ಕಾನೂನು ಕ್ಷೇತ್ರದಲ್ಲಿ ಜ್ಞಾನ, ಅನುಭವ ಓರೆಗಲ್ಲಿಗೆ ಹಚ್ಚುವ ಪ್ರಯತ್ನವಾಗಲಿ: ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ

| Published : Apr 09 2025, 12:31 AM IST

ಕಾನೂನು ಕ್ಷೇತ್ರದಲ್ಲಿ ಜ್ಞಾನ, ಅನುಭವ ಓರೆಗಲ್ಲಿಗೆ ಹಚ್ಚುವ ಪ್ರಯತ್ನವಾಗಲಿ: ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕೀಯ ವ್ಯವಸ್ಥೆಯಲ್ಲಿ ಸರ್ವಾಧಿಕಾರಿತ್ವ ರೂಪಿಸುವಂತಹ ಮನಸ್ಥಿತಿಗಳು ಸಾಮಾನ್ಯವಾಗಿ ರೂಪುಗೊಳ್ಳುತ್ತಿರುತ್ತವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಭಾರತದ ಸಂವಿಧಾನ ಎತ್ತಿ ಹಿಡಿಯುವ ಗುರಿಯನ್ನು ವಕೀಲರು ಹೊಂದಬೇಕಾಗುತ್ತದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ತಿಳಿಸಿದರು.

ಬ್ಯಾಡಗಿ: ಕಾನೂನು ಬಿಟ್ಟು ಹೊಸದಾಗಿ ತಾವೇ ಆಯ್ಕೆ ಮಾಡಿದ ಹಾದಿಯಲ್ಲಿ ದೇಶವು ಮುನ್ನಡೆಯುತ್ತಿರುವಾಗ ಕಾನೂನು ತಜ್ಞರು ಪಕ್ಕಕ್ಕೆ ಸುಮ್ಮನೆ ನಿಲ್ಲಲು ಸಾಧ್ಯವಿಲ್ಲ. ಕಾನೂನು ಕ್ಷೇತ್ರದಲ್ಲಿ ಜ್ಞಾನ ಮತ್ತು ಅನುಭವ ಓರೆಗಲ್ಲಿಗೆ ಹಚ್ಚುವ ಪ್ರಯತ್ನವಾಗಬೇಕು. ನೈತಿಕ ನಡವಳಿಕೆಯ ಸ್ಪಷ್ಟ ಗುರಿಯೊಂದಿಗೆ ಕಾನೂನು ವೃತ್ತಿಯ ಸಾಮರ್ಥ್ಯ ಹಾಗೂ ಖ್ಯಾತಿ ಹೆಚ್ಚಿಸುವಂತೆ ಜಿಲ್ಲಾ ಸತ್ರ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ವಕೀಲರಿಗೆ ಕರೆ ನೀಡಿದರು.

ಬ್ಯಾಡಗಿ ವಕೀಲರ ಸಂಘದ 2025- 27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಜಕೀಯ ವ್ಯವಸ್ಥೆಯಲ್ಲಿ ಸರ್ವಾಧಿಕಾರಿತ್ವ ರೂಪಿಸುವಂತಹ ಮನಸ್ಥಿತಿಗಳು ಸಾಮಾನ್ಯವಾಗಿ ರೂಪುಗೊಳ್ಳುತ್ತಿರುತ್ತವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಭಾರತದ ಸಂವಿಧಾನ ಎತ್ತಿ ಹಿಡಿಯುವ ಗುರಿಯನ್ನು ವಕೀಲರು ಹೊಂದಬೇಕಾಗುತ್ತದೆ. ಪ್ರಜಾಪ್ರಭುತ್ವದಡಿ ಸರ್ಕಾರ ನಡೆಯುತ್ತದೆ. ಆದರೆ ತಾವೇ ಮಾಡಿಕೊಂಡ ಕಾನೂನು ನಿಯಮಗಳ ಪಾಲನೆಗೆ ಸರ್ಕಾರ ಬದ್ಧವಾಗಿದೆಯೋ ಇಲ್ಲವೋ ಎಂಬುದನ್ನು ವಕೀಲರು ಪ್ರಶ್ನಿಸಬೇಕಾಗುತ್ತದೆ ಎಂದರು.

ರಾಜಕೀಯ ರಹಿತವಾಗಿದ್ದರೆ ಉತ್ತಮ: ಸಾರ್ವಜನಿಕ ಸೇವೆಯ ಜತೆಗೆ ಗುಣಮಟ್ಟದ ಕಾನೂನು ಶಿಕ್ಷಣ ಹಾಗೂ ವೃತ್ತಿಪರತೆಯನ್ನು ಉತ್ತೇಜಿಸುವಂತಹ ವಕೀಲರ ಸಂಘಗಳು ತಮ್ಮ ಮೂಲ ಉದ್ದೇಶವನ್ನು ಮರೆಯುತ್ತಿವೆ. ಭಿನ್ನಾಭಿಪ್ರಾಯದಿಂದ ಹೊರಬಂದಂತಹ ಅಭಿಪ್ರಾಯಗಳು ಅಷ್ಟೊಂದು ಪ್ರಬಲವಾಗಿರಲು ಸಾಧ್ಯವಿಲ್ಲ. ವಕೀಲರ ಸಂಘದ ಇತ್ತೀಚಿನ ಚುನಾವಣೆಗಳು ಲಾಭಕ್ಕಾಗಿ ಅಲ್ಲದಿದ್ದರೂ ಪ್ರತಿಷ್ಠೆಗಾಗಿ ರಾಜಕೀಯ ಪ್ರೇರಿತವಾಗುತ್ತಿವೆ ಎಂದು ಖೇದ ವ್ಯಕ್ತಪಡಿಸಿದ ಅವರು, ಇದರಿಂದ ಸಾರ್ವಜನಿಕ ಹಿತಾಸಕ್ತಿಯ ಮೇಲೆ ಬಹೊದೊಡ್ಡ ಪರಿಣಾಮ ಬೀರಲಿದೆ ಎಂದರು.

ಸಂಘಕ್ಕೆ ತನ್ನದೇ ಆದ ಗೌರವವಿದೆ: ನೂತನ ಅಧ್ಯಕ್ಷ ರಾಜು ಶಿಡೇನೂರ ಮಾತನಾಡಿ, ನ್ಯಾಯಾಂಗ ಪ್ರಕ್ರಿಯೆ ಕಾರ್ಯವನ್ನು ಕಡಿಮೆ ಮಾಡುವ ಮತ್ತು ಅದರ ಕಾರ್ಯಾಚರಣೆಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರವೃತ್ತಿಯನ್ನು ಇತ್ತೀಚಿನ ಹೊಸ ಸರ್ಕಾರಗಳು ರೂಢಿಸಿಕೊಳ್ಳುತ್ತಿವೆ. ವಕೀಲರ ಸಂಘಕ್ಕೆ ತನ್ನದೇ ಆದ ಗೌರವವಿದೆ. ಇಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಕಾನೂನುಗಳಾಗಿ ಮಾರ್ಪಟ್ಟರೂ ಆಶ್ಚರ್ಯಪಡಬೇಕಾಗಿಲ್ಲ. ಬಾರ್ ಅಸೋಸಿಯೇಷನ್‌ ಸದಸ್ಯರು ಕಾರ್ಯಕಾರಿ ಸಮಿತಿಯನ್ನು ಪ್ರತಿ 2 ವರ್ಷಗಳಿಗೊಮ್ಮೆ ಆಯ್ಕೆ ಮಾಡುತ್ತದೆ. ಹೀಗಾಗಿ ಎಲ್ಲ ಸದಸ್ಯರ ಸಹಕಾರದಿಂದ ಸಂಘವನ್ನು ಮುನ್ನಡೆಸಿಕೊಂಡು ಹೋಗುವುದಾಗಿ ತಿಳಿಸಿದರು.

1960ರಲ್ಲಿ ಆರಂಭವಾದ ಸಂಘ: ಪ್ರಧಾನ ಕಾರ್ಯದರ್ಶಿ ಎಚ್.ಜಿ. ಮುಳಗುಂದ ಮಾತನಾಡಿ, ಭಾರತೀಯ ವಕೀಲರ ಸಂಘ 1959ರ ಆ. 8ರಂದು ಸ್ಥಾಪನೆಗೊಂಡಿದೆ. ಆದರೆ 1960ರ ಏ. 2ರಂದು ಭಾರತದ ಆಗಿನ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್, ನವದೆಹಲಿ ವಿಜ್ಞಾನ ಭವನದಲ್ಲಿ ಉಪಾಧ್ಯಕ್ಷ ಡಾ. ಸರ್ವಪಲ್ಲಿ ರಾಧಾಕೃಷ್ಣನ್, ಪ್ರಧಾನಿ ಜವಾಹರಲಾಲ್ ನೆಹರು, ಭಾರತದ ಅಂದಿನ ಮುಖ್ಯ ನ್ಯಾಯಮೂರ್ತಿ, ಕಾನೂನು ಅಧಿಕಾರಿಗಳು, ಅಡ್ವೊಕೇಟ್ ಜನರಲ್‌ಗಳು ಮತ್ತು ವಿವಿಧ ಹೈಕೋರ್ಟ್ ವಕೀಲರ ಸಂಘಗಳ ಅಧ್ಯಕ್ಷರು ಸೇರಿದಂತೆ ವೃತ್ತಿಯ ಅನೇಕ ಇತರ ಗಣ್ಯರ ಸಮ್ಮುಖದಲ್ಲಿ ಔಪಚಾರಿಕವಾಗಿ ಉದ್ಘಾಟಿಸಲಾಯಿತು ಎಂದರು.

ಜಿಲ್ಲಾ ಕೌಟುಂಬಿಕ ನ್ಯಾಯಾಲಯಗಳ ನ್ಯಾಯಾಧೀಶರಾದ ಎಂ.ಜಿ. ಶಿವಳ್ಳಿ, ಹಿರಿಯ ದಿವಾಣಿ ನ್ಯಾಯಾಧೀಶರಾದ ಅಮೋಲ್ ಜೆ. ಹಿರೇಕುಡಿ, ಕಿರಿಯ ದಿವಾಣಿ ನ್ಯಾಯಾಧೀಶರಾದ ಸುರೇಶ ವಗ್ಗನವರ, ನ್ಯಾಯವಾದಿಗಳಾದ ಪಿ.ಆರ್. ಮಠದ, ವಿಜಯ ಕಡಗಿ, ಬಿ.ಎಸ್. ಚೂರಿ, ಎಂ.ಜೆ. ಮುಲ್ಲಾ, ಪ್ರಭು ಶೀಗಿಹಳ್ಳಿ, ಆರ್.ವಿ. ಬೆಳಕೇರಿಮಠ, ಎಂ.ಆರ್. ಹೊಂಬರಡಿ ನಿರ್ಗಮಿತ ಅಧ್ಯಕ್ಷ ಶಂಕರ ಬಾರ್ಕಿ ಸೇರಿದಂತೆ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು.