ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸೋಣ: ಸುಬುಧೇಂದ್ರ ತೀರ್ಥ ಶ್ರೀ

| Published : Apr 24 2025, 12:30 AM IST

ಸಾರಾಂಶ

ಸನಾತನ ಪರಂಪರೆಗೆ ಭಗವಂತ ವಿಶೇಷ ಕೊಡುಗೆಯಾಗಿ ಸಾಧು-ಸಂತರನ್ನು ಕೊಟ್ಟಿದ್ದಾನೆ. ಇವರು ಸ್ವಾರ್ಥ ಬಯಸದೇ, ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸುವ ಜತೆಗೆ ಇಡೀ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ.

ಹುಬ್ಬಳ್ಳಿ: ಸನಾತನ ಧರ್ಮ ಭವ್ಯ ಹಿಂದು ಮತ್ತು ಭಾರತೀಯ ಪರಂಪರೆಯಾಗಿದ್ದು, ನಮ್ಮ ಸಂಸ್ಕೃತಿ, ಪರಂಪರೆಯನ್ನು ಬೆಳೆಸಿಕೊಂಡು ಹೋಗಬೇಕು. ಮಕ್ಕಳಲ್ಲಿ ಸನಾತನ ಧರ್ಮದ ಆಚಾರ- ವಿಚಾರ ಸಂಸ್ಕೃತಿ ಬೆಳೆಸಬೇಕು ಎಂದು ಮಂತ್ರಾಲಯದ ಸುಬುಧೇಂದ್ರ ತೀರ್ಥ ಶ್ರೀಗಳು ಹೇಳಿದರು.

ನಗರದ ನೆಹರು ಮೈದಾನದಲ್ಲಿ ಬುಧವಾರ ನಡೆದ ತತ್ವದರ್ಶನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಸನಾತನ ಪರಂಪರೆಗೆ ಭಗವಂತ ವಿಶೇಷ ಕೊಡುಗೆಯಾಗಿ ಸಾಧು-ಸಂತರನ್ನು ಕೊಟ್ಟಿದ್ದಾನೆ. ಇವರು ಸ್ವಾರ್ಥ ಬಯಸದೇ, ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸುವ ಜತೆಗೆ ಇಡೀ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಒಡಕು ಮೂಡಿಸುವವರು ಸ್ವಾಮೀಜಿಗಳು ಆಗಲ್ಲ. ಈ ನಿಟ್ಟಿನಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ತಪಸ್ಸು, ಸಾಧನೆಯಲ್ಲಿ ವಿಶ್ವಕ್ಕೆ ಧಾರೆ ಎರೆದಿದ್ದಾರೆ. ಹೀಗಾಗಿ ಎಲ್ಲ ಸಮುದಾಯಗಳು ಅವರ ಅನುಗ್ರಹಕ್ಕೆ ಪಾತ್ರರಾಗಿದ್ದು, ನಿಜವಾದ ವಿಶ್ವಗುರುವಾಗಿ ಶ್ರೀ ರಾಘವೇಂದ್ರ ಶ್ರೀಗಳು ಹೊರಹೊಮ್ಮಿದ್ದಾರೆ ಎಂದರು.

ಗುರು ರಾಘವೇಂದ್ರ ಶ್ರೀಗಳ ಮತ್ತು ಸೋದೆಯ ಶ್ರೀ ವಾದಿರಾಜ ಯತಿವರೇಣ್ಯರ ಭವ್ಯ ಬೃಂದಾವನವನ್ನು ಒಟ್ಟಿಗೆ ನೋಡುವ ಆಶಯ ಹುಬ್ಬಳ್ಳಿ ಭಕ್ತರದ್ದಾಗಿತ್ತು. ಹೀಗಾಗಿ ಶ್ರೀ ರಾಘವೇಂದ್ರ ಯತಿಗಳ ಮತ್ತು ಶ್ರೀ ವಾದಿರಾಜ ಯತಿವರೇಣ್ಯರ ತದ್ರೂಪ ಬೃಂದಾವನವನ್ನು ನೆಹರು ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಅದು ಮಳೆಯಿಂದ ಸಾಧ್ಯವಾಗಿಲ್ಲವಾದರೂ, ಇದಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಮುಂದೊಂದು ದಿನ ಮತ್ತೆ ಭವ್ಯ ಕಾರ್ಯಕ್ರಮ ಆಯೋಜನೆ ಮಾಡೋಣ ಎಂದರು.

ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಗಳು ಮಾತನಾಡಿ, ಗುರುದ್ವಯರ ಬೃಂದಾವನವನ್ನು ಒಟ್ಟಿಗೆ ಸ್ಥಾಪನೆ ಮಾಡಿದ ದಿನವೇ ಮಳೆ ಸುರಿದಿದೆ. ಶೋಭಾಯಾತ್ರೆಯ ಮಧ್ಯದಲ್ಲಿ ಮಳೆ ಆರಂಭವಾಗಿದ್ದು, ಶುಭ ಶಕುನ ಎಂದರು.

ಧರ್ಮಾತೀತವಾಗಿ, ಮತಾತೀತವಾಗಿ ಯಾರ್‍ಯಾರು ಭಕ್ತಿಯಿಂದ ಶ್ರೀಗಳ ಪಾದಸ್ಪರ್ಶಿಸುತ್ತಾರೋ ಅವರಿಗೆ ಶ್ರೀ ವಾದಿರಾಜರು ಮತ್ತು ಶ್ರೀ ರಾಘವೇಂದ್ರ ಸ್ವಾಮೀಜಿಗಳು ಅನುಗ್ರಹಿಸಿದ್ದಾರೆ. ಸಾಧು ಸಂತರಾದ ಶ್ರೀ ವಾದಿರಾಜ ಹಾಗೂ ಮಂತ್ರಾಲಯ ರಾಘವೇಂದ್ರ ಸ್ವಾಮೀಜಿಗಳ ಬೃಂದಾವನ ಪ್ರತಿಕೃತಿ ನಿರ್ಮಾಣ ಮಾಡುವ ಮೂಲಕ ಐತಿಹಾಸಿಕ ಗಳಿಗೆ ನಿರ್ಮಾಣವಾಗಿದೆ. ಈ ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಶ್ರೀವಾದಿರಾಜರ ಮತ್ತು ಶ್ರೀ ರಾಘವೇಂದ್ರ ಸ್ವಾಮೀಜಿಗಳ ಅನೇಕ ಭಕ್ತರಿದ್ದಾರೆ. ಅವರಿಗೆ ಒಂದೇ ವೇದಿಕೆಯಲ್ಲಿ ಇಬ್ಬರೂ ಗುರುಗಳ ದರ್ಶನ ಭಾಗ್ಯ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾಸ್ಟರ್‌ ಆನಂದ ಅವರ ನಾಗಾ ಫ್ಯಾಮಲಿ ಯೂಟ್ಯೂಬ್‌ ಚಾಲನೆ ಬಿಡುಗಡೆ ಮಾಡಲಾಯಿತು. ಗೋವಿಂದ ಜೋಶಿ, ಚಿತ್ರನಟ ಅಜಯರಾವ್‌, ಮಾಸ್ಟರ್‌ ಆನಂದ, ಮಹೇಂದ್ರ ಸಿಂಘಿ, ಗುಂಡಪ್ಪ ವಾಳ್ವೇಕರ, ಪಂ. ಶ್ರೀ ಹರಿ ಆಚಾರ್ಯ ವಾಳ್ವೇಕರ, ಗೋವಿಂದ ಮೈಸೂರು, ಮಂಜುನಾಥ ಹರ್ಲಾಪುರ, ರಾಘವೇಂದ್ರ ಆಚಾರ್ಯ, ನಾಗರಾಜ ಕಟ್ಟಿ, ಜಯತೀರ್ಥ ಕಟ್ಟಿ, ಜಿ.ಆರ್‌. ಮೈಸೂರು, ವಾದಿರಾಜ ಕುಲಕರ್ಣಿ, ದತ್ತಮೂರ್ತಿ ಕುಲಕರ್ಣಿ, ಗಣೇಶ ಶೇಟ್‌, ಮನೋಹರ ಪರ್ವತಿ ಸೇರಿದಂತೆ ಹಲವರಿದ್ದರು.

ಪಹಲ್ಗಾಮ್ ಘಟನೆಗೆ ಖಂಡನೆ: ಇದೇ ವೇ‍ಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಉಭಯ ಶ್ರೀಗಳು ಪಹಲ್ಗಾಮ್‌ ಘಟನೆಯನ್ನು ಖಂಡಿಸಿದರು. ಇಂತಹ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸಲು ಭಾರತೀಯರು ಒಂದಾಗಬೇಕಿದೆ ಎಂದರು. ಈ ವೇಳೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಳೆಯಿಂದ ಕಾರ್ಯಕ್ರಮಕ್ಕೆ ತೊಂದರೆ: ಕಾರ್ಯಕ್ರಮಕ್ಕೆ ಲಕ್ಷಾಂತರ ವೆಚ್ಚ ಮಾಡಿ ವೇದಿಕೆ, ಉಭಯ ಶ್ರೀಗಳ ಪ್ರತಿಕೃತಿ ಥರ್ಮಾಕೋಲ್‌ನಲ್ಲಿ ನಿರ್ಮಿಸಲಾಗಿತ್ತು. ಸಂಜೆ ವೇಳೆ ಸುರಿದ ಮಳೆ ಕಾರ್ಯಕ್ರಮಕ್ಕೆ ಅಡ್ಡಿಯುಂಟು ಮಾಡಿತು. ಬಳಿಕ ಕ್ರೀಡಾಂಗಣದ ಮೆಟ್ಟಿಲುಗಳಲ್ಲೇ ಕಾರ್ಯಕ್ರಮ ನಡೆಸಲಾಯಿತು.

ಶೋಭಾಯಾತ್ರೆ: ಇಲ್ಲಿಯ ತೊರವಿಗಲ್ಲಿಯ ಶ್ರೀ ರಾಯರ ಮಠದಿಂದ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರ ಮತ್ತು ಸೋದೆಯ ವಿಶ್ವವಲ್ಲಭ ತೀರ್ಥರ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ತೊರವಿಗಲ್ಲಿ, ಶಾ ಬಜಾರ್‌, ದುರ್ಗದಬೈಲ್‌, ಬ್ರಾಡವೇ, ಕೊಪ್ಪೀಕರ ರಸ್ತೆಗೆ ತಲುಪುತ್ತಿದ್ದಂತೆ ಆಲಿಕಲ್ಲು ಮಳೆ ಅಡ್ಡಿಯಾಯಿತು. ಅಲ್ಲಿಂದ ಗುರುದ್ವಯರು ವಾಹನದ ಮೂಲಕ ನೆಹರೂ ಮೈದಾನ ತಲುಪಿದರು. ಕೊಪ್ಪೀಕರ ರಸ್ತೆಯ ವರೆಗೆ ನಡೆದ ಶೋಭಾಯಾತ್ರೆಯುದ್ದಕ್ಕೂ ವಿವಿಧ ಭಜನಾ ಮಂಡಳಿಗಳಿಂದ ಸಂಕೀರ್ತನೆ, ಭಜನೆಯೊಂದಿಗೆ ಮಹಿಳೆಯರು ಕೋಲಾಟ ಆಡುತ್ತ ಸಾಗಿದರು. ವೇದ ಘೋಷಗಳ ನಡುವೆ ಡೊಳ್ಳು, ಢೋಲ್‌ ತಾಶಾ, ಜಗ್ಗಲಿಗೆ, ಚಂಡೆ ವಾದನಗಳು ಶೋಭಾಯಾತ್ರೆಗೆ ಮೆರಗು ನೀಡಿದವು.