ಸಾರಾಂಶ
ತರೀಕೆರೆಯಲ್ಲಿ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ
ಕನ್ನಡಪ್ರಭ ವಾರ್ತೆ, ತರೀಕೆರೆಚಿಕ್ಕಮಗಳೂರು ಜಿಲ್ಲಾ ಮತ್ತು ತರೀಕೆರೆ ತಾಲೂಕು ಕಸಾಪ, ವಿವಿಧ ಸಂಘ ಸಂಸ್ಥೆಗಳಿಂದ ತರೀಕೆರೆ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಮಾ. 7 ಮತ್ತು 8 ರಂದು ಹಮ್ಮಿಕೊಂಡಿರುವ 20ನೇ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸರ್ವರ ಸಹಕಾರದಿಂದ ಯಶಸ್ವಿಗೊಳಿಸೋಣ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.
ಶನಿವಾರ ಜಿಲ್ಲಾ ಮತ್ತು ತಾಲೂಕು ಕಸಾಪದಿಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು, ಶಿಕ್ಷಕರು, ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿ ಗೊಳಿಸಬೇಕು. ಪುರಸಭೆ, ಸ್ಥಳೀಯ ಸಂಸ್ಥೆಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಇದು ತಮ್ಮ ಅವಧಿಯಲ್ಲಿ ನಡೆಯುತ್ತಿರುವ 4ನೇ ಸಮ್ಮೇಳನ ರಾಜ್ಯಮಟ್ಟದಿಂದ ತಾಲೂಕುಮಟ್ಟದವರೆಗೂ ಹಲವಾರು ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು ತರೀಕೆರೆ ಯಲ್ಲಿ ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸರ್ಕಾರ, 10 ದಾನಿಗಳ ಸಹಕಾರದಿಂದ ಸಮ್ಮೇಳನ ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಮೊದಲ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ವಿದೆ. ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಚರ್ಚಾ ಗೋಷ್ಠಿಗಳು ನಡೆಯಲಿದೆ ಎಂದರು.
ಪುರಸಭಾ ಸದಸ್ಯ ಟಿ, ದಾದಾಪೀರ್ ಮಾತನಾಡಿ ಬಹಳ ದಿನಗಳ ನಂತರ ತರೀಕೆರೆಯಲ್ಲಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ, ಕನ್ನಡ ಚಳುವಳಿಗಳು ಹುಟ್ಟಿದ್ದು ಪರಿಷತ್ತಿನಿಂದ, ಜಿಲ್ಲೆಯ ಮಲೆನಾಡಿನ ಸಮಸ್ಯೆಗಳು ಕಸ್ತೂರಿ ರಂಗನ್ ವರದಿ ಜಾರಿ, ಈ ವಿಚಾರಗಳ ಚರ್ಚೆಗೆ ಪಹರಿಹಾಕ ಸಿಗಬೇಕು. ಸಾಮಾಜಿಕ ಕ್ಷೇತ್ರಗಳಲ್ಲಿ ದುಡಿದ ಅರ್ಹರಿಗೆ ಪ್ರಶಸ್ತಿಗಳು ಸಿಗಬೇಕು. ಲೆಕ್ಕಪತ್ರ ಸಮರ್ಪಕವಾಗಿರಬೇಕು ಎಂದರು.ಕನ್ನಡಶ್ರೀ ಬಿ. ಎಸ್. ಭಗವಾನ್ ಮಾತನಾಡಿ ನಾಡಿನ ಶ್ರೇಷ್ಠ ವ್ಯಕ್ತಿಗಳನ್ನು ಸಮ್ಮೇಳನಕ್ಕೆ ಆಹ್ವಾನಿಸಬೇಕು, ಸಮ್ಮೇಳನದಲ್ಲಿ ವಿವಿಧ ವಿಚಾರಗೋಷ್ಠಿಗಳನ್ನು ಸಂಘಟಿಸಬೇಕು ಎಂದು ಸಲಹೆ ನೀಡಿದರು.ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಜಗದೀಶ್ ಮಾತನಾಡಿ ಪಟ್ಟಣದಲ್ಲಿ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತೋಷ ತಂದಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕೆಂದು ಹೇಳಿದರು, ಪುರಸಭಾ ಮಾಜಿ ಅಧ್ಯಕ್ಷ ಎಂ.ನರೇಂದ್ರ ಮಾತನಾಡಿ, ಸಮ್ಮೇಳನದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು, ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಭಾಷಾ ಅಭಿಮಾನಿಗಳನ್ನು ಕರೆ ತಂದು ಸಂಘ-ಸಂಸ್ಥೆಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಬೇಕು ಎಂದು ಹೇಳಿದರು. ಕಸಾಪ ಹಿರಿಯ ಸದಸ್ಯ ಶಿವಣ್ಣ, ಶಿಕ್ಷಕರಾದ ಚೇತನ್ ಗೌಡ, ಎಸ್.ಟಿ. ತಿಪ್ಪೇಶಪ್ಪ, ಇಮ್ರಾನ್ ಅಹಮದ್ ಬೇಗ್, ಉಮಾ ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಎಚ್. ಪ್ರಶಾಂತ್ , ಶಿವಣ್ಣ ,ಕಾಂತರಾಜಯ್ಯ,ಗುರುಮೂರ್ತಿ, ತಮ್ಯಯ್ಯ, ಪುರಸಭಾ ಮಾಜಿ ಅಧ್ಯಕ್ಷ ಟಿ. ಎಸ್. ಪ್ರಕಾಶ್ ವರ್ಮ ಮತ್ತಿತರರು ಮಾತನಾಡಿದರು. ಪುರಸಭೆ ಅಧ್ಯಕ್ಷ ವಸಂತ್ ಕುಮಾರ್, ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ, ತ. ಮ. ದೇವಾನಂದ್, ಟಿ.ಸಿ.ದರ್ಶನ್, ಉಪ ವಿಭಾಗಾಧಿಕಾರಿ ಡಾ. ಕೆ. ಜಿ. ಕಾಂತರಾಜ್, ತಹಸೀಲ್ದಾರ್ ವಿಶ್ವಜಿತ್ ಮೇಹತಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ. ಆರ್. ದೇವೇಂದ್ರಪ್ಪ ಉಪನ್ಯಾಸಕ ದಾದಾ ಪೀರ್ ಮತ್ತಿತರರು ಭಾಗವಹಿಸಿದ್ದರು.
18ಕೆಟಿಆರ್.ಕೆ.8ಃತರೀಕೆರೆಯಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿದರು. ಪುರಸಭೆ ಅಧ್ಯಕ್ಷ ವಸಂತಕುಮಾರ್, ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ, ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್, ಮತ್ತಿತರರು ಇದ್ದರು. -------------------