ಶಾಲೆಗಳು ಕಲೆ, ಸಂಸ್ಕೃತಿ, ಕಲೆಯ ಪೀಠಗಳಾಗಲಿ: ಶಂಕರ ಹಲಗತ್ತಿ

| Published : Mar 20 2025, 01:19 AM IST

ಶಾಲೆಗಳು ಕಲೆ, ಸಂಸ್ಕೃತಿ, ಕಲೆಯ ಪೀಠಗಳಾಗಲಿ: ಶಂಕರ ಹಲಗತ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯದ ಪೋಷಣೆಯಿಲ್ಲವೋ ಅದು ಶಿಕ್ಷಣವೇ ಅಲ್ಲ. ಶಾಲೆಗಳು ಕಲೆ, ಸಂಸ್ಕೃತಿ, ಕಲೆಯ ಪೀಠಗಳಾಗಲಿ ಎಂದು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅಭಿಪ್ರಾಯ ಪಟ್ಟರು

ಹುಬ್ಬಳ್ಳಿ: ಓದು, ಅಂಕಗಳು, ರ‍್ಯಾಂಕ್‌ಗಳ ಮಧ್ಯೆ ಮಕ್ಕಳ ಬದುಕು ಒತ್ತಡದಲ್ಲಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು, ದೃಢಸಂಕಲ್ಪವನ್ನು ಬಿತ್ತುವಂತಾಗಬೇಕು. ಎಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯದ ಪೋಷಣೆಯಿಲ್ಲವೋ ಅದು ಶಿಕ್ಷಣವೇ ಅಲ್ಲ. ಶಾಲೆಗಳು ಕಲೆ, ಸಂಸ್ಕೃತಿ, ಕಲೆಯ ಪೀಠಗಳಾಗಲಿ ಎಂದು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅಭಿಪ್ರಾಯ ಪಟ್ಟರು.

ಡಿ.ಎಸ್.ಇ.ಆರ್.ಟಿ. ಸಹಯೋಗದಲ್ಲಿ ಇಂಡಿಯಾ ಫೌಂಡೇಶನ್ ಫಾರ್ ಆರ್ಟ್ಸ್, ಕಲಿ- ಕಲಿಸು ಕಲಾ ಅಂತರ್ಗತ ಕಲಿಕಾ ಯೋಜನೆಯ ಅಂಗವಾಗಿ ತಾಲೂಕಿನ ಕಿರೇಸೂರ ಸರ್ಕಾರಿ ಪ್ರೌಢಶಾಲಾ ಆವರಣದ ಅರಳಿಕಟ್ಟೆ ತೆರೆದ ವಾಚನಾಲಯದಲ್ಲಿ ಮೂರು ದಿನಗಳ ಕಲಾಶಿಬಿರ ಉದ್ಘಾಟಿಸಿ ಮಾತನಾಡಿದರು.

ಪಠ್ಯಪುಸ್ತಕ ಜ್ಞಾನ ಪರೀಕ್ಷೆಯ ನಂತರ ಮರೆತುಹೋಗಬಹುದು. ಆದರೆ, ಜೀವನಾನುಭವ ನೀಡುವ ಕಲಾ ಶಿಬಿರಗಳು ಮಕ್ಕಳಲ್ಲಿ ಸಂತೋಷವನ್ನು, ನಿರ್ಭೀತಿಯನ್ನುಂಟು ಮಾಡುವಲ್ಲಿ ಸಹಕಾರಿಯಾಗುತ್ತವೆ. ಇಂತಹ ಶಿಬಿರಗಳಿಂದ ಮಕ್ಕಳು ತಮ್ಮ ಗ್ರಾಮದ ಇತಿಹಾಸ, ಕೆರೆ, ಬಾವಿ, ಹಳ್ಳ, ಕೊಳ್ಳ, ಜನ, ದನ, ಪ್ರಾಣಿ, ಪಕ್ಷಿ, ಮರಗಳನ್ನು ಅರಿತುಕೊಳ್ಳುತ್ತಾರೆ. ಮಕ್ಕಳನ್ನು ಪರಿಪೂರ್ಣ ಮಾನವನನ್ನಾಗಿ ಮಾಡಲು ಶಿಬಿರ ಸಹಕಾರಿ ಎಂದರು. ಅತಿಥಿಗಳಾಗಿ ಆಗಮಿಸಿದ್ದ ಚಿಂತಕ ಎಂ.ಎಂ. ಚಿಕ್ಕಮಠ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಎಚ್. ನಾಯಕ, ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಮಾಜಿ ಅಧ್ಯಕ್ಷ ಎಚ್.ವಿ. ಚೌರಡ್ಡಿ, ವೈ.ಎಸ್. ರೇವಡಿಹಾಳ, ಮುತ್ತು ಗಾಳಪ್ಪನವರ ಮಾತನಾಡಿದರು. ಅರಳಿಕಟ್ಟೆ ಸಂಯೋಜಕ ಡಾ. ಲಿಂಗರಾಜ ರಾಮಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಚಿಲಿಪಿಲಿ ಗುಬ್ಬಚ್ಚಿ ಗೂಡಿನಿಂದ ಸುಮಾರು 500ಕ್ಕೂ ಹೆಚ್ಚು ಪುಸ್ತಕಗಳನ್ನು ಶಾಲಾ ಪುಸ್ತಕ ಜೋಳಿಗೆಗೆ ದಾನ ನೀಡಲಾಯಿತು. ಸಂಗಪ್ಪ ಸವದತ್ತಿ, ಸಂಪನ್ಮೂಲ ವ್ಯಕ್ತಿ ರವಿ ದೇವರಡ್ಡಿ, ಕಳಕಪ್ಪ ಜಲ್ಲಿಗೇರಿ, ಶಿಕ್ಷಕ ಅಶೋಕ ಈರಗಾರ, ಸುಲೋಚನಾ ಬೆಳಗಾವಿ, ಜಯಶ್ರೀ ಎಂ. ಶಂಭುಲಿಂಗಪ್ಪ ಪೂಜಾರ ಉಪಸ್ಥಿತರಿದ್ದರು.