ಆರೆಸ್ಸೆಸ್‌ ಕಚೇರಿಯಲ್ಲಿ ಬಸವಣ್ಣನ ಫೋಟೋ ಹಾಕಲಿ: ಶರಣಪ್ರಕಾಶ

| Published : Apr 22 2024, 02:03 AM IST

ಸಾರಾಂಶ

ಆರ್‌ಎಸ್‌ಎಸ್‌ನವರು ಬಸವ ತತ್ವದ ವಿರೋಧಿಗಳು ಎಂದು ಪ್ರತಿಪಾದಿಸಿದ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಆರ್‌ಎಸ್‌ಎಸ್‌ ನವರು ತಮ್ಮ ಕಚೇರಿಯಲ್ಲಿ ಬಸವಣ್ಣನವರ ಫೋಟೋ ಹಾಕಲಿ ಎಂದು ಸವಾಲ್ ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಆರ್‌ಎಸ್‌ಎಸ್‌ನವರು ಬಸವ ತತ್ವದ ವಿರೋಧಿಗಳು ಎಂದು ಪ್ರತಿಪಾದಿಸಿದ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಆರ್‌ಎಸ್‌ಎಸ್‌ ನವರು ತಮ್ಮ ಕಚೇರಿಯಲ್ಲಿ ಬಸವಣ್ಣನವರ ಫೋಟೋ ಹಾಕಲಿ ಎಂದು ಸವಾಲ್ ಹಾಕಿದ್ದಾರೆ.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ‌ ಕಾಂಗ್ರೆಸ್ ಬೆಂಬಲಿತ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು.

ಎಲ್ಲರಿಗೂ ಒಳಿತು ಬಯಸುವ ಬಸವ ಧರ್ಮಕ್ಕೆ ಆರ್‌ಎಸ್‌ಎಸ್‌ ನವರು ತತ್ವದ ವಿರೋಧಿ ವಿಚಾರಗಳನ್ನು ತುಂಬಿದ್ದಾರೆ. ಇಂದಿನ ಯುವಕರು ಈ ವಿಚಾರಗಳಿಂದ ಹೊರಗೆ ಬರಬೇಕು ಎಂದು ಸಲಹೆ ನೀಡಿದರು.

ಲಿಂಗಾಯತರು ಕಾಯಕದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಹಾಗಾಗಿ‌, ಜಾಸ್ತಿ‌ ಲಿಂಗಾಯತರು ಭೂಮಿಯ ಒಡೆಯರಾಗಿದ್ದಾರೆ. ತಮ್ಮ ಹಿರಿಯರಿಂದ ಗುರುಗಳಿಂದ ಕಲಿತ ಸನ್ನಡತೆಯ ಪಾಠದಿಂದಲೇ ಇತರ ಸಮಾಜದವರೊಂದಿಗೆ ಸಹಬಾಳ್ವೆಯೊಂದಿಗೆ ಜೀವಿಸುತ್ತಿದ್ದಾರೆಂದರು.

ಸಿಎಂ ಸಲಹೆಗಾರ ಬಿ.ಆರ್.ಪಾಟೀಲ್ ಮಾತನಾಡಿ, ಲಿಂಗಾಯತರಲ್ಲಿ ಬಹುತೇಕರು ಬಿಜೆಪಿಗೆ ಬೆಂಬಲ ಕೊಡುತ್ತಾರೆ ಎನ್ನುವ ಆರೋಪವಿದೆ. ಹಾಗೇ, ಕಾಂಗ್ರೆಸ್ ನಲ್ಲಿ ಲಿಂಗಾಯತರಿಗೆ ನ್ಯಾಯ ಸಿಕಿಲ್ಲ ಎನ್ನುವ ಮಾತಿದೆ. ಇವೆರಡು ಸತ್ಯಕ್ಕೆ ಸಮೀಪ ಇವೆ. ಲಿಂಗಾಯತರಿಗೆ ಬೇರೆ ಏನೂ ಬೇಡ ಅವರಿಗೆ ಗೌರವ ಬೇಕು ಎಂದರು.

ಆರ್‌ಎಸ್‌ಎಸ್‌ ನವರು ಲಿಂಗಾಯತರ ಪರವಾಗಿಲ್ಲ. ಯತ್ನಾಳ ಗೌಡರನ್ನು ಬಿಟ್ಟು ಯಡಿಯೂರಪ್ಪ ಹಾಗೂ ಅವರ ಮಗನಿಗೆ ಬೈಯಿಸುತ್ತಿದ್ದಾರೆ ಎಂದ ಪಾಟೀಲ್ ವರ್ಣ ವ್ಯವಸ್ಥೆಯಲ್ಲಿ ಲಿಂಗಾಯತರೂ ಕೂಡಾ ಶೂದ್ರರೇ. ಹಾಗಾಗಿ, ಬಸವಣ್ಣನವರ ಕನಸು ನನಸು ಮಾಡಬೇಕೆಂದರೆ‌ ಜಾತ್ಯಾತೀತ ಪಕ್ಷ ಕಾಂಗ್ರೆಸ್ ಗೆ ಬೆಂಬಲ ನೀಡಬೇಕಿದೆ ಎಂದರು.

ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಕರ್ನಾಟಕದಲ್ಲಿ ನಮ್ಮ ಶಕ್ತಿ ತೋರಿಸುವ ಸಮಯ ಬಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್ ಪರವಾಗಿದ್ದರಿಂದ ಹೆಚ್ಚಿನ‌ ಸೀಟು ಗೆಲ್ಲಲು ಸಾಧ್ಯವಾಗಿದೆ. ಲಿಂಗಾಯತರು ಕಾಂಗ್ರೆಸ್ ಪರವಾಗಿ ಹೆಚ್ಚು ಮತ ಹಾಕುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಯಾಕೆ ಹಾಕುವುದಿಲ್ಲ ಎಂದು ಪಕ್ಷ ಉತ್ತರ ಕಂಡುಕೊಳ್ಳಬೇಕೆಂದರು.

ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಬುದ್ಧನ ನಂತರ ಇಡೀ ವಿಶ್ವಕ್ಕೆ ಸಮಾಜಿಕ‌ ನ್ಯಾಯಕೊಡಿಸುವ ಮಹಾನ್ ವ್ಯಕ್ತಿ ಬಸವಣ್ಣನವರನ್ನು ಒಂದು ಸಮಾಜಕ್ಕೆ ಸೀಮಿತಿಗೊಳಿಸಿರುವುದರ ಬಗ್ಗೆ ಡಾ ಅಂಬೇಡ್ಕರ್ ಅವರು ಎಸ್ ನಿಜಲಿಂಗಪ್ಪನವರಿಗೆ ಹೇಳಿರುವ ಬಗ್ಗೆ ಪುಸ್ತಕಗಳಲ್ಲಿ ಉಲ್ಲೇಖವಿದೆ ಎಂದರು.

ಶಾಸಕ ಎಂ.ವೈ. ಪಾಟೀಲ್ ಮಾತನಾಡಿ, ಲಿಂಗಾಯತರಲ್ಲಿ ಒಗ್ಗಟ್ಟು ಇಲ್ಲ ಹಾಗಾಗಿ ನ್ಯಾಯಯುತವಾಗಿ ಸಿಗಬೇಕಾದ ಯಾವ ಅವಕಾಶಗಳು ಸಿಕ್ಕಿಲ್ಲ. ಆದರೂ ಕೂಡಾ ರಾಷ್ಟ್ರ ಹಾಗೂ ರಾಜ್ಯ ಸುಭದ್ರ ನಿರ್ಮಾಣದಲ್ಲಿ ಲಿಂಗಾಯತರ, ಲಿಂಗಾಯತ ಸ್ವಾಮಿಗಳ ಹಾಗೂ ಮಠ ಮಾನ್ಯಗಳ ಕೊಡುಗೆ ಅಪಾರವಾಗಿದೆ ಇದಕ್ಕೆ ಉದಾಹರಣೆ ಎಂದರೆ ಸಿದ್ದಗಂಗಾ ಹಾಗೂ ಸುತ್ತೂರು ಮಠಗಳು ಎಂದರು.

ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಆರ್ಟಿಕಲ್ 371 (ಜೆ) ಅಡಿಯಲ್ಲಿ ನೌಕರಿ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಸೌಲಭ್ಯ ಪಡೆದುಕೊಂಡವರಲ್ಲಿ ವೀರಶೈವ ಲಿಂಗಾಯತರೇ ಹೆಚ್ಚಿನ‌ ಸಂಖ್ಯೆಯಲ್ಲಿ ಇದ್ದಾರೆ ಎಂದರು.

ಆರ್.ಕೆ. ಹುಡಗಿ ಮಾತಮಾಡಿ‌, ಆರ್‌ಎಸ್‌ಎಸ್‌ ಹಾಗೂ‌ ಬಿಜೆಪಿ ಯಾವ ಕಾರಣಕ್ಕೂ ಲಿಂಗಾಯತರ ಪರವಾಗಿಲ್ಲ ಎಂದರು. ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ಕಲಬುರಗಿ ಕ್ಷೇತ್ರದ ಸೇವೆ ಮಾಡಲು ಒಂದು ಅವಕಾಶ ನೀಡಬೇಕು ಎಂದರು.

ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣು ಮೋದಿ, ಶಿವಾನಂದ್ ಪಾಟೀಲ ಮರತೂರು, ಬಸವರಾಜ ಭೀಮಳ್ಳಿ, ಶರಣಪ್ಪ ಮಟ್ಟೂರು, ಭಾಗನಗೌಡ, ನೀಲಕಂಠರಾವ ಮೂಲಗೆ, ಸಂಕನೂರು, ರಮೇಶ ಮರಗೋಳ, ಡಾ ಕಿರಣ್ ದೇಶಮುಖ್, ಪ್ರವೀಣ್ ಹರವಾಳ,‌ ಈರಣ್ಣ ಝಳಕಿ ಸೇರಿದಂತೆ ಹಲವರಿದ್ದರು.