ಜಾತಿ ಹೆಸರಿನಲ್ಲಿ ಸಮಾಜ ವಿಭಜನೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಎಲ್ಲರೂ ಬೌದ್ಧ ಧರ್ಮವನ್ನು ಅನುಸರಿಸುವ ಮೂಲಕ ಬಾಬಾ ಸಾಹೇಬರು ಸಾರಿದ ಸಮಾನತೆ ಮತ್ತು ಸಹೋದರತ್ವದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ಮಹಾ ಪುರುಷರು ಮುನ್ನಡೆಸಿದ ಸಾಮಾಜಿಕ ಕ್ರಾಂತಿಯನ್ನು ಮುಂದುವರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಜಾತಿ ನಿರ್ಮೂಲನೆಗೆ ಶ್ರಮಿಸುವ ಮೂಲಕ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ಭಾರತೀಯ ಬೌದ್ಧ ಮಹಾಸಭಾ ಯುವ ಘಟಕದ ಅಧ್ಯಕ್ಷ ದರ್ಶನ್ ಬಿ. ಸೋಮಶೇಖರ್ ಕರೆ ನೀಡಿದರು.

ಸಮೀಪದ ಧನಗೂರು, ಡಿ.ಹಲಸಹಳ್ಳಿ, ದಡಮಹಳ್ಳಿ, ಬೆಳತೂರು, ಹುಸ್ಕೂರು, ಅಗಸನಪುರ, ಹಾಡ್ಲಿ, ಅಂತರವಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚಾಮರಾಜನಗರ ದಲ್ಲಿ ಅ.24, 25 ರಂದು ನಡೆಯಲಿರಯವ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನದ ಅಂಗವಾಗಿ ಸಂಚರಿಸುತ್ತಿರುವ ‘ಧಮ್ಮ ಪಯಣ’ ಪ್ರಚಾರ ರಥದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನದ ಆಶಯದಂತೆ ಪರಿಶಿಷ್ಟ ಜಾತಿಗಳ ಜನರಿಗೆ ವಿವಿಧ ಅವಕಾಶಗಳನ್ನು ಕಲ್ಪಿಸಲಾಗಿದೆ. ಆದರೆ, ಜಾತಿ ಹೆಸರಿನಲ್ಲಿ ಸಮಾಜ ವಿಭಜನೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಎಲ್ಲರೂ ಬೌದ್ಧ ಧರ್ಮವನ್ನು ಅನುಸರಿಸುವ ಮೂಲಕ ಬಾಬಾ ಸಾಹೇಬರು ಸಾರಿದ ಸಮಾನತೆ ಮತ್ತು ಸಹೋದರತ್ವದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಅ.24 ಮತ್ತು 25 ರಂದು ಎರಡು ದಿನಗಳ ಕಾಲ ಚಾಮರಾಜನಗರ ಜಿಲ್ಲಾ ಕೇಂದ್ರದ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನ ಆಯೋಜಿಸಲಾಗಿದೆ. ಇದರ ಅಂಗವಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ‘ಧಮ್ಮ ಪಯಣ’ ಪ್ರಚಾರ ರಥ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಐತಿಹಾಸಿಕ ಬೌದ್ಧ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಬೌದ್ಧ ಧರ್ಮದ ತತ್ವಗಳನ್ನು ಜನರಿಗೆ ತಲುಪಿಸುವ ಮೂಲಕ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಿವೃತ್ತ ಪ್ರಾಧ್ಯಾಪಕ ರಂಗಸ್ವಾಮಿ ಮಾತನಾಡಿ, ಬೌದ್ಧ ಧರ್ಮವು ಜಗತ್ತಿಗೆ ಸಮಾನತೆ, ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ಸಾರಿದೆ. ಶೋಷಿತ ಸಮುದಾಯದ ಜನರು ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಬೌದ್ಧ ಧರ್ಮವನ್ನು ಅನುಸರಿಸಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ಈ ವೇಳೆ ಗ್ರಾಮದ ಮುಖಂಡರಾದ ಎ.ಬಿ.ಕುಮಾರ, ಪಿ. ಶಿವಸಿದ್ದಯ್ಯ, ಎ.ಬಿ. ನಾಗಣ್ಣ, ಎ.ಎಸ್. ಶ್ರೀಧರ, ಎ.ಬಿ.ರವಿ, ಎ.ಎಂ.ರಮೇಶ್, ಎ.ಎಸ್.ಸಿದ್ದರಾಜು, ಎ.ಡಿ.ಮಂಜು, ಎ.ಸಿ.ದೇವರಾಜು, ಸಂದೇಶ್ ಮಳವಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಚಾರ ರಥಕ್ಕೆ ಅದ್ಧೂರಿ ಸ್ವಾಗತ:

ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದ ಪ್ರಚಾರ ರಥವು ಗ್ರಾಮಗಳಿಗೆ ಆಗಮಿಸಿದಾಗ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ಗ್ರಾಮಗಳಲ್ಲಿ ತಳಿರು ತೋರಣಗಳಿಂದ ಅಲಂಕರಿಸಿ ರಥವನ್ನು ಬರಮಾಡಿಕೊಂಡರು. ಮಹಿಳೆಯರು ಮತ್ತು ಮಕ್ಕಳು ಭಗವಾನ್ ಬುದ್ಧ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಬೆಲ್ಲದ ಆರತಿ ಬೆಳಗಿ ಗೌರವ ಸಲ್ಲಿಸಿದರು.