ಸಾರಾಂಶ
ರೋಣ: ಪರಸ್ಪರ ಭಾತೃತ್ವತೆ, ಸಾಮರಸ್ಯತೆ, ಸಮಾನತೆ ಸೌಹಾರ್ಧತೆಯಿಂದ ಜೀವನ ಸಾಗಿಬೇಕು. ಈ ನಿಟ್ಟಿನಲ್ಲಿ ಜಾರಿಯಾದ ಸಂವಿಧಾನದ ಆಶಯ ನಾವೆಲ್ಲರೂ ಎತ್ತಿ ಹಿಡಿದು ಗೌರವಿಸಬೇಕು. ಸಂವಿಧಾನದಡಿ ನಿತ್ಯ ಜೀವನ ಸಾಗಿಸಬೇಕು ಅಂದಾಗ ಗಣರಾಜ್ಯೋತ್ಸವ ಆಚರಣೆ ಅರ್ಥಪೂರ್ಣವಾಗುವುದು ಎಂದು ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ಹೇಳಿದರು.
ಅವರು ಭಾನುವಾರ ರಾಜೀವಗಾಂಧಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಶ್ರೀಗುರುಪಾದೇಶ್ವರ ಐಟಿಐ ಕಾಲೇಜ್ ಹಾಗೂ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜರಗಿದ 76 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ನಮ್ಮ ದೇಶ ವೈವಿದ್ಯತೆಯಿಂದ ಕೂಡಿದೆ, ನಾನಾ ರೀತಿಯ ಜಾತಿ, ಪಂಥ, ಧರ್ಮ,ಪಂಗಡಗಳಿವೆ. ಆದರೆ ಎಲ್ಲರಿಗೂ ಒಂದೇ ರೀತಿಯಲ್ಲಿ ಬದುಕುವ, ಸಮಾನತೆಯಿಂದ ಜೀವನ ಸಾಗಿಸುವ ಹಕ್ಕನ್ನು,ಸಾಮರಸ್ಯತೆ ಬದುಕನ್ನು ಸಾಗಿಸುವಲ್ಲಿ,ನಾವೆಲ್ಲರೂ ಭಾರತೀಯರು, ಭಾರತಾಂಭೆಯ ಮಕ್ಕಳು ಎಂಬ ಮನೋಭಾವ ಸಂವಿಧಾನ ತುಂಬಿದೆ. ಸಂವಿಧಾನ ಗೌರವಿಸಬೇಕು. ಸಂವಿಧಾನವೇ ಪ್ರಜೆಗಳ ಶಕ್ತಿಯಾಗಿದ್ದು, ಇದರ ಉಳಿವಿಗೆ ಎಲ್ಲರು ಶ್ರಮಿಸಬೇಕು ಎಂದರು.
ಬಿಎಎಂಎಸ್ ಸಾಧಕ ವಿದ್ಯಾರ್ಥಿ,ಸಿಬ್ಬಂದಿ ಹಾಗೂ ಐಟಿಐ, ಕಿಡ್ ಜೀ ಶಾಲಾ ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಅಕ್ಷಯ .ಐ. ಪಾಟೀಲ, ಶಶಿಕಲಾ ಪಾಟೀಲ, ಅಶ್ವಿನಿ ಪಾಟೀಲ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಬಸವರಾಜ ನವಲಗುಂದ, ಯೂಶೂಫ ಇಟಗಿ, ಕೆ.ಬಿ. ಹರ್ಲಾಪೂರ, ರಮಾಕಾಂತ ಕಮತಗಿ, ಡಾ.ಐ.ಬಿ.ಕೊಟ್ಟೂರಶೆಟ್ಟರ್, ಪಿ.ಎಚ್. ತೋಟಗಂಟಿ, ವೈ.ಎನ್. ಪಾಪನ್ನವರ, ಎಸ್.ವೈ. ಬಂಟನೂರ ಮುಂತಾದವರು ಉಪಸ್ಥಿತರಿದ್ದರು. ಎಸ್.ಐ. ಉಳ್ಳಾಗಡ್ಡಿ ನಿರೂಪಿಸಿದರು. ಪ್ರಾಚಾರ್ಯ ಸುಧಾ ದಾನಪ್ಪಗೌಡ್ರ ಸ್ವಾಗತಿಸಿದರು. ಆರ್.ಎಫ್. ನದಾಫ ವಂದಿಸಿದರು.