ಸಾರಾಂಶ
ರಾಷ್ಟ್ರ ಮುನ್ನಡೆಸಲು ಎಲ್ಲರೂ ತಪ್ಪದೆ ಮತ ಚಲಾಯಿಸೋಣ ಎಂದು ಜಿಲ್ಲಾ ಚುನಾವಣಾ ರಾಯಭಾರಿ ಹಾಗೂ ಚಲನಚಿತ್ರ ನಟ ರಮೇಶ್ ಅರವಿಂದ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬೆಂಗಳೂರು: ರಾಷ್ಟ್ರ ಮುನ್ನಡೆಸಲು ಎಲ್ಲರೂ ತಪ್ಪದೆ ಮತ ಚಲಾಯಿಸೋಣ ಎಂದು ಜಿಲ್ಲಾ ಚುನಾವಣಾ ರಾಯಭಾರಿ ಹಾಗೂ ಚಲನಚಿತ್ರ ನಟ ರಮೇಶ್ ಅರವಿಂದ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ಸೋಮವಾರ ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಯುವ ಮತದಾರರು ಸ್ವಇಚ್ಛೆಯಿಂದ ಮತದಾನ ಮಾಡಬೇಕು. ಎಲ್ಲರೂ ಮತ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನ್ಯಾಯ ಒದಗಿಸಲು ಸಾಧ್ಯ ಎಂದು ಹೇಳಿದರು.ಗೂಗಲ್‌ನಲ್ಲಿ ನಿಮ್ಮ ಕ್ಷೇತ್ರದ ಆಭ್ಯರ್ಥಿ ಯಾರು, ಏನೇನು ಕೆಲಸ ಮಾಡಿದ್ದಾರೆ, ಅವರ ಹಿನ್ನೆಲೆ ಏನು, ಅವರ ನೀಡಿದ್ದ ಪ್ರಣಾಳಿಕೆಯಲ್ಲಿ ಕಳೆದ 5 ವರ್ಷಗಳಲ್ಲಿ ಏನೆಲ್ಲಾ ಈಡೇರಿಸಿದ್ದಾರೆ ಎಂಬುದನ್ನು ಪರಿಶೀಲಿಸಿ. ಯಾವುದಾದರೂ ಅಭ್ಯರ್ಥಿಗೆ ಮತದಾನ ಮಾಡಿದರೆ ಅವರು ನಮಗೆ ಏನು ಮಾಡುತ್ತಾರೆ ಎಂಬುದನ್ನು ಕೂಲಂಕಷವಾಗಿ ಆಲೋಚಿಸಿ ಮತದಾನ ಮಾಡಿ. ಯಾರೋ ಹೇಳಿದ ಮಾತು ಕೇಳಿ ಮತದಾನ ಮಾಡಬೇಡಿ ಎಂದು ಸಲಹೆ ನೀಡಿದರು.
ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಕಾಂತರಾಜು ಮಾತನಾಡಿ, ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಯುವ ಮತದಾರರು ಏ.26ರಂದು ತಪ್ಪದೆ ಮತ ಚಲಾಯಿಸಿ ಎಂದರು.ಈ ವೇಳೆ ವಿದ್ಯಾರ್ಥಿಗಳಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸ್ವೀಪ್ ನೋಡಲ್ ಅಧಿಕಾರಿ ರಮಾಮಣಿ, ಬಿಎಂಎಸ್ ಕಾಲೇಜಿನ ಪ್ರಾಂಶುಪಾಲ ಫ್ರೊ. ವಸುಂದರಾ ಉಪಸ್ಥಿತರಿದ್ದರು.