ಸಾರಾಂಶ
ಹೊಸಪೇಟೆ: ಪಾಶ್ಚಾತ್ಯರ ದಾಸ್ಯದಿಂದ ಮುಕ್ತರಾಗುವುದರ ಜೊತೆಗೆ ದೇಶದ ಒಳಗಿರುವ ಗುಲಾಮಗಿರಿಯ ಕೊಳಕು ತೊಲಗಿಸಬೇಕು. ಮೊದಲು ಜನರ ಮನಸ್ಸಿನಲ್ಲಿರುವ ಗುಲಾಮಗಿರಿ ಹೋಗಬೇಕು. ಆಗ ಮಾತ್ರ ನಿಜವಾದ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ನಂಬಿದ್ದರು. ಇಂತಹ ಅಂಬೇಡ್ಕರ್ ಕುರಿತು ಜನರಿಗೆ ಪರಿಪೂರ್ಣ ಸತ್ಯಾಂಶ ತಿಳಿಸಬೇಕು ಹೊರತು, ಮತ್ತೊಬ್ಬರ ವಿರುದ್ಧ ಬಿಂಬಿಸುವುದು ಸರಿಯಲ್ಲ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಚ್.ಟಿ ಪೋತೆ ಹೇಳಿದರು.
ಕನ್ನಡ ವಿವಿಯ ದಲಿತ ಸಂಸ್ಕೃತಿ ಅಧ್ಯಯನ ಪೀಠ ಮತ್ತು ಈ ದಿನ.ಕಾಮ್ ಅವರ ಸಹಯೋಗದಲ್ಲಿ ಭುವನ ವಿಜಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅರಿವೇ ಅಂಬೇಡ್ಕರ್ - ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಅಂಬೇಡ್ಕರ್ ಸಾಮಾನ್ಯ ವಿದ್ಯಾರ್ಥಿಯಾಗಿದ್ದರು. ಆದರೆ ಅವರ ವಿವೇಚನಾ ಶಕ್ತಿಯಿಂದ, ಬುದ್ಧಿಶಕ್ತಿಯಿಂದ, ತ್ಯಾಗದಿಂದ ವಿಶೇಷ ವ್ಯಕ್ತಿಗಳಾಗಿ ಹೊರಹೊಮ್ಮಿದರು. ಸಮಾಜದ ಬಗ್ಗೆ ತೀವ್ರ ಕಾಳಜಿ ಮತ್ತು ತುಡಿತವಿತ್ತು. ಸಮಾಜವನ್ನು ಅವರು ಚೆನ್ನಾಗಿ ಅರ್ಥೈಸಿಕೊಂಡಿದ್ದರು. ವೈಚಾರಿಕ ಮಟ್ಟದಲ್ಲಿ ಆಲೋಚಿಸುತ್ತಿದ್ದರು. ಜಾತಿ ಪದ್ಧತಿ, ಅಸ್ಪೃಶ್ಯತೆ ನಿರ್ಮೂಲನೆಗಾಗಿ ಸಾಕಷ್ಟು ಶ್ರಮಪಟ್ಟರು. ಇಂದು ತಾಂತ್ರಿಕವಾಗಿ ಜಾತಿ ಪದ್ಧತಿ ಇಲ್ಲ. ಆದರೆ ವಾಸ್ತವವಾಗಿ ಜಾತಿ ಪದ್ಧತಿ ಜಾರಿಯಲ್ಲಿದೆ. ಅದನ್ನು ಹೋಗಲಾಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಹಿರಿಯ ಪತ್ರಕರ್ತ ಮಂಗಳೂರು ವಿಜಯ ಮಾತನಾಡಿ, ಅಂಬೇಡ್ಕರ್ ಅವರು ಮಹಿಳೆಯರ ಹಕ್ಕು ಮತ್ತು ಸಮಾನತೆ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹೋರಾಟ ನಡೆಸಿದ್ದಾರೆ. ಮಹಿಳೆಯರ ವಿಮೋಚನೆಗಾಗಿ ವಿಶೇಷ ಸೌಲಭ್ಯಗಳನ್ನು ಸಂವಿಧಾನದಲ್ಲಿ ಅಳವಡಿಸಿದರು. ಆದರೆ ಅಂಬೇಡ್ಕರ್ ಅವರು ಮಹಿಳಾ ಲೋಕಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಚರ್ಚೆಯಾಗುವುದು ತುಂಬಾ ವಿರಳ ಎಂದರು.ಪತ್ರಕರ್ತ ಯತಿರಾಜ್ ಬ್ಯಾಲಹಳ್ಳಿ ಮಾತನಾಡಿ, ಅಂಬೇಡ್ಕರ್ ಅವರ ವಿಚಾರಗಳನ್ನು ಏಕೆ ಸಮೀಕರಣ ಮಾಡಿನೋಡಬೇಕು ಎಂದರೆ ಇತಿಹಾಸದಲ್ಲಿ ನಡೆದ ಎಲ್ಲಾ ಬೆಳವಣಿಗೆಗಳು ವರ್ತಮಾನದಲ್ಲಿ ಮರುಕಳಿಸುತ್ತವೆ. ಕೆಲವರು ಜನರ ದಿಕ್ಕನ್ನು ತಪ್ಪಿಸುವ ಕೆಲಸ ಮಾಡುತ್ತಾರೆ. ಹೀಗಾಗಿ ಅಂಬೇಡ್ಕರ್ ವಿಚಾರ, ಚಿಂತನೆ ಮತ್ತು ಕೊಡುಗೆಗಳ ಬಗ್ಗೆ ಅರಿವು ಮೂಡಿಸುವುದು ಇಂದಿನ ತುರ್ತು ಅಗತ್ಯ ಎಂದರು.
ಕನ್ನಡ ವಿವಿ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಸರ್ಕಾರ ಮತ್ತು ಜನರು ಸಂವಿಧಾನದ ಅವಕಾಶಗಳನ್ನು ಎಷ್ಟರ ಮಟ್ಟಿಗೆ ಬಳಸಿಕೊಂಡು ಅಭಿವೃದ್ಧಿ ಕಂಡಿದ್ದಾರೆ ಎಂಬುದು ಇಂದು ಮುಖ್ಯವಾಗುತ್ತದೆ ಎಂದರು.ಕನ್ನಡ ವಿವಿ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ದಲಿತ ಅಧ್ಯಯನ ಪೀಠದ ಸಂಚಾಲಕ ಡಾ. ಚಿನ್ನಸ್ವಾಮಿ ಸೋಸಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾರ್ಥಿ ಪ್ರದೀಪ್, ಮಂಜುಳಾ ನಿರ್ವಹಿಸಿದರು.