ಸಫಾಯಿ ಕರ್ಮಚಾರಿಗಳಿಗೆ ಕಾನೂನಾತ್ಮಕ ಸೌಲಭ್ಯ ಸಿಗಲಿ

| Published : Jun 14 2024, 01:00 AM IST

ಸಫಾಯಿ ಕರ್ಮಚಾರಿಗಳಿಗೆ ಕಾನೂನಾತ್ಮಕ ಸೌಲಭ್ಯ ಸಿಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಸಫಾಯಿ ಕರ್ಮಚಾರಿಗಳಿಗೆ ತೊಂದರೆ, ಕಿರುಕುಳ ಆದರೆ ಜಿಲ್ಲಾಧಿಕಾರಿ ಸಂಪರ್ಕಿಸಿ, ಮಾಹಿತಿ ನೀಡಬೇಕು ಮತ್ತು ಆಯೋಗಕ್ಕೆ ದೂರು ಸಲ್ಲಿಸಲು ಬಯಸಿದಲ್ಲಿ ದೂರವಾಣಿ ಸಂಖ್ಯೆ -01124648924ಗೆ ಕರೆ ಮಾಡಿ ತಿಳಿಸಬಹುದು.

ಧಾರವಾಡ:

ಸಫಾಯಿ ಕರ್ಮಚಾರಿಗಳಾಗಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೆ ರಾಷ್ಟ್ರೀಯ ಮತ್ತು ರಾಜ್ಯ ಸರ್ಕಾರಗಳಿಂದ ಕಾನೂನಾತ್ಮಕವಾಗಿ ಸಿಗಬೇಕಾದ ಸೌಲಭ್ಯ ಪೂರೈಸುವುದು ಆಯಾ ಸ್ಥಳೀಯ ಸಂಸ್ಥೆ, ಇಲಾಖೆಗಳ ಮುಖ್ಯಸ್ಥರ ಕರ್ತವ್ಯ. ಸವಲತ್ತು ನೀಡುವಲ್ಲಿ ಅನಗತ್ಯ ವಿಳಂಬ ಅಥವಾ ತಿರಸ್ಕರಿಸಿದರೆ ಅಧಿಕಾರಿಗಳ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ರಾಷ್ಟ್ರೀಯ ಸಫಾಯಿ ಕಾರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ವೆಂಕಟೇಶನ್ ತಿಳಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ಸಫಾಯಿ ಕರ್ಮಚಾರಿಗಳ ಸೌಲಭ್ಯ ಮತ್ತು ಸಮಸ್ಯೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ಜರುಗಿಸಿದ ಅವರು, ಪೌರ ಕಾರ್ಮಿಕರಿಗೆ ಕನಿಷ್ಠ ವೇತನ ಖಾತರಿಪಡಿಸಬೇಕು. ಅವರಿಗೆ ಉತ್ತಮ ಉಪಾಹಾರ, ಊಟ ನೀಡಬೇಕು. ಪುರುಷ ಮತ್ತು ಮಹಿಳಾ ಪೌರ ಕಾರ್ಮಿಕರಿಗೆ ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿ ಕಲ್ಪಿಸಬೇಕು. ಸರಂಕ್ಷಣ ಕವಚ, ಸಮವಸ್ತ್ರ, ಗಮ್‍ಬೂಟ್ ವಿತರಿಸಬೇಕು ಎಂದ ಅವರು, ಕಲಘಟಗಿ, ಅಳ್ನಾವರ ಪಟ್ಟಣ ಪಂಚಾಯಿತಿಗಳಲ್ಲಿ ಪೌರ ಕಾರ್ಮಿಕರಿಗೆ ನಿಯಮಿತವಾಗಿ ಮಾಸಿಕ ವೇತನ ಆಗುತ್ತಿಲ್ಲ ಎಂಬುದನ್ನು ತಿಳಿದು, ಅಲ್ಲಿನ ಮುಖ್ಯಾಧಿಕಾರಿಗಳಿಗೆ ಮುಂದಿನ ಎರಡ್ಮೂರು ದಿನಗಳಲ್ಲಿ ವೇತನ ಪಾವತಿಸುವಂತೆ ಅಧ್ಯಕ್ಷರು ನಿರ್ದೇಶನ ನೀಡಿದರು.

ಪೌರ ಕಾರ್ಮಿಕರಿಂದ, ಪೌರ ಕಾರ್ಮಿಕ ಸಂಘಟನೆಗಳಿಂದ ಸಮಸ್ಯೆ ಆಲಿಸಿದ ಆಯೋಗದ ಅಧ್ಯಕ್ಷರು, ಮುಂದಿನ ಆರು ತಿಂಗಳಲ್ಲಿ ಪರಿಹರಿಸಿ, ವರದಿ ನೀಡಬೇಕು. ಸಫಾಯಿ ಕರ್ಮಚಾರಿಗಳಿಗೆ ತೊಂದರೆ, ಕಿರುಕುಳ ಆದರೆ ಜಿಲ್ಲಾಧಿಕಾರಿ ಸಂಪರ್ಕಿಸಿ, ಮಾಹಿತಿ ನೀಡಬೇಕು ಮತ್ತು ಆಯೋಗಕ್ಕೆ ದೂರು ಸಲ್ಲಿಸಲು ಬಯಸಿದಲ್ಲಿ ದೂರವಾಣಿ ಸಂಖ್ಯೆ -01124648924ಗೆ ಕರೆ ಮಾಡಿ ತಿಳಿಸಬಹುದು. ಸೂಕ್ತ ತನಿಖೆ ನಡೆಸಿ ಪರಿಹರಿಸಲಾಗುವುದು ಮತ್ತು ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಪೌರ ಕಾರ್ಮಿಕರಿಗೆ ಸಮಸ್ಯೆಗಳಿದ್ದಲ್ಲಿ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ದೂರು ಸಲ್ಲಿಸಿ. ಗೃಹಭಾಗ್ಯ ಯೋಜನೆಯಲ್ಲಿ 468 ಕಾಯಂ ಪೌರಕಾರ್ಮಿಕರ ಪೈಕಿ 378 ಮನೆ ಒದಗಿಸಲಾಗಿದ್ದು, 89 ಕಾರ್ಮಿಕರಿಗೆ ನಿವೇಶನ ಇಲ್ಲದೆ ಇರುವುದರಿಂದ ಮನೆ ಕಲ್ಪಿಸಿಲ್ಲ. ಅವಳಿನಗರಗಳಲ್ಲಿ ಮೂರು ಅಂತಸ್ಥಿನ 320 ಮನೆ ಕಟ್ಟಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಮಹಾನಗರ ಪಾಲಿಕೆ ವ್ಯಾಪ್ತಿಯ ಕಾರ್ಮಿಕರಿಗೆ ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ, ಸಮವಸ್ತ್ರ ಹಾಗೂ ಸುರಕ್ಷಾ ಪರಿಕರ ನೀಡಲಾಗಿದೆ. ಮ್ಯಾನ್‍ಹೊಲ್ ಸ್ವಚ್ಛತೆಗೆ ಮಾನವ ಬಳಕೆ ನಿಷೇಧಿಸಲಾಗಿದೆ ಎಂದರು.

ಪಾಲಿಕೆಯ 82 ವಾರ್ಡ್‌ಗಳಲ್ಲಿ ಕಾರ್ಮಿಕರಿಗಾಗಿ ಭೀಮಾಶ್ರಯ ವಿಶ್ರಾಂತಿ ಕೊಠಡಿ ನಿರ್ಮಿಸಿದ್ದು, 25 ಕೊಠಡಿ ಹಸ್ತಾಂತರಿಸಬೇಕಿದೆ. 7 ಕೊಠಡಿಗಳಲ್ಲಿ ನೀರು ಸರಬರಾಜು ವ್ಯವಸ್ಥೆ ಬಾಕಿಯಿದ್ದು, ಶೀಘ್ರವೇ ಪೂರ್ಣಗೊಳಿಸಲಾಗುವುದೆಂದು ತಿಳಿಸಿದರು. ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ರಮೇಶ ಬಿ., ಮಾತನಾಡಿದರು.

ವೇದಿಕೆಯಲ್ಲಿ ಉಪ ಪೊಲೀಸ್ ಆಯುಕ್ತ ಕುಶಲ್ ಚೌಕ್ಸೆ, ಎಸ್ಪಿ ಡಾ. ಗೋಪಾಲ ಬ್ಯಾಕೋಡ ಇದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭಾ ಇದ್ದರು. ಡಿಸಿ ಅನುವಾದ:

ಆಯೋಗದ ಅಧ್ಯಕ್ಷ ಎಂ. ವೆಂಕಟೇಶನ್ ತಮಿಳು ಮೂಲದವರು. ಕನ್ನಡ ಭಾಷೆ ಬರದೆ ಇರುವುದರಿಂದ ಸಭೆಯಲ್ಲಿನ ಅವರ ಸೂಚನೆ, ಪ್ರಶ್ನೆ, ನಿರ್ದೇಶನ ಅನುವಾದಿಸಿ, ಅಚ್ಚ ಕನ್ನಡದಲ್ಲಿ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ, ಪೌರ ಕಾರ್ಮಿಕರಿಗೆ ತಿಳಿಸಿ, ಅವರ ಉತ್ತರಗಳನ್ನು ತಮಿಳಿಗೆ ಭಾಷಾಂತರಿಸಿ, ಅಧ್ಯಕ್ಷರಿಗೆ ತಿಳಿಸಿದರು.