ಸಾರಾಂಶ
ಕನ್ನಡಪ್ರಭ ವಾರ್ತೆ ಹುನಗುಂದ
ಅನೇಕ ಮಹನೀಯರು ತ್ಯಾಗ ಮತ್ತು ಬಲಿದಾನ ಮತ್ತು ಹೋರಾಟದ ಫಲದ ಪರಿಶ್ರಮದ ಮೂಲಕ ದೇಶಕ್ಕೆ ದೊರೆತ ಸ್ವಾತಂತ್ರ್ಯವನ್ನು ನಾವೆಲ್ಲರೂ ಗೌರವಿಸಿ ಅಭಿಮಾನದಿಂದ ಒಪ್ಪಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಪಟ್ಟಣದ ಟಿಸಿಎಚ್ ಕಾಲೇಜ ಆವರಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜ.26 ಮತ್ತು ಆ.15ರಂದು ಮಾತ್ರ ದೇಶವನ್ನು ಸಂಭ್ರಮದಿಂದ ಆಚರಿಸಿ ಮಲಗಿದರೇ ಸಾಲದು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹುತಾತ್ಮರನ್ನು ದಿಗ್ಗಜರನ್ನು ಸ್ಮರಿಸುತ್ತ ಅವರಿಗೆ ಅನಂತ ಕೋಟಿ ಧನ್ಯವಾದಗಳನ್ನು ಸದಾ ಸಲ್ಲಿಸಬೇಕು. ನಮ್ಮ ದೇಶದ ಪವಿತ್ರವಾದ ಗ್ರಂಥ ಸಂವಿಧಾನವನ್ನು ಪ್ರಜಾಪ್ರಭುತ್ವದ ವ್ಯವಸ್ಥೆ ಜಾತ್ಯಾತೀತ ತಳಹದಿಯ ಮೇಲೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಎಂಬಂತೆ ನಾವೆಲ್ಲರೂ ಸಂತೋಷ ಮತ್ತು ಅರ್ಪಿಸಿಕೊಂಡು ದೇಶದ ಪ್ರಜೆಗಳಾಗಿದ್ದೇವೆ. ಇದು ಉಚಿತ ಸ್ವಾತಂತ್ರ್ಯ ಅಲ್ಲ ದಿಗ್ಗಜರು ನೀಡಿದ ಕೊಡುಗೆಯಾಗಿದೆ ಎಂದರು.
ತಹಸೀಲ್ದಾರ್ ನಿಂಗಪ್ಪ ಬಿರಾದಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿಶ್ವಕ್ಕೆ ಮಾದರಿಯಾದ ನಮ್ಮ ದೇಶದ ಸಂವಿಧಾನವನ್ನು ನಮಗೆ ನಾವೇ ಅಂಗೀಕಾರವಾಗಿ ಅರ್ಪಿಸಿಕೊಂಡು ದೇಶದ ಪ್ರಜೆಗಳಾಗಿದ್ದೇವೆ. ಜ.26 ನಮ್ಮ ದೇಶದ ಆಡಳಿತವನ್ನು ಸುಸ್ಥಿಗೆಗೆ ತಂದಂತ ದಿನವಾಗಿದೆ ಎಂದರು.
ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಬಡ್ಡಿ ಕ್ರೀಡಾಪಟು ಧನ್ನೂರಿನ ಚಂದ್ರಿಕಾ ನಾಗಬೇನಾಳ, ಖೋಖೋ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಮಂಜುನಾಥ ಮುರಟಗಿ ಮತ್ತು ಪ್ರವೀಣ ಭೋವಿ ಅವರುಗಳನ್ನು ಸತ್ಕರಿಸಿ ಗೌರವಿಸಲಾಯಿತು. ಪೊಲೀಸ್ ಪಡೆ, ಎನ್‌ಸಿಸಿ ಮತ್ತು ಸ್ಕೌಟ್ ಆ್ಯಂಡ್ ಗೈಡ್ಸ್ ತಂಡಗಳಿಂದ ಗೌರವ ವಂದನೆ ನಡೆಯಿತು.ಪೊಲೀಸ್ ಉಪಾಧೀಕ್ಷಕ ವಿಶ್ವನಾಥರಾವ್ ಕುಲಕರ್ಣಿ, ತಾಪಂ ಇಒ ಮುರಳೀಧರ ದೇಶಪಾಂಡೆ, ಸಿಪಿಐ ಸುನೀಲ ಸವದಿ, ಪಿಎಸೈ ಪ್ರಕಾಶ.ಡಿ, ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಉಪಾಧ್ಯಕ್ಷೆ ರಾಜಮ್ಮ ಬಾದಾಮಿ, ಸದಸ್ಯ ಶಾಂತಾ ಮೇಲಿನಮನಿ, ಮೈನು ಧನ್ನೂರ, ಬಸವರಾಜ ಗೊಣ್ಣಾಗರ, ಶೇಖರಪ್ಪ ಬಾದವಾಡಗಿ, ಮಹಾಂತಪ್ಪ ಪಲ್ಲೇದ, ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಹೊಸೂರ, ಸಂಗಪ್ಪ ಹೂಲಗೇರಿ ಇತರರು ಇದ್ದರು. ಬಿಇಒ ಜಾಸ್ಮಿನ್ ಕಿಲ್ಲೇದಾರ ಸ್ವಾಗತಿಸಿದರು. ಸಂಗಮೇಶ ಹೊದ್ಲೂರ ನಿರೂಪಿಸಿದರು. ಎಸ್.ಟಿ.ಪೈಲ್ ವಂದಿಸಿದರು.ದೇಶದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ದೇಶದ ಪ್ರಜೆಗಳು ಹೌದೋ ಅಲ್ಲೊ ತಿಳಿಯದು. ಕಳೆದ 76 ವರ್ಷಗಳಿಂದ ಸಂವಿಧಾನದ ಅಡಿಯಲ್ಲಿ ಸ್ವಾತಂತ್ರವನ್ನು ಅನುಭವಿಸಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಬಗ್ಗೆ ವಿರೋಧವಾಗಿ ಮಾತಾಡುವವರು ದೇಶದ ಪ್ರಜೆಗಳೊ ಅಥವಾ ಬೇರೆ ದೇಶದ ಪ್ರಜೆಗಳೊ ತಿಳಿಯದು. ಸಂವಿಧಾನ ಬದಲಿಸುವ ವಿಚಾರವಾದಿಗಳನ್ನು ನಾವು ಖಂಡಿಸಿ ವಿರೋಧಿಸುವುದು ನಮ್ಮೆಲ್ಲರ ಕರ್ತವ್ಯ.
-ವಿಜಯಾನಂದ ಕಾಶಪ್ಪನವರ, ಶಾಸಕರು ಹುನಗುಂದ.