ಸ್ವಾತಂತ್ರ‍್ಯ ತಂದುಕೊಟ್ಟ ಮಹನೀಯರ ಸ್ಮರಿಸೋಣ

| Published : Aug 16 2024, 12:53 AM IST

ಸಾರಾಂಶ

ಸ್ವಾತಂತ್ರ‍್ಯಕ್ಕಾಗಿ ದಶಕಗಳ ಕಾಲ ಹೋರಾಟ ಮಾಡಿ ಬ್ರಿಟೀಷರ ದಾಸ್ಯದಿಂದ ಬಿಡುಗಡೆಗೊಳಿಸಿ ನಮಗೆ ಸ್ವಾತಂತ್ರ‍್ಯ ತಂದುಕೊಟ್ಟು ಹುತಾತ್ಮರಾಗಿರುವ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಹಕಾರ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಸ್ವಾತಂತ್ರ‍್ಯಕ್ಕಾಗಿ ದಶಕಗಳ ಕಾಲ ಹೋರಾಟ ಮಾಡಿ ಬ್ರಿಟೀಷರ ದಾಸ್ಯದಿಂದ ಬಿಡುಗಡೆಗೊಳಿಸಿ ನಮಗೆ ಸ್ವಾತಂತ್ರ‍್ಯ ತಂದುಕೊಟ್ಟು ಹುತಾತ್ಮರಾಗಿರುವ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಹಕಾರ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಗುರುವಾರ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ನಮ್ಮ ರಾಷ್ಟ್ರದ ಎಲ್ಲಾ ವರ್ಗದ ಜನರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಅವರಲ್ಲಿ ಸ್ವಾತಂತ್ರ‍್ಯದ ಕಿಚ್ಚನ್ನು ಹತ್ತಿಸಿ, ಆ ಸ್ವಾತಂತ್ರ‍್ಯದ ಕಿಚ್ಚು ಜ್ವಾಲೆಯಾಗಿ ಇಡೀ ದೇಶದಲ್ಲಿಯೇ ಹರಡಿ ಸ್ವಾತಂತ್ರ‍್ಯ ತಂದು ಕೊಟ್ಟರು ಎಂದು ತಿಳಿಸಿದರು.

ನೆಹರೂ ಕೊಡುಗೆ ಅಪಾರ: ಜವಹರಲಾಲ್ ನೆಹರೂ ದೇಶಕ್ಕೆ ಕೊಟ್ಟಂತಹ ಆರ್ಥಿಕ ನೀತಿ, ಪಂಚವಾರ್ಷಿಕ ಯೋಜನೆಗಳು, ಹಾಗೆಯೇ ಸರ್ಕಾರದ ವತಿಯಿಂದ ಪ್ರಾರಂಭ ಮಾಡಿದಂತಹ ಕಾರ್ಖಾನೆಗಳು, ಉದ್ಯೋಗಗಳನ್ನು ಸೃಷ್ಟಿ ಮಾಡಿರುವುದರ ಜೊತೆಗೆ ದೇಶದ ಆರ್ಥಿಕತೆಯನ್ನು ಬೆಳೆಸಿದ ಕೀರ್ತಿ ಜವಹರಲಾಲ್ ನೆಹರೂ ಅವರಿಗೆ ಸಲ್ಲುತ್ತದೆ ಎಂದರು.

ಸ್ಮರಿಸುತ್ತೇನೆ: ವಿಶೇಷವಾಗಿ ಯಶೋಧರ ದಾಸಪ್ಪನವರು ಮದ್ಯಪಾನ ನಿಷೇಧ ಮಾಡುವಂತಹ ಹೋರಾಟದಲ್ಲಿ ಅಗ್ರಗಣ್ಯರಾಗಿದ್ದರು. ನಮ್ಮ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಷಯ, ಹಾಸನ ಜಿಲ್ಲೆಯ ಬಹಳಷ್ಟು ಮಹನೀಯರು ಸಮಾಜಕ್ಕೆ ತಮ್ಮನ್ನ ಅರ್ಪಣೆ ಮಾಡಿಕೊಂಡಿರುವ ಹುತ್ಮಾತ್ಮರನ್ನು ಸ್ಮರಿಸುತ್ತೇನೆ. ದೇಶದ ಒಳತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಏನೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಬಹುದಾಗಿದೆ. ಆ ಕಾರ್ಯಕ್ರಮಗಳನ್ನು ಜನಪರವಾಗಿ ರೂಪಿಸುವುದರ ಜೊತೆಗೆ ಜಾರಿಗೊಳಿಸುವ ಕೆಲಸವನ್ನು ಮಾಡುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದು ತಿಳಿಸಿದರು.

ಅನ್ನಭಾಗ್ಯ ಅಚ್ಚುಮೆಚ್ಚು: ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಿದ್ದು, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಎಲ್ಲಾ ಕಾರ್ಯಕ್ರಮಗಳನ್ನು ನಮ್ಮ ಜಿಲ್ಲೆಯಲ್ಲಿ ಬೇರೆ ಎಲ್ಲಾ ಜಿಲ್ಲೆಗಳಿಗಿಂತ ಮುಂಚೂಣಿಯಲ್ಲಿ ಜಾರಿ ಮಾಡಿದ್ದೇವೆ ಎಂದು ತಿಳಿಸಿದರಲ್ಲದೆ, ಈ ಕಾರ್ಯಕ್ರಮಗಳಲ್ಲಿ ಅನ್ನಭಾಗ್ಯ ನಮಗೆ ಅಚ್ಚುಮೆಚ್ಚಿನ ಕಾರ್ಯಕ್ರಮ. ನಮ್ಮ ರಾಜ್ಯದ ಯಾವುದೇ ಭಾಗದಲ್ಲಿ ಯಾರು ಕೂಡ ಹಸಿವಿನಿಂದ ಇರದಂತ ವಾತಾವರಣವನ್ನು ಸೃಷ್ಟಿಮಾಡಿದೆ ಎಂದು ತಿಳಿಸಿದರು.ದೇವರ ಕೃಪೆಯಿಂದ ಎಲ್ಲಾ ಜಲಾಶಯಗಳು ತುಂಬಿರುವುದು ಸಂತೋಷದ ಸಂಗತಿ. ಮುಂದಿನ ದಿನಗಳಲ್ಲಿ ರೈತಾಪಿ ವರ್ಗದವರು ಬೇಸಾಯದ ಕಾರ್ಯಕ್ರಮದಲ್ಲಿ ನೆಲೆಸಲ್ಲಿಕ್ಕೆ ಪೂರಕವಾಗಿ ಅನುಕೂಲವಾಗುತ್ತದೆ ಎಂದು ತಿಳಿಸಿದರು.ಸಹಕಾರ ಅಗತ್ಯ: ಕಳೆದ ಬಾರಿ ಹಾಸನಂಬೆ ಉತ್ಸವ ಬಹಳ ಅದ್ಧೂರಿಯಾಗಿ ನಡೆದಿದೆ. ಸರಿಸುಮಾರು 14 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಹಾಗೆ ಭಕ್ತರು ನೀಡಿರುವ ಕಾಣಿಕೆ ಹಿಂದಿನ ಎಲ್ಲ ವರ್ಷಗಳಲ್ಲಿಯೂ ಎರಡು ಕೋಟಿ ಆಸುಪಾಸಿನಲ್ಲಿ ಇರುತ್ತಿತ್ತು. ಕಳೆದ ಬಾರಿ ಪ್ರಪ್ರಥಮವಾಗಿ 9 ಕೋಟಿಯಷ್ಟು ಭಕ್ತರು ಕಾಣಿಕೆಯನ್ನು ಹಾಸನಾಂಬೆಯ ದರ್ಶನಕ್ಕೆ ಬಂದು ಅರ್ಪಿಸಿರುವುದಂತಹದ್ದು ಕೂಡ ಸಂತೋಷದ ಸಂಗತಿ. ಆಶ್ವೀಜ ಮಾಸದಲ್ಲಿ ದೇವಸ್ಥಾನದ ಬಾಗಿಲನ್ನು ತೆರೆಯುವಂತಹ ಪದ್ಧತಿ ಇದೆ. ಹಾಗೆಯೇ ಈ ಬಾರಿಯೂ ಹಾಸನಾಂಬೆ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ತಮ್ಮೆಲ್ಲರ ಸಹಕಾರ ಕೋರುತ್ತೇನೆ ಎಂದರು.

ಆದಷ್ಟು ಜಾಗ್ರತೆಯಿಂದ ಕೆಲಸಗಳನ್ನು ಮುಗಿಸುವುದರ ಜೊತೆಗೆ ಇನ್ನು ಹೆಚ್ಚು ಹೆಚ್ಚು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಸನ ಜಿಲ್ಲೆಗೆ ತರುವಂತಹ ಕೆಲಸವನ್ನು ಮಾಡುತ್ತೇವೆ ಎಂದ ಸಚಿವರು, ಹಾಸನದಲ್ಲಿ ರೈಲ್ವೆ ಮೇಲ್ಸೇತುವೆ ಕೆಲಸ ಕುಂಠಿತವಾಗಿದೆ. ಸೋಮಣ್ಣನವರು ಕೇಂದ್ರ ರಾಜ್ಯ ರೈಲ್ವೆ ಸಚಿವರಾಗಿ ಖಾತೆ ತೆಗೆದುಕೊಂಡ ನಂತರ ನಾನು ಅವರಿಗೆ ಪತ್ರವನ್ನು ಕೊಟ್ಟಿದ್ದೇನೆ. ಈ ನಿಟ್ಟಿನಲ್ಲಿ ಅವರು ಸಭೆಯನ್ನು ಕರೆದು ಇದರ ಬಗ್ಗೆ ಮತ್ತು ರಾಯದುರ್ಗ, ದಾವಣಗೆರೆ ರೈಲ್ವೆ ಕಾಮಗಾರಿಯನ್ನು ತ್ವರಿತಗೊಳಿಸುವಂತಹ ಕೆಲಸವನ್ನು ಮಾಡಿದ್ದಾರೆ. ಹಾಸನದ ಜನತೆಯ ಪರವಾಗಿ ಸೋಮಣ್ಣನವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಸರ್ಕಾರ ಏನೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಬಹುದು ಆದರೆ ಇಂದಿನ ಜನಸಂಖ್ಯೆ ಸ್ಫೋಟದಲ್ಲಿ ಯಾವುದೇ ಕಾರ್ಯಕ್ರಮಗಳು ಕೂಡ ಜನರಿಗೆ ಕಾಣುವಂತಹ ನಿಟ್ಟಿನಲ್ಲಿ ಆಗುತ್ತಿಲ್ಲ ಎಂದ ಸಚಿವರು, ಮಕ್ಕಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ಒದಗಿಸಿ ಸಮಾಜದ ಆಸ್ತಿಯಾನ್ನಾಗಿ ರೂಪಿಸಬೇಕು ಎಂದರು. ವಿದ್ಯೆ ಎನ್ನುವುದು ಸಾಧಕನ ಸ್ವತ್ತು. ಯಾರು ಶ್ರದ್ಧೆಯಿಂದ ವಿದ್ಯಾಭ್ಯಾಸವನ್ನು ಮಾಡುವಂತಹ ಪ್ರಯತ್ನ ಮಾಡುವವರಿಗೆ ಸರಸ್ವತಿ ಒಲಿಯುತ್ತಾಳೆ ಎಂದು ತಿಳಿಸಿದರು. ಮಕ್ಕಳು ಸಾಧನೆ ಮಾಡಲು ಗುರಿ ಇಟ್ಟುಕೊಳ್ಳಬೇಕು. ಹಾಸನ ಜಿಲ್ಲೆ ಪ್ರಧಾನಮಂತ್ರಿ ಕೊಟ್ಟಂತಹ ಜಿಲ್ಲೆ. ನಾನು ಕೂಡ ಆ ರೀತಿಯ ಸ್ಥಾನಮಾನಗಳಿಗೆ ಬರಬೇಕು ಎನ್ನುವ ರೀತಿಯಲ್ಲಿ ಮಕ್ಕಳು ಗುರಿಯನ್ನು ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಂಸದರಾದ ಶ್ರೇಯಸ್ ಪಟೇಲ್, ಶಾಸಕರಾದ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಎಸ್ಪಿ ಮಹಮ್ಮದ್ ಸುಜೀತಾ, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಮತ್ತಿತರರು ಉಪಸ್ಥಿತರಿದ್ದರು.

ಟಿಪ್ಪು ಸುಲ್ತಾನ್ ಕೂಡ ಒಬ್ಬ ಸ್ವಾತಂತ್ರ‍್ಯ ಹೋರಾಟಗಾರ: ಬ್ರಿಟೀಷರ ವಿರುದ್ಧ 4 ಯುದ್ಧಗಳನ್ನು ದೇಶದ ರಕ್ಷಣೆಗೋಸ್ಕರ ಹೋರಾಡಿದಂತಹ ಟಿಪ್ಪು ಸುಲ್ತಾನ್ ಕೂಡ ಒಬ್ಬ ಸ್ವಾತಂತ್ರ‍್ಯ ಹೋರಾಟಗಾರ. ಟಿಪ್ಪು ಸುಲ್ತಾನ್ ಸೋತಾಗ ಯುದ್ಧದ ಕರೆ ನೀಡಲು ಬ್ರಿಟೀಷರು ಒತ್ತಾಯ ಮಾಡುತ್ತಾರೆ. ಕೊಡಲಿಕ್ಕೆ ಹಣವಿಲ್ಲದೆ ತಮ್ಮ ಎರಡು ಮಕ್ಕಳನ್ನು ಅಡ ಇಡುತ್ತಾರೆ. ಆರು ತಿಂಗಳ ಕಾಲ ಬ್ರಿಟೀಷರ ಕಾರಾಗೃಹದಲ್ಲಿ ಮಕ್ಕಳು ಇರುತ್ತಾರೆ. ಆನಂತರ ಹಣವನ್ನು ಪಾವತಿ ಮಾಡಿ ಮಕ್ಕಳನ್ನು ಬಿಡಿಸಿಕೊಂಡು ಬರುತ್ತಾರೆ. ಈ ರೀತಿಯ ಹೋರಾಟಗಾರರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದು ಸಚಿವ ರಾಜಣ್ಣ ಹೇಳಿದರು.