ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಗಾಂಧಿಜೀ ಅವರ ಮೌಲ್ಯಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಜ್ಞೆ ಮಾಡೋಣ. ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛ ಹಸಿರು ಸ್ಥಳವನ್ನಾಗಿ ಮಾಡೋಣ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.ನಗರದ ಆನಂದ ಮಹಲ್ ಆವರಣದಲ್ಲಿ ಜಿಲ್ಲಾಡಳಿತ, ನೆಹರು ಯುವ ಕೇಂದ್ರ, ವಿಜಯಪುರ ಲಾಡ್ಲಿ ಫೌಂಡೇಶನ್ ನವದೆಹಲಿ, ಜಿಲ್ಲಾ ಎನ್ಎಸ್ಎಸ್ ಘಟಕ, ಕ್ಷೇತ್ರ ಸಂವಹನ ಇಲಾಖೆ, ಸ್ಪಂದನಾ ಸೇವಾ ಸಂಸ್ಥೆ, ಸಮಪ್ರಭ ಸಂಸ್ಥೆಯ ಆಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ನಡೆದ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ಗಾಂಧಿ ಜಯಂತಿಯನ್ನು ಆಚರಿಸುತ್ತಿರುವಾಗ ಸ್ವಚ್ಛ ಭಾರತ ಅಭಿಯಾನಕ್ಕೆ ನಮ್ಮ ಬದ್ಧತೆ ಕೊಡುಗೆ ನೀಡಬೇಕಿದೆ. ಗಾಂಧಿಜೀಯವರು ಹಾಕಿಕೊಟ್ಟ ಅಹಿಂಸಾ ಮಾರ್ಗದಲ್ಲಿ ನಡೆದು ಸ್ವಚ್ಛತೆ ಮತ್ತು ಸಾಮಾಜಿಕ ಸೇವೆಗೆ ಅಣಿಯಾಗಬೇಕಾಗಿದೆ. ಸ್ವಚ್ಛತೆ ಬಗ್ಗೆ ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ಅರಿತು ನಡೆಯಬೇಕು ಎಂದು ಕಿವಿಮಾತು ಹೇಳಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಾಹುಲ್ ಡೋಂಗ್ರೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಸೆ. ೧೭ರಿಂದ ಅಕ್ಟೋಬರ್ ೨ರವರೆಗೆ ನಿರಂತರವಾಗಿ ಸ್ವಚ್ಛತಾ ಹಿ ಸೇವಾ ಅಭಿಯಾನದ ಜಿಲ್ಲೆಯ ಯುವಕ ಸಂಘಗಳು ಮತ್ತು ಎನ್‌ಎಸ್ಎಸ್ ಘಟಕಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಗಾಂಧೀಜಿ ಅವರ ಸ್ವಚ್ಛತೆಯ ಪರಿಕಲ್ಪನೆಯನ್ನು ಯುವಕರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನೆಹರು ಯುವ ಕೇಂದ್ರದಿಂದ ಮಾಡಲಾಗಿದೆ ಎಂದು ಹೇಳಿದರು.ಜಾವೀದ ಜಮಾದಾರ ಮಾತನಾಡಿ, ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಯುವಕರು ಗಾಂಧೀಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದರು.
ಈ ವೇಳೆ ಎಸ್.ಯು.ಜಮಾದಾರ್ ಪ್ರತಿಜ್ಞಾವಿಧಿ ಬೋಧಿಸಿದರು. ಕ್ಷೇತ್ರ ಸಂವಹನಾಧಿಕಾರಿ ಸುರೇಶ ಸಿ.ಕೆ, ಎನ್ಎಸ್ಎಸ್ ನೋಡಲ್ ಅಧಿಕಾರಿ ಪ್ರಕಾಶ ರಾಠೋಡ, ಸುರಭಿಸಿಂಗ್, ಸುರೇಶ ಬಿಜಾಪೂರ, ಮಹದೇವ ದೇವರ, ಆರ್.ಬಿ.ಉಪಾಸೇ, ಡಾ.ಶಿವಕುಮಾರ ನಾಯಕ, ಶೇಖರ ಕುಮಾರ ಝಾ, ಪ್ರೆಸಿಡೆನ್ಸಿ ಕಾಲೇಜಿನ ಪ್ರಾಚಾರ್ಯ ಡಾ.ಸುಮಾ ಬೋಳರೆಡ್ಡಿ, ಚೇತನಾ ಕಾಲೇಜಿನ ಪುರುಷೋತ್ತಮ, ವೇದಾಂತ ಕಾಲೇಜಿನ ಎ.ಎಸ್.ಹೂಗಾರ, ಎ.ಎಸ್.ಪಾಟೀಲ ಕಾಮರ್ಸ್ ಕಾಲೇಜಿನ ವಿಜಯಕುಮಾರ ತಳವಾರ, ಪ್ರದೀಪ ಕುಂಬಾರ, ಡಾ.ಬಿ.ಎಸ್. ಹಿರೇಮಠ, ಪ್ರಶಾಂತ ದೇಶಪಾಂಡೆ, ನೆಹರು ಯುವ ಕೇಂದ್ರದ ಕಾರ್ಯಕ್ರಮ ಸಹಾಯಕಿ ಬೇಬಿ ದೊಡಮನಿ ಮುಂತಾದವರು.ಬಾಕ್ಸ್
ಎಲ್ಲೆಲ್ಲಿ ಸ್ವಚ್ಛತಾ ಕಾರ್ಯಎನ್ಎಸ್ಎಸ್ ಸ್ವಯಂ ಸೇವಕರ ತಲಾ ೧೦೦ ಜನರ ೮ ತಂಡಗಳನ್ನು ರಚಿಸಿ ನಗರದ ಕೇಂದ್ರ ಬಸ್ ನಿಲ್ದಾಣ, ಗಗನ ಮಹಲ್, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಬಾರಾ ಕಮಾನ್, ಗಾಂಧಿ ಚೌಕ್, ನರಸಿಂಹ ದೇವಸ್ಥಾನ, ಹಳೇ ತಹಸೀಲ್ದಾರ್, ಆಫೀಸ್, ಎಲ್.ಬಿ.ಎಸ್.ಮಾರ್ಕೆಟ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸ್ವಚ್ಛತೆ ಕೈಗೊಳ್ಳಲಾಯಿತು. ಆನಂದ ಮಹಲ್ ಆವರಣದಿಂದ ಸ್ವಚ್ಛತಾ ಜಾಗೃತಿ ಗಾಂಧಿ ವೃತ್ತದವರೆಗೆ ಹಮ್ಮಿಕೊಂಡು, ವೃತ್ತದಲ್ಲಿ ಮಾನವ ಸರಪಳಿ ನಿಮಿಸಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.