ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಮಧುಗಿರಿ ತಾಲೂಕು ಭವಿಷ್ಯದಲ್ಲಿ ಬದಲಾಗಲಿದೆ. ಉದ್ಯೋಗವನ್ನರಸಿ ತಮ್ಮ ಸ್ವಂತ ಗ್ರಾಮಗಳನ್ನು ತೊರೆದು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವವರನ್ನು ಮೂಲ ಜಾಗದಲ್ಲಿ ಇರುವಂತೆ ಕೈಗಾರಿಕಾ ಕೇಂದ್ರ, ಗಾರ್ಮೆಂಟ್, ಏಕಶಿಲಾ ಬೆಟ್ಟಕ್ಕೆ ರೋಪವ್, ಜನರ ಜೀವನ ಮಟ್ಟ ಸುಧಾರಣೆಗೆ ಅಗತ್ಯ ಕಾರ್ಯ ಮಾಡಲಾಗುವುದು.
ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸಿ ಮಧುಗಿರಿ ತಾಲೂಕನ್ನು ಸಮಗ್ರ ಅಭಿವೃದ್ಧಿಗೆ ತಾನು ನಮ್ಮ ತಂದೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಎಲ್ಲ ರೀತಿಯಲ್ಲೂ ಕ್ರಮ ವಹಿಸಿ ಮಧುಗಿರಿ ತಾಲೂಕನ್ನು ಮುನ್ನಲೆಗೆ ತರುವುದಾಗಿ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಭರವಸೆ ನೀಡಿದರು.
ಇಲ್ಲಿನ ಕನ್ನಡ ಭವನದಲ್ಲಿ ಇತ್ತಿಚೆಗೆ ನಡೆದ ಭವಿಷ್ಯದಲ್ಲಿ ಮಧುಗಿರಿ ಎಂಬ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರದಿಂದ ಪಟ್ಟಣದ ಪುರಸಭೆಗೆ 25 ಕೋಟಿ ರು. ಮಂಜೂರಾಗಿದ್ದು, ಅಲ್ಪಸಂಖ್ಯಾತರ ಇಲಾಖೆಯಿಂದ 5 ಕೋಟಿ ರು. ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಸಾರ್ವಜನಿಕರ ಅಭಿಪ್ರಾಯ ಪಡೆದು ಕ್ರಿಯಾ ಯೋಜನೆ ತಯಾರಿಸಿ ಚರಿತ್ರೆಯುಳ್ಳ ಮಧುಗಿರಿಯನ್ನು ಮುನ್ನಲೆಗೆ ತರುವ ಸಲುವಾಗಿ ಈ ಸಭೆ ನಡೆಸಲಾಗಿದೆ. ಬೇಡಿಕೆಗಳ ಮಹಾಪೂರವೆ ಹರಿದು ಬಂದಿದ್ದು, ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿ ರಾಜೇಂದ್ರ ತಿಳಿಸಿದರು.
ಮಧುಗಿರಿ ಶೈಕ್ಷಣಿಕ ಜಿಲ್ಲೆ, ಪ್ರಸ್ತುತ ಪಾವಗಡ, ಶಿರಾ, ಕೊರಟಗೆರೆ ಮತ್ತು ಮಧುಗಿರಿ ಸೇರಿದಂತೆ ಈ ನಾಲ್ಕೂ ತಾಲೂಕುಗಳನ್ನು ಒಳಗೊಂಡು ಮುಂದಿನ 4 ವರ್ಷದೊಳಗೆ ತಜ್ಞರ ಸಮಿತಿ ರಚಿಸಿ ಮಧುಗಿರಿಯನ್ನು ಕಂದಾಯ ಜಿಲ್ಲೆಯನ್ನಾಗಿ ಮಾಡುತ್ತೇವೆ.
ಈ ಮೂಲಕ ಮುಂದಿನ ಪೀಳಿಗೆಗೆ ಮಧುಗಿರಿ ಇತಿಹಾಸವನ್ನು ಮುನ್ನಲೆಗೆ ತರಬೇಕಿದೆ. ಕೊಡಿಗೇನಹಳ್ಳಿ- ಐ.ಡಿ.ಹಳ್ಳಿ ನಡುವೆ ಕಸಬಾ ಮತ್ತು ಮಧುಗಿರಿಯಲ್ಲಿ ಗಾರ್ಮೆಂಟ್ಸ್‌ಗೆ ಈಗಾಗಲೇ ಜಾಗ ಗುರುತಿಸಲಾಗಿದೆ.
ನಮ್ಮ ತಾಲೂಕಿಂದ 18 ಸಾವಿರಕ್ಕೂ ಅಧಿಕ ಯುವಕ-ಯುವತಿಯರು ಬೆಂಗಳೂರಿನಲ್ಲ್ಲಿವಿವಿಧ ಫ್ಯಾಕ್ಟರಿಗಳಲ್ಲಿ ಉದ್ಯೋಗ ಮಾಡಿ ಜೀವನ ನಡೆಸುತ್ತಿದ್ದಾರೆ. ಇವರೆಲ್ಲಾ ವಾಪಸ್ ಬರಬೇಕಿದೆ. ಅವರಿಗೆ ಇಲ್ಲೇ ಉದ್ಯೋಗ ಕಲ್ಪಿಸಬೇಕಿದೆ ಎಂದರು.
ತಾಯಿ ಮಗು ಆಸ್ಪತ್ರೆಗೆ ಗುರುವಡೇರಹಳ್ಳಿಯಲ್ಲಿ 3 ಎಕರೆ ಜಮೀನು ಗುರುತಿಸಿದೆ. ತುಮಕೂರು ಗೇಟ್‌ನಿಂದ ಡೂಂಲೈಟ್ ಸರ್ಕಲ್‌ವರೆಗೂ ಸಿಸಿ ರಸ್ತೆ, ತುಮಕೂರು ಹೊರ ವಲಯದಲ್ಲಿ ಫುಡ್ ಕೋರ್ಟ್ ನಿರ್ಮಾಣಕ್ಕೆ ಅಧಿಕ ಒತ್ತು, ಪಾವಗಡ ವೃತ್ತದಿಂದ ಗೌರಿಬಿದನೂರು ಸರ್ಕಲ್ ವರೆಗೂ ದ್ವಿಪಥ ರಸ್ತೆ ನಿರ್ಮಾಣ, ಬೆಟ್ಟದ ತಪ್ಪಲಿನ ಕೋದಂಡರಾಮಸ್ವಾಮಿ ದೇಗುಲದ ಬೆಟ್ಟದ ಬುಡದಲ್ಲಿ 4 ಎಕರೆಯಲ್ಲಿ ಸುಸ್ಸಜ್ಜಿತ ಪಾರ್ಕ್ ನಿರ್ಮಾಣ, ಪಟ್ಟಣದ 23 ವಾರ್ಡ್‌ಗಳಲ್ಲೂ ಗುಣಮಟ್ಟದ ರಸ್ತೆ , ಚರಂಡಿ, ಬೀದಿ ದೀಪ ಸೇರಿ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದರು.
ಪುರಸಭೆ ಆವರಣದ ಹಳೇ ಕಟ್ಟಡದಲ್ಲಿ ಡಿಜಿಟಲ್ ಗ್ರಂಥಾಲಯ, ಐತಿಹಾಸಿಕ ಮಲ್ಲೇಶ್ವರ ಮತ್ತು ವೆಂಕಟರಮಣಸ್ವಾಮಿ ದೇಗುಲಗಳ ಮಧ್ಯ ಕಮಾನು ಅಳವಡಿಕೆ, ಪಿಜಿ ಕೇಂದ್ರ, ಪ್ರತ್ಯೇಕ ಮಹಿಳಾ ಪದವಿ ಕಾಲೇಜು, ಪಿಯು ಬೋರ್ಡ್ ಸ್ಥಾಪನೆ , ಪಟ್ಟಣದ ಐದು ಕಡೆ ವೆಲ್‌ಕಮ್ ಬೋರ್ಡ್ ಸ್ಥಾಪನೆ ಸಿಸಿ ಕ್ಯಾಮೆರಾಗಳ ಅಳವಡಿಕೆ, ವಿದ್ಯುತ್ ಚಿತಗಾರ, ಹೈಟೆಕ್ ಆಸ್ಪತ್ರೆ, ನಿರ್ಮಾಣ ಇನ್ನೂ ಅನೇಕ ಅಭಿವೃದ್ಧಿ ಯೋಜನೆಗಳು ಭವಿಷ್ಯದ ಮಧುಗಿರಿ ಕಟ್ಟಲು ಸಾರ್ವಜನಿಕರಿಂದ ಬಂದ ಎಲ್ಲ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸುವ ಮೂಲಕ ಸಮೃದ್ಧ ಮಧುಗಿರಿ ಕಟ್ಟೋಣ ಎಂದು ರಾಜೇಂದ್ರ ಭರವಸೆ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಪ್ಪ, ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಪುರಸಭೆ ಮಾಜಿ ಅಧ್ಯಕ್ಷ ಡಿ.ಜಿ. ಶಂಕರನಾರಾಯಣಶಟ್ಟಿ, ಎಂ.ಕೆ. ನಂಜುಂಡರಾಜು, ಕೆ. ಪ್ರಕಾಶ್, ಹಿರಿಯ ಸಾಹಿತಿ ಪ್ರೊ. ಮಲನಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಇಒ ಲಕ್ಷ್ಮಣ್, ಧಾರ್ಮಿಕ ಮುಖಂಡ ಡಾ.ಎಂ.ಜಿ. ಶ್ರೀನಿವಾಸಮೂರ್ತಿ, ತುಮುಲ್ ಮಾಜಿ ಅಧ್ಯಕ್ಷ ಬಿ. ನಾಗೇಶ್‌ಬಾಬು, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಲ್ಲಿಕಾರ್ಜುನಯ್ಯ, ಮುಖಂಡರಾದ ತುಂಗೋಟಿ ರಾಮಣ್ಣ ಸೇರಿದಂತೆ ಪುರ ಪ್ರಮುಖರು ಪಾಲ್ಗೊಂಡಿದ್ದರು.
ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಸುವ ಯೋಜನೆಗೆ ಚಾಲನೆ ಸಿಕ್ಕಿದ್ದು, ಇನ್ನೊಂದು ವಾರದೊಳಗೆ ಸರ್ವೆ ಕಾರ್ಯ ನಡೆಸಲು ಕಲ್ಕತ್ತಾದ ಅಧಿಕಾರಿಗಳ ತಂಡ ಭೇಟಿ ನೀಡಲಿದೆ.
ಮುಂದಿನ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಕೇಬಲ್ ಕಾರ್ ಯೋಜನೆ ಬಗ್ಗೆ ಘೋಷಿಸಲಿದ್ದಾರೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಮೇಳೆ, ಸಾಲು ಮರದ ತಿಮ್ಮಕ್ಕನ ಉದ್ಯಾನದ ಸಮೀಪ 80 ಅಡಿ ಉದ್ದದ ಧ್ವಜ ಸ್ತಂಭ ನಿರ್ಮಾಣವಾಗಲಿದೆ. - ಆರ್. ರಾಜೇಂದ್ರ ಎಂಎಲ್‌ಸಿ
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))