ದಕ್ಕೆ ಬಂದಾಗ ಟೊಂಕಕಟ್ಟಿ ನಿಲ್ಲೋಣ

| Published : Feb 07 2024, 01:52 AM IST / Updated: Feb 07 2024, 02:37 PM IST

ಸಾರಾಂಶ

ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ವಿಜಯಪುರ, ತಾಲೂಕಾಡಳಿತ ಹಾಗೂ ಪಟ್ಟಣ ಪಂಚಾಯತಿ ಕೊಲ್ಹಾರ ಆಶ್ರಯದಲ್ಲಿ ಪಟ್ಟಣದ ಎಂ.ಪಿ.ಎಸ್ ಶಾಲಾ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡ ಕರ್ನಾಟಕ ಸಂಭ್ರಮ 50ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಜ್ಯೋತಿ ರಥ ಯಾತ್ರೆಯ ನಿಮಿತ್ತ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಮಾತೃಭಾಷೆಯನ್ನು ಗೌರವಿಸುವುದು ನಮ್ಮ ತಾಯಿ ಗೌರವಿಸಿದಂತೆ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಯುವ ಸಾಹಿತಿ ಜಗದೀಶ ಸಾಲಳ್ಳಿ ಹೇಳಿದರು.

ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ವಿಜಯಪುರ, ತಾಲೂಕಾಡಳಿತ ಹಾಗೂ ಪಟ್ಟಣ ಪಂಚಾಯತಿ ಕೊಲ್ಹಾರ ಆಶ್ರಯದಲ್ಲಿ ಪಟ್ಟಣದ ಎಂ.ಪಿ.ಎಸ್ ಶಾಲಾ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡ ಕರ್ನಾಟಕ ಸಂಭ್ರಮ 50ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಜ್ಯೋತಿ ರಥ ಯಾತ್ರೆಯ ನಿಮಿತ್ತ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸುವ ಜವಬ್ದಾರಿ ನಮ್ಮದು ಎಂದರು.

ಕರ್ನಾಟಕ ನಾಮಕರಣವಾಗಿ ಐವತ್ತು ವಸಂತ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪಟ್ಟಣದ ದಿಗಂಬರೇಶ್ವರ ಮಠದ ಬಳಿ ಆಗಮಿಸಿದ ಕನ್ನಡ ಜ್ಯೋತಿ ರಥ ಯಾತ್ರಗೆ ತಾಲೂಕಾಡಳಿತ ಹಾಗೂ ಪಟ್ಟಣ ಪಂಚಾಯತಿ ವತಿಯಿಂದ ಭವ್ಯ ಸ್ವಾಗತವನ್ನು ಕೋರಲಾಯಿತು. ತಹಸೀಲ್ದಾರ್‌ ಎಸ್.ಎಸ್.ನಾಯಕಲ್ ಮಠ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಉಮೇಶ ಚಲವಾದಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ, ಪುಷ್ಪಾರ್ಚನೆ ಗೈದು ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯು ದಿಗಂಬರೇಶ್ವರ ಮಠದಿಂದ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಎಂಪಿಎಸ್ ಶಾಲೆಯ ಮೈದಾನವನ್ನು ತಲುಪಿತು. ಕುಂಭಮೇಳ, ಗೊಂಬೆ ಕುಣಿತ, ಹಲಗೆ ಮಜಲು, ಮಕ್ಕಳ ಲೇಜಿಮ್ ಸೇರಿದಂತೆ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆಯು ವಿಜೃಂಭಣೆಯಿಂದ ಜರುಗಿತು. 

ಛದ್ಮ ವೇಷ ಧಾರಿ ಮಕ್ಕಳು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿದರು. ಮೆರವಣಿಗೆ ಸಂದರ್ಭದಲ್ಲಿ ಕನ್ನಡಮ್ಮನ ರಥಕ್ಕೆ ಪೂಜೆ ಸಲ್ಲಿಸಿ, ಆರುತಿ ಬೆಳಗಿದರು. ಮೆರವಣಿಗೆಯಲ್ಲಿ ಪಟ್ಟಣ ಪಂಚಾಯತಿ ಸದಸ್ಯರು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ವಿವಿಧ ಇಲಾಖೆ ಅಧಿಕಾರಿಗಳು, ಕನ್ನಡದ ಅಭಿಮಾನಿಗಳು, ಶಿಕ್ಷಕರು, ಮಕ್ಕಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಪೌರ ಕಾರ್ಮಿಕರು ಸೇರಿದಂತೆ ಅನೇಕ ಪಟ್ಟಣದ ಗಣ್ಯ ಮಾನ್ಯರು ಭಾಗವಹಿಸಿದ್ದರು.

 ನಂತರ ಸಂಜೆ ಎಂ.ಪಿ.ಎಸ್ ಶಾಲಾ ಮೈದಾನದಲ್ಲಿ ವಿವಿಧ ಶಾಲಾ ಮಕ್ಕಳಿಂದ ಕನ್ನಡ, ನಾಡು, ನುಡಿಗೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಿತಿಗಳಿಂದ ಕವನ ವಾಚನ, ಜನಪದ ಕಲಾ ತಂಡಗಳಿಂದ ಹಂತಿ ಪದ, ಶೋಭಾನ ಪದ, ಚೌಡಕಿ ಪದ, ಭಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಿದವು.

ಕೆನೆಮೊಸರು ಕೊಲ್ಹಾರದಲ್ಲಿ ಕನ್ನಡದ ಕಲರವ ಮೊಳಗಿತು. ಈ ಸಂದರ್ಭದಲ್ಲಿ ತಹಸೀಲ್ದಾರ್‌ ಎಸ್.ಎಸ್.ನಾಯಕಲ್ ಮಠ, ಉಪ ತಹಸೀಲ್ದಾರ್‌ ಎನ್.ಕೆ.ನದಾಫ್, ಕಂದಾಯ ನಿರೀಕ್ಷಕ ಬಿ.ಎಸ್.ಪಾಟೀಲ, ಪಪಂ ಮುಖ್ಯಾಧಿಕಾರಿ ಉಮೇಶ ಚಲವಾದಿ, ಶಿರಸ್ತೇದಾರ ಕೃಷ್ಣ ಗೂಡೂರ, ಪಟ್ಟಣ ಪಂಚಾಯತಿ ಸದಸ್ಯರಾದ ಚನಮಲ್ಲಪ್ಪ ಗಿಡ್ಡಪ್ಪಗೋಳ, ತೌಶಿಪ್ ಗಿರಗಾಂವಿ, ಶ್ರೀಶೈಲ ಮುಳವಾಡ, ಮಹಾಂತೇಶ ಗಿಡ್ಡಪ್ಪಗೋಳ, ಶಿಕ್ಷಣ ಸಂಯೋಜಕ ಜಿ.ಎಸ್.ಗಣಿಯವರ, ಸಿಆರ್‌ಪಿ ಜಿ.ಐ.ಗೊಡ್ಯಾಳ.

ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಅಶೋಕ ಆಸಂಗಿ, ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಪ್ಪ ಗಣಿ, ಕರವೇ ಜಿಲ್ಲಾ ಉಪಾಧ್ಯಕ್ಷ ಕಲ್ಲು ಸೊನ್ನದ, ಚಾಲಕರ ಸಂಘದ ಅಧ್ಯಕ್ಷ ಸಿದ್ದು ಗಣಿ, ಕರುನಾಡು ಸಾಹಿತ್ಯ ಪರಿಷತ್ ಅಧ್ಯಕ್ಷೆ ಬೋರಮ್ಮ ಪತಂಗಿ, ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ತಾಲೂಕಾಧ್ಯಕ್ಷೆ ರುದ್ರಮ್ಮ ಗಿಡ್ಡಪ್ಪಗೋಳ, ಜಯ ಕರ್ನಾಟಕ ಸಂಘದ ಅಧ್ಯಕ್ಷ ರಾಜು ವಡ್ಡರ ಸೇರಿದಂತೆ ಅನೇಕ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಪಟ್ಟಣದ ಗಣ್ಯರು, ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು. ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ಹಾಗೂ ಜಿ.ಐ.ಗೋಡ್ಯಾಳ ಕಾರ್ಯಕ್ರಮ ನಡೆಸಿಕೊಟ್ಟರು.

ಉಚ್ಚರಿಸುವುದನ್ನೇ ಬರೆಯುವ, ಬರದಿದ್ದನ್ನೇ ಉಚ್ಚರಿಸುವ ಸಾವಿರಾರು ವರ್ಷಗಳ ಇತಿಹಾಸ ಹಾಗೂ ಸ್ವಂತ ಲಿಪಿ ಹೊಂದಿದ ಹೆಮ್ಮೆಯ ಭಾಷೆ ನಮ್ಮ ಕನ್ನಡ ಭಾಷೆ. ಕರ್ನಾಟಕ ಭೌಗೋಳಿಕ, ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಕವಾಗಿ ಬಹಳಷ್ಟು ವೈಶಿಷ್ಠತೆಯಿಂದ ಕೂಡಿದ ರಾಜ್ಯ ನಮ್ಮದು. ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯುವುದರೊಂದಿಗೆ ಕನ್ನಡ ಭಾಷೆಯ ಶ್ರೀಮಂತಿಕೆ ಹೆಚ್ಚಾಗಿದೆ. ಕನ್ನಡ ನಾಡು ಹಾಗೂ ಭಾಷೆಗೆ ದಕ್ಕೆ ಬಂದಾಗ ನಾವೆಲ್ಲರೂ ಟೊಂಕಕಟ್ಟಿ ನಿಲ್ಲೋಣ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಗದೀಶ ಸಾಲಳ್ಳಿ ಹೇಳಿದರು.