ಎಲ್ಲರೂ ಕೂಡಿ ಸಮಾಜ ಕಟ್ಟುವ ಕೆಲಸ ಮಾಡೋಣ: ಜಗದೀಶ ಶೆಟ್ಟರ್‌

| Published : Sep 01 2024, 01:51 AM IST

ಸಾರಾಂಶ

ವೀರಶೈವ ಲಿಂಗಾಯತ ಸಮಾಜದ ಉಪ ಪಂಗಡಗಳು ಶಕ್ತಿಶಾಲಿಯಾಗಿ ಬೆಳೆಯಬೇಕು. ಇದರಿಂದ ವೀರಶೈವ ಲಿಂಗಾಯತ ಸಮಾಜಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಬದಲಾಗಿ ಉಪ ಪಂಗಡಗಳಲ್ಲಿ ಜನ ಎಷ್ಟು ಸ್ಥಿತಿವಂತರಾಗಿದ್ದಾರೆ, ಎಷ್ಟು ಸೌಲಭ್ಯ ವಂಚಿತರಾಗಿದ್ದಾರೆಂದು ಲೆಕ್ಕ ಹಾಕುವುದಕ್ಕೆ ಅನುಕೂಲವಾಗಲಿದೆ.

ಕನ್ನಡಪ್ರಭ ವಾರ್ತೆ ಚವಡಾಪುರ

ನಾವು ಸಮಾಜ ಜೀವಿಗಳು ಹೀಗಾಗಿ ಎಲ್ಲರೂ ಕೂಡಿಕೊಂಡು ಸಮಾಜ ಕಟ್ಟುವ ಕೆಲಸ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ್ ತಿಳಿಸಿದರು.

ಅಫಜಲ್ಪುರ ಪಟ್ಟಣದ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆದ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು, ಅಫಜಲ್ಪುರ ಘಟಕದ ವತಿಯಿಂದ ನಡೆದ ಬಣಜಿಗ ಸಮಾಜದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ವೀರಶೈವ ಲಿಂಗಾಯತ ಸಮಾಜದ ಉಪ ಪಂಗಡಗಳು ಶಕ್ತಿಶಾಲಿಯಾಗಿ ಬೆಳೆಯಬೇಕು. ಇದರಿಂದ ವೀರಶೈವ ಲಿಂಗಾಯತ ಸಮಾಜಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಬದಲಾಗಿ ಉಪ ಪಂಗಡಗಳಲ್ಲಿ ಜನ ಎಷ್ಟು ಸ್ಥಿತಿವಂತರಾಗಿದ್ದಾರೆ, ಎಷ್ಟು ಸೌಲಭ್ಯ ವಂಚಿತರಾಗಿದ್ದಾರೆಂದು ಲೆಕ್ಕ ಹಾಕುವುದಕ್ಕೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಉಪ ಪಂಗಡಗಳ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದ ಅವರು ನಾನು ಮುಖ್ಯಮಂತ್ರಿಯಾಗಿದ್ದಾಗ ಸಮಾಜದ ಕಲ್ಯಾಣಕ್ಕಾಗಿ ಕೆಲಸ ಮಾಡಿದ್ದೇನೆ. ಧಾರವಾಡದಲ್ಲಿ 2 ಎಕರೆ ಜಾಗ ಮೀಸಲಿರಿದಿದ್ದೇನೆ. ಮುಂದೆ ಕೂಡ ಸಮಾಜದ ಒಳಿತಿಗಾಗಿ ಎಲ್ಲಿ ಸಂಘಟನೆಯಾದರೂ ನಾನು ಬಂದು ಸಂಘಟನೆಗೆ ಶಕ್ತಿ ತುಂಬಲು ಸಿದ್ದನಿದ್ದೇನೆ ಎಂದರು.

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ ಬಣಜಿಗ ಸಮಾಜ ಇತರೆ ಎಲ್ಲಾ ಸಮಾಜಗಳೊಂದಿಗೆ ಸ್ನೇಹ ಪ್ರೀತಿಯಿಂದ ಇರುವ ಸಮಾಜವಾಗಿದೆ ಹೀಗಾಗಿ 7 ಜನ ನಮ್ಮ ಸಮಾಜದವರನ್ನು ರಾಜ್ಯದ ಮುಖ್ಯಮಂತ್ರಿಗಳನ್ನಾಗಿ ಮಾಡಲಾಗಿದೆ. ನಮ್ಮ ಸಮಾಜದಲ್ಲಿ ಸಾಕಷ್ಟು ಜನ ಶ್ರೀಮಂತರಿದ್ದೇವೆ. ಎಲ್ಲೋ ಕೆಲವೊಂದಿಷ್ಟು ಬಡವರು ಉಳಿದುಕೊಂಡಿದ್ದಾರೆ. ಅವರಿಗೆಲ್ಲಾ ಸ್ಥಿತಿವಂತರಾಗಿದ್ದವರು ಸಹಾಯ ಮಾಡಿದರೆ ಅವರ ಬದುಕು ಕೂಡ ಉತ್ತಮಗೊಳ್ಳುತ್ತದೆ. ಸರ್ಕಾರವೇ ಎಲ್ಲರಿಗೂ ಸಹಾಯ ಮಾಡಬೇಕೆಂದೇನು ಇಲ್ಲ. ನಮ್ಮ ಜನರ ಬದುಕು ಉತ್ತಮಗೊಳ್ಳುವುದಕ್ಕೆ ನಾವುಗಳೇ ಸಹಾಯ ಹಸ್ತ ಚಾಚಿದರೂ ಸಾಕಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ಮಾತನಾಡಿ ಬಣಜಿಗ ಸಮಾಜದವರು ಸದಾ ಕ್ರೀಯಾಶೀಲರಾಗಿದ್ದಾರೆ. ಅವರು ಎಲ್ಲಾ ಸಮಾಜಗಳೊಂದಿಗೆ ಸದಾ ಸಹಬಾಳ್ವೆಯನ್ನು ಹೊಂದಿದ್ದಾರೆ ಎಂದ ಅವರು ತಾಲೂಕಿನಲ್ಲಿ ಬಣಜಿಗ ಸಮಾಜದಕ್ಕೆ ಬೇಕಾದ ಸೌಕರ್ಯಗಳನ್ನು ಕಲ್ಪಿಸಲು ಸಿದ್ದರಿರುವುದಾಗಿ ತಿಳಿಸಿದರು.

ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು. ತಾಲೂಕು ಬಣಜಿಗ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಬಸಣ್ಣ ಗುಣಾರಿ ಅಧ್ಯಕ್ಷತೆ ವಹಿಸಿದ್ದರು. ಬಣಜಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಅಮರನಾಥ ಪಾಟೀಲ್, ಅಂದಪ್ಪ ಜವಳಿ, ಮಹಾಂತೇಶ ನೂಲಾ, ಶರಣು ಶೆಟ್ಟಿ, ಜಯಶ್ರೀ ಉಪ್ಪಿನ, ಮಹಾಂತೇಶ ನೂಲಾ, ಸಿದ್ದು ಪತಾಟೆ, ಸುಭಾಷ ಲಿಂಗಶೆಟ್ಟಿ, ಮುರುಗೇಂದ್ರ ಮಸಳಿ, ರಾಜಶೇಖರ ಜೋಗೂರ, ಧಾನು ಪತಾಟೆ, ಶೈಲೇಶ ಗುಣಾರಿ, ಡಾ. ಶರಣಬಸಪ್ಪ ಎಂ ದಾಮಾ, ಮಲ್ಲಪ್ಪ ಗುಣಾರಿ, ಚಂದ್ರಶೇಖರ ಕರ್ಜಗಿ, ಗುರುಪಾದಪ್ಪ ಪತಾಟೆ ಸೇರಿದಂತೆ ಅನೇಕರು ಇದ್ದರು.