ಸಾರಾಂಶ
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶ ಸುಸಜ್ಜಿತ ರಾಷ್ಟ್ರವಾಗಿ ನಿರ್ಮಾಣವಾಗುತ್ತಿದೆ. ನಾಡು ನುಡಿ ಅಭಿವೃದ್ಧಿಗೆ ಪ್ರತಿಯೊಬ್ಬರೂ ಟೊಂಕಕಟ್ಟಿ ನಿಲ್ಲೋಣ.
ಹಗರಿಬೊಮ್ಮನಹಳ್ಳಿ: ಪ್ರತಿ ಸಮಾಜ ಸಂವಿಧಾನದಲ್ಲಿ ಕಲ್ಪಿಸಲಾದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ತಹಸೀಲ್ದಾರ್ ಚಂದ್ರಶೇಖರ ಶಂಬಣ್ಣ ಗಾಳಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶ ಸುಸಜ್ಜಿತ ರಾಷ್ಟ್ರವಾಗಿ ನಿರ್ಮಾಣವಾಗುತ್ತಿದೆ. ನಾಡು ನುಡಿ ಅಭಿವೃದ್ಧಿಗೆ ಪ್ರತಿಯೊಬ್ಬರೂ ಟೊಂಕಕಟ್ಟಿ ನಿಲ್ಲೋಣ. ದೇಶದ ಮಹಾನ್ ಪುರುಷರ ಆಶಯಗಳನ್ನು ಅಳವಡಿಸಿಕೊಂಡು ಸತ್ಪ್ರಜೆಗಳಾಗೋಣ ಎಂದರು.ಶಾಸಕ ಕೆ. ನೇಮರಾಜ ನಾಯ್ಕ ಧ್ವಜವಂದನೆ ಸ್ವೀಕರಿಸಿ ಮಾತನಾಡಿ, ದೇಶದ ಜನತೆಗೆ ಸಮಾನ ಅವಕಾಶ ಮತ್ತು ಹಕ್ಕುಗಳನ್ನು ಕಲ್ಪಿಸಿರುವ ಸಂವಿಧಾನ ವಿಶ್ವದಲ್ಲೆ ಮಾದರಿಯಾಗಿದೆ. ಗಣತಂತ್ರ ವ್ಯವಸ್ಥೆಯಲ್ಲಿ ದೇಶ ವಿಶ್ವದಲ್ಲೆ ಹೆಸರಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಪ್ರಗತಿಯತ್ತ ಮುನ್ನಡೆಯುತ್ತಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಂತರ ನಡೆದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆಚ್ಚುಗೆಗೆ ಪಾತ್ರವಾದವು. ಬಿಇಒ ಮೈಲೇಶ್ ಬೇವೂರ್, ಜೆಸ್ಕಾಂ ಇಇ ತೇಜಾನಾಯ್ಕ, ಸಿಪಿಐ ವಿಕಾಸ್ ಪಿ. ಲಮಾಣಿ, ಜೆಡಿಎಸ್ ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಪುರಸಭೆ ಸದಸ್ಯರಾದ ಅಂಬಳಿ ಮಂಗಳಾ, ನಾಗರಾಜ ಜನ್ನು, ವೀರಣ್ಣ, ದೀಪಕ್ ಕಠಾರೆ, ಮುಖಂಡರಾದ ಚಿತ್ತವಾಡ್ಗಿ ಪ್ರಕಾಶ್, ಬಡಿಗೇರ ಬಸವರಾಜ, ಸರ್ದಾರ್ ಯಮನೂರ್, ಹೋಟೆಲ್ ಸಿದ್ದರಾಜು ಇತರರಿದ್ದರು. ಕಾರ್ಯಕ್ರಮವನ್ನು ತಾಪಂ ಇಒ ಡಾ. ಜಿ. ಪರಮೇಶ್ವರ್, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆಂಜನೇಯ ಎಚ್. ಉಲ್ಲಾಳ್, ಶಿಕ್ಷಕ ಕೆ.ಎಂ. ಶಿವಶಂಕರಯ್ಯ ನಿರ್ವಹಿಸಿದರು.