ಸಾರಾಂಶ
ಗದಗ: ಲಕ್ಕುಂಡಿ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಮೂಲಕ ಜಾಗತಿಕ ಪಾರಂಪರಿಕ ಸ್ಥಳ ಎಂದು ಗುರುತಿಸುವಂತೆ ಮಾಡಲು ನಾವೆಲ್ಲ ಶ್ರಮಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು.ಲಕ್ಕುಂಡಿ ಪ್ರದೇಶದಲ್ಲಿ ಈಗಾಗಲೇ ಪ್ರವಾಸೋಧ್ಯಮ ಇಲಾಖೆಯಿಂದ ₹5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಭೂಮಿ ಪೂಜೆ ನೆರವೇರಿಸಲಾಗಿದೆ. ಸರ್ಕಾರ ಲಕ್ಕುಂಡಿ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಿದೆ. ಸಾರ್ವಜನಿಕರ ಸಹಕಾರವೂ ಸಹ ಅಗತ್ಯವಾಗಿದೆ ಎಂದರು.
ಲಕ್ಕುಂಡಿ ಐತಿಹಾಸಿಕವಾಗಿ ಬಹಳ ವಿಶಿಷ್ಟವಾಗಿದೆ. ಇತ್ತೀಚೆಗೆ ಲಕ್ಕುಂಡಿಯಲ್ಲಿ ಬೌದ್ಧ ಶಾಸನ ದೊರೆತಿದ್ದು, ಇತಿಹಾಸ ಸಾರಿ ಹೇಳುತ್ತಿವೆ. ಲಕ್ಕುಂಡಿ ಇತಿಹಾಸ ಕುರಿತಂತೆ ಪುಸ್ತಕಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಆಗಿಲ್ಲ. ಲಕ್ಕುಂಡಿ ಇತಿಹಾಸ ನಾವುಗಳೇ ಅರಿತು ಇನ್ನೊಬ್ಬರಿಗೆ ನಮ್ಮತನ ಪಸರಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.ಸರ್ಕಾರವು ನೀಡಿದ ಅನುದಾನವನ್ನು ಅನಗತ್ಯವಾಗಿ ಮನಬಂದಂತೆ ವ್ಯಯಿಸಲು ಅವಕಾಶವಿಲ್ಲ. ಪ್ರತಿ ರುಪಾಯಿಯೂ ಮೌಲ್ಯಯುತ ಕಾರ್ಯಕ್ಕೆ ಬಳಕೆಯಾಗಬೇಕು. ವಿನಾಕಾರಣ ಅಪವ್ಯಯ ಸಹಿಸಲಾಗದು ಎಂದು ಸಂಬಂಧಿತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅಭಿವೃದ್ಧಿ ಮತ್ತು ಉತ್ಖನನದ ವೇಳೆ ದೊರೆತ ಶಾಸನ ಶಿಲೆ ವಿಗ್ರಹಗಳಿಗೆ ಧಕ್ಕೆಯಾಗದಂತೆ ನಿಖರವಾಗಿ ಮೂಲ ವಿಗ್ರಹ ದೇವಸ್ಥಾನಗಳಿಗೆ ಧಕ್ಕೆಯಾಗದಂತೆ ಪ್ರಾಚ್ಯ ವಸ್ತು ಇಲಾಖೆಯ ಸೂಚನೆಯಂತೆ ಅಭಿವೃದ್ಧಿ ಕಾರ್ಯ ನಡೆಯಬೇಕು. ಲಕ್ಕುಂಡಿ ಅದ್ಭುತ ಇತಿಹಾಸ ಅನಾವರಣಗೊಳಿಸುವ ಮೂಲಕ ಜಗತ್ತಿಗೆ ತೋರ್ಪಡಿಸುವ ಕಾರ್ಯ ಆಗಬೇಕಿದೆ. ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಭೆಯನ್ನು ಪ್ರತಿ ಮೂರು ತಿಂಗಳಿಗೆ ಒಂದು ಸಲ ಮಾಡಬೇಕೆಂದು ಸೂಚಿಸಿದರು.
ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿ ರಾಜ್ಯಕ್ಕೆ ₹250 ಕೋಟಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಣ ಮೀಸಲಿದೆ. ಲಕ್ಕುಂಡಿ ಅಭಿವೃದ್ಧಿಗೆ ಅಗತ್ಯವಿರುವ ಡಿಪಿಆರ್ ಸಿದ್ಧಪಡಿಸಿ ಶೀಘ್ರವೇ ಸಲ್ಲಿಸುವ ಮೂಲಕ ಅನುಮೋದನೆ ಪಡೆಯುವಂತೆ ಸೂಚಿಸಿದರು.ಶಾಸಕ ಸಿ.ಸಿ. ಪಾಟೀಲ ಮಾತನಾಡಿ ಲೊಕೋಪಯೋಗಿ ಇಲಾಖೆಯಲ್ಲಿ ಉತ್ತಮ ಆರ್ಕೆಟಿಕ್ ವಿಭಾಗ ಕಾರ್ಯ ನಿರ್ವಹಿಸುತ್ತಿದ್ದು, ಅವರ ಸಹಕಾರದೊಂದಿಗೆ ಉತ್ತಮ ಡಿಪಿಆರ್ ಸಿದ್ಧಪಡಿಸಿ ಸಲ್ಲಿಸಬಹುದಾಗಿದೆ. ಲಕ್ಕುಂಡಿ ಇತಿಹಾಸ ಪರಂಪರೆ ನಾಡಿನುದ್ದಕ್ಕೂ ಪಸರಿಸಲು ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದರು.
ಸಭೆಯಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯಮಟ್ಟದ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ, ಅ.ದ. ಕಟ್ಟಿಮನಿ ಸೇರಿದಂತೆ ಲಕ್ಕುಂಡಿ ಗ್ರಾಪಂ ಸದಸ್ಯರು, ಸಾಹಿತಿ ಪುಂಡಲೀಕ ಕಲ್ಲಿಗನೂರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಓ ಭರತ್ ಎಸ್, ಪುರಾತತ್ವ ಇಲಾಖೆಯ ಆಯುಕ್ತ ದೇವರಾಜ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸೌಮ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಎಂ.ಬಿ. ಸಂಕದ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಗಂಗಾಧರ ಶಿರೋಳ, ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಹಾಜರಿದ್ದರು.