ಜಿಲ್ಲೆಯ ಅಭಿವೃದ್ಧಿಗೆ ಒಗ್ಗಟ್ಟಾಗಿ ಕೆಲಸ ಮಾಡೋಣ: ನೂತನ ಅಪರ ಜಿಲ್ಲಾಧಿಕಾರಿ ಮಂಗಳಾ

| Published : Jun 29 2024, 12:32 AM IST

ಜಿಲ್ಲೆಯ ಅಭಿವೃದ್ಧಿಗೆ ಒಗ್ಗಟ್ಟಾಗಿ ಕೆಲಸ ಮಾಡೋಣ: ನೂತನ ಅಪರ ಜಿಲ್ಲಾಧಿಕಾರಿ ಮಂಗಳಾ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ನೌಕರರ ಸಂಘದಿಂದ ಉಪವಿಭಾಗಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಡಾ.ಮೈತ್ರಿ ಅವರನ್ನೂ ಇದೇ ವೇಳೆ ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಕೋಲಾರ

ನೂತನ ಅಪರ ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಎಸ್.ಎಂ. ಮಂಗಳಾ ಹಾಗೂ ಉಪವಿಭಾಗಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ಮೈತ್ರಿ ಅವರನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಸುರೇಶ್‌ಬಾಬು ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಸ್ವಾಗತಿಸಿದರು.

ಎಡಿಸಿ ಮಂಗಳಾ ಮಾತನಾಡಿ, ಕೋಲಾರಕ್ಕೆ ನಾನು ಹೊಸಬಳಲ್ಲ, ಇಲ್ಲಿನ ಸಮಸ್ಯೆಗಳ ಅರಿವು ನನಗಿದೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರಿ ನೌಕರರು ಸಹಕಾರ ನೀಡಿ ಎಂದು ಮನವಿ ಮಾಡಿದರು.

ಸರ್ಕಾರಿ ನೌಕರರು ಕಾರ್ಯಾಂಗದ ಪ್ರಮುಖ ಭಾಗವಾಗಿದ್ದು, ನೀವು ಉತ್ತಮವಾಗಿ ಕೆಲಸ ಮಾಡಿದರೆ ಮಾತ್ರ ಸರ್ಕಾರದ ಯೋಜನೆಗಳು, ಸೌಲಭ್ಯಗಳನ್ನು ಜನತೆಗೆ ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ. ಸುರೇಶ್‌ ಬಾಬು ಮಾತನಾಡಿ, ಜಿಲ್ಲೆಯ ಅಭಿವೃದ್ಧಿ, ಜನಪರ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳಿಸಲು ತಮ್ಮ ಮಾರ್ಗದರ್ಶನದಂತೆ ಬದ್ಧತೆಯಿಂದ ಕರ್ತವ್ಯ ನಿರ್ವಹಿಸಲು ಜಿಲ್ಲೆಯ ನೌಕರರು ಸಿದ್ಧರಿದ್ದು, ತಮಗೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಎಸಿ ಡಾ.ಮೈತ್ರಿಗೂ ಅಭಿನಂದನೆ:

ಜಿಲ್ಲಾ ನೌಕರರ ಸಂಘದಿಂದ ಉಪವಿಭಾಗಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಡಾ.ಮೈತ್ರಿ ಅವರನ್ನೂ ಇದೇ ವೇಳೆ ಸ್ವಾಗತಿಸಲಾಯಿತು.

ನೌಕರರ ಸಂಘದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಎಸಿ ಡಾ.ಮೈತ್ರಿ, ಕಂದಾಯ ಇಲಾಖೆ ಜನತೆಗೆ ಅತಿ ಹತ್ತಿರವಾಗಿರುವ ಇಲಾಖೆಯಾಗಿದೆ, ಅದರಲ್ಲೂ ಜಮೀನಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಇವೆ, ಬರ ಪರಿಹಾರ ಸೇರಿ ಎಲ್ಲಾ ವಿಪತ್ತು ನಿರ್ವಹಣೆ ಮತ್ತಿತರ ಕಾರ್ಯಗಳು ಈ ಇಲಾಖೆಯ ಅಧೀನದಲ್ಲೇ ಇದ್ದು, ಇಲ್ಲಿ ನೌಕರರು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗಿದೆ ಎಂದರು.

ಜಿಲ್ಲೆಯಲ್ಲಿ ಉತ್ತಮ ಕಾರ್ಯನಿರ್ವಹಣೆ ಹಾಗೂ ರೈತರು, ಜನಸಾಮಾನ್ಯರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ತಮ್ಮ ಪ್ರಯತ್ನಕ್ಕೆ ನೌಕರರ ಸಂಘ ಸಹಕಾರ ನೀಡಬೇಕು ಎಂದು ಕೋರಿದರು.

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ. ಸುರೇಶ್‌ಬಾಬು, ಜಿಲ್ಲಾ ಕಾರ್ಯದರ್ಶಿ ಅಜಯ್‌ಕುಮಾರ್, ರಾಜ್ಯ ಪರಿಷತ್ ಸದಸ್ಯ ಗೌತಮ್, ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ರವಿಚಂದ್ರ, ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಕೆಜಿಎಫ್ ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ, ಜಂಟಿ ಕಾರ್ಯದರ್ಶಿ ಅಂಕಿಅಂಶಗಳ ಇಲಾಖೆಯ ರವಿ, ಬಂಗಾರಪೇಟೆ ತಹಸೀಲ್ದಾರ್ ರಶ್ಮಿ, ಸರ್ವೇ ಇಲಾಖೆಯ ರವಿ, ಮಲ್ಲೇಶ್, ಸುಭಾಷ್, ಕೆಜಿಎಫ್‌ನ ಉಮೇಶ್ ಇದ್ದರು.