನು ಹೀಯಾಳಿಸಿದವರ ಮೇಲೆ ಸುಮೋಟೋ ಕೇಸ್ ದಾಖಲಿಸಬೇಕೆಂದು ಆದೇಶಿಸಿದರೂ ಸಹ ರಾಜಾರೋಷವಾಗಿ ಸನಾತನ ಧರ್ಮವನ್ನು ನಾಶ ಮಾಡಬೇಕೆನ್ನುವ ಉದಯ ನಿಧಿ ಸ್ಟಾಲಿನ್ ಮತ್ತು ಅರ್ಬನ್ ನಕ್ಸಲರ ಮೇಲೆ ಯಾವುದೇ ಕಾನೂನು ಕ್ರಮ ಆಗಲಿಲ್ಲ. ದೇಶದ ಭೂಮಿಯನ್ನು ಕಬಳಿಸುವ ವಕ್ಫ್ ಮಂಡಳಿ ಲ್ಯಾಂಡ್ ಜಿಹಾದ್, ಹಲಾಲ ಆರ್ಥಿಕ ಷಡ್ಯಂತ್ರ, ದೇವಸ್ಥಾನಗಳ ಸರಕಾರೀಕರಣದಿಂದ ಪಾವಿತ್ರತೆ ನಾಶವಾಗುತ್ತಿದೆ. ಇದಕ್ಕೆಲ್ಲಾ ಪರಿಹಾರ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆ ಎಂದು ಹೇಳಿದರು.ಇವತ್ತಿನ ಕಾರ್ಯಕ್ರಮದಲ್ಲಿ ವಿಜಯಪುರ, ನಿಡಗುಂದಿ, ಬಾದಾಮಿ, ಮುಧೋಳ, ಮಹಾಲಿಂಗಪೂರ, ಜಮಖಂಡಿ, ರಬಕವಿ ಬನಹಟ್ಟಿ, ರಾಯಬಾಗ, ಗೋಕಾಕ, ಕಾಗೋಡದಿಂದ 100ಕ್ಕೂ ಹೆಚ್ಚು ಹಿಂದೂ ಸಂಘಟನೆ ಪ್ರತಿನಿಧಿಗಳು ಮತ್ತು ಹಿಂದುತ್ವ ನಿಷ್ಠರು, ವಕೀಲರು ಸಹಭಾಗಿಯಾಗಿದ್ದರು. ಈ ಅಧಿವೇಶನದ ನಂತರ ಮುಂದಿನ ದಿನಗಳಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆ ನಿಟ್ಟಿನಲ್ಲಿ ಸಂಘಟನೆಗಳು ಒಟ್ಟಾಗಿ ಮಾಡಲಿರುವ ಕಾರ್ಯಗಳ ಕುರಿತು ಗುಂಪು ಚರ್ಚೆ ಮಾಡಲಾಯಿತು.
ಜಿಲ್ಲಾ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕ ವೆಂಕಟರಮಣ ನಾಯಕ ಪ್ರಾಸ್ತಾವಿಕ ವಾಗಿ ಮಾತನಾಡಿದರು.