ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕಿ

ಕನ್ನಡಪ್ರಭ ವಾರ್ತೆ ಕಾರವಾರ

ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಅಮೂಲ್ಯ ಕೊಡುಗೆ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಮಾನೋತ್ಸವವನ್ನು ಅಭೂತಪೂರ್ವವಾಗಿಸೋಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದರು.

ಮಾಜಿ ಮುಖ್ಯಮಂತ್ರಿ, ರೈತಬಂಧು ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷದ ರಾಜಕೀಯ ಜೀವನದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಮೇ 9ರಂದು ನಡೆಯಲಿರುವ ಯಡಿಯೂರಪ್ಪ ಅಭಿಮಾನೋತ್ಸವದ ಕುರಿತು ಹಳಿಯಾಳ, ಮುಂಡಗೋಡ ಹಾಗೂ ಯಲ್ಲಾಪುರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಬಿ.ಎಸ್. ಯಡಿಯೂರಪ್ಪ ಈ ನಾಡಿನ ಒಂದು ಶಕ್ತಿ. ಪಕ್ಷಕ್ಕಾಗಿ ಅವಿರತವಾಗಿ ಅರ್ಧಶತಮಾನದಷ್ಟು ಕಾಲ ದುಡಿದ ಮಹಾನ್ ನಾಯಕರು. ರೈತರು, ಬಡವರು, ಮೀನುಗಾರರು, ಮಹಿಳೆಯರು, ದೀನ ದಲಿತರು ಹೀಗೆ ಎಲ್ಲ ವರ್ಗದವರ ಅಭಿವೃದ್ಧಿಗಾಗಿ ಜನಪರ ಯೋಜನೆಗಳನ್ನು ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ಅವರು ನಾಡಿಗಾಗಿ, ಪಕ್ಷಕ್ಕಾಗಿ ನೀಡಿದ ಕೊಡುಗೆ ಹಿನ್ನೆಲೆ ಚಿತ್ರದುರ್ಗದಲ್ಲಿ ಮೇ 9ರಂದು ಯಡಿಯೂರಪ್ಪ ಅಭಿಮಾನೋತ್ಸವವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮವನ್ನು ಐತಿಹಾಸಿಕವಾಗಿಸೋಣ. ನಮ್ಮ ಜಿಲ್ಲೆಯಿಂದ ಅತಿ ಹೆಚ್ಚು ಜನರು ಸ್ವಇಚ್ಛೆಯಿಂದ ಪಾಲ್ಗೊಳ್ಳುವ ಮೂಲಕ ಸಮಾರಂಭಕ್ಕೆ ಮೆರುಗು ತರೋಣ ಎಂದು ಮನವಿ ಮಾಡಿದರು.


ಮಾಜಿ ಶಾಸಕ ಸುನೀಲ ಹೆಗಡೆ, ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ, ಪ್ರಮುಖರಾದ ಶ್ರೀಕಾಂತ ಘೋಟ್ನೇಕರ, ಮಂಗೇಶ ದೇಶಪಾಂಡೆ, ಶಿವಾಜಿ ನರ್ಸಾನಿ, ಎಲ್.ಟಿ. ಪಾಟೀಲ್, ಅಶೋಕ ಛಲವಾದಿ, ಮಂಜುನಾಥ ಪಾಟೀಲ ಮೊದಲಾದವರು ಪಾಲ್ಗೊಂಡಿದ್ದರು.

ವಿಜಯೋತ್ಸವ:

ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ, ಎನ್‌ಡಿಎ ಮೈತ್ರಿಕೂಟ ಅಭೂತಪೂರ್ವ ಗೆಲುವು ದಾಖಲಿಸಿದ ಹಿನ್ನೆಲೆ ನಡೆದ ವಿಜಯೋತ್ಸವದಲ್ಲಿ ರೂಪಾಲಿ ಎಸ್.ನಾಯ್ಕ ಸಂಭ್ರಮದಿಂದ ಪಾಲ್ಗೊಂಡರು.