ಹಿರಿಯರು ಬೆಳೆಸಿದ ಕಲೆ ಉಳಿಸೋಣ: ಸಚಿವ ಮಧು ಬಂಗಾರಪ್ಪ ಕರೆ

| Published : Oct 05 2024, 01:31 AM IST

ಸಾರಾಂಶ

ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸೊರಬ

ಕಲೆಗಳ ತವರಾಗಿರುವ ತಾಲೂಕಿನ ಕಲಾವಿದರು ತಮ್ಮದೇ ಛಾಪು ಮೂಡಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸೊರಬವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದಿ ದ್ದಾರೆ. ಹಾಗಾಗಿ ನಮ್ಮ ಹಿರಿಯರು ಕಲಿತು, ಬೆಳೆಸಿ, ಉಳಿಸಿದ ಕಲಾಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಗುರುವಾರ ರಾತ್ರಿ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಲ್ಲಿ ದಸರಾ ಉತ್ಸವ ಸಮಿತಿ, ತಾಲೂಕು ಆಡಳಿತ, ಪುರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ೧೬ನೇ ವರ್ಷದ ಸಾರ್ವಜನಿಕ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಬ್-ಹರಿದಿನಗಳು ಭಕ್ತಿಯ ವಾತಾವರಣ ಸೃಷ್ಟಿಸುತ್ತವೆ. ಪ್ರಸ್ತುತ ದಿನಮಾನಗಳಲ್ಲಿ ಎಲ್ಲಾ ಹಬ್ಬಗಳನ್ನು ಎಲ್ಲಾ ಸಮಾಜದವರು ಒಗ್ಗೂಡಿ ಆಚರಿಸಬೇಕು. ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಮತ್ತು ಸಹಬಾಳ್ವೆಯ ಬದುಕು ಕಂಡುಕೊಳ್ಳಬಹುದು ಎಂದರು.

ತಾಲೂಕು ಸಾಂಸ್ಕೃತಿಕ ಪರಂಪರೆ ಹೊಂದಿ ಶ್ರೀಮಂತವಾಗಿದ್ದರೂ ಸಾರ್ವಜನಿಕ ದಸರಾ ಉತ್ಸವ ಆಚರಣೆಗೆ ಅನುದಾನದ ಕೊರತೆ ಇರುವುದಾಗಿ ತಿಳಿದು ಬಂದಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ತಾವು ಶಿಕ್ಷಣ ಸಚಿವರಾದ ಬಳಿಕ ಇಲಾಖೆಯಲ್ಲಿ ಅನೇಕ ಸುಧಾರಣೆಗಳನ್ನು ತರಲು ಪ್ರಯತ್ನಿಸಲಾಗುತ್ತಿದೆ. ರಾಜ್ಯದಲ್ಲಿ ಶಿಕ್ಷಕರ ಕೊರತೆ ನೀಗಿಸಲು ೧೨.೫ ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡಲಾಗುವುದು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಲು ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು ನಮ್ಮ ಗುರಿಯಾಗಿದೆ ಎಂದರು. ಅಲ್ಲದೇ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಯತ್ನಿಸಲಾಗುತ್ತಿದೆ. ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ದೊರೆಯಲಿ ಎನ್ನುವುದು ತಮ್ಮ ಉದ್ದೇಶವಾಗಿದ್ದು, ಅಜೀಂ ಪ್ರೇಮ್‌ಜಿ ಫೌಂಡೇಷನ್‌ನವರು ೧೫೯೧ ಕೋಟಿ ರು. ನೀಡುವ ಮೂಲಕ ಮಕ್ಕಳಿಗೆ ಪ್ರತಿದಿನ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ಮತ್ತು ಚಿಕ್ಕಿ ಮುಂದಾಗಿರುವುದು ಸಂತಸದ ವಿಷಯ ವಾಗಿದೆ ಎಂದ ಅವರು, ಮುಖ್ಯ ಮಂತ್ರಿಗಳು ತಮಗೆ ನೀಡಿರುವ ಶಿಕ್ಷಣ ಸಚಿವ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿಭಾಯಿಸುತ್ತಿರುವ ಬಗ್ಗೆ ತಮ್ಮಗೆ ತೃಪ್ತಿ ಇದೆ ಎಂದರು.

ಸಾನಿಧ್ಯ ವಹಿಸಿದ್ದ ಜಡೆ ಹಿರೇಮಠ ಮತ್ತು ಸೊರಬ ಕಾನುಕೇರಿ ಮಠ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ನವರಾತ್ರಿ ಹಬ್ಬದ ಸಮಯದಲ್ಲಿ ನವದುರ್ಗೆಯರನ್ನು ಪೂಜಿಸುವುದು ಭಾರತೀಯ ಪರಂಪರೆಯಲ್ಲಿ ಮಹತ್ವವನ್ನು ಪಡೆದಿದೆ. ಮನುಷ್ಯನ ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನವನ್ನು ತುಂಬಲು ಹಬ್ಬಗಳು ಪೂರಕವಾಗಿವೆ ಎಂದರು.

ದಸರಾ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪರಶುರಾಮ ಸಣ್ಣಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ದಸರಾ ಉತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಮೇಸ್ತಿç ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಮಂಜುಳಾ ಹೆಗಡಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ದಸರಾ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ಎನ್.ಷಣ್ಮುಖಾಚಾರ್, ಸಮಿತಿಯ ಸುಜಾತಾ ಜೋತಾಡಿ, ಹೆಚ್. ಗಣಪತಿ, ಎಂ.ಡಿ. ಶೇಖರ್, ಕೆ.ವಿ.ಗೌಡ, ಪುರಸಭೆ ಸದಸ್ಯರಾದ ಈರೇಶ್ ಮೇಸ್ತ್ರಿ, ಎಂ.ಡಿ. ಉಮೇಶ್, ಮಧುರಾಯ್ ಜಿ. ಶೇಟ್, ಯು. ನಟರಾಜ್ ಸೇರಿದಂತೆ ದಸರಾ ಉತ್ಸವ ಸಮಿತಿಯ ವಿವಿಧ ಘಟಕಗಳ ಪದಾಧಿಕಾರಿಗಳು ಸೇರಿದಂತೆ ಮತ್ತಿತರರಿದ್ದರು. --