ವಿಜ್ಞಾನ, ಗಣಿತ ಶಿಕ್ಷಕರು ಇನ್ನಷ್ಟು ಪರಿಪೂರ್ಣತೆ ಸಾಧಿಸಲಿ

| Published : Dec 01 2024, 01:34 AM IST

ಸಾರಾಂಶ

ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳು ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಹಿನ್ನಡೆ ಕಂಡುಬಂದಿದ್ದು, ಶಿಕ್ಷಕರು ಇನ್ನಷ್ಟು ಅಪ್‌ಗ್ರೇಡ್ ಆಗುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ಅಭಿಪ್ರಾಯಪಟ್ಟಿದ್ದಾರೆ.

- ಮಿಟ್ಲಕಟ್ಟೆ ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಉದ್ಘಾಟಿಸಿ ಜಿಪಂ ಸಿಇಒ ಸಲಹೆ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳು ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಹಿನ್ನಡೆ ಕಂಡುಬಂದಿದ್ದು, ಶಿಕ್ಷಕರು ಇನ್ನಷ್ಟು ಅಪ್‌ಗ್ರೇಡ್ ಆಗುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಮಿಟ್ಲಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಇಂಡಿಯಾ ಸುಧಾರ್ ಮತ್ತು ಪವರ್ ಸ್ಕೂಲ್ ನಿರ್ಮಿಸಿದ ನೂತನ ಶೌಚಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಪ್ರಸ್ತುತ ೧೧೦ ಶೌಚಾಲಯಗಳು ನಿರ್ಮಾಣಗೊಂಡಿದ್ದು, ೨೪೦ ಶೌಚಾಲಯಗಳು ನಿರ್ಮಾಣ ಹಂತದಲ್ಲಿದೆ ಎಂದರು.

ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರತಿ ತಿಂಗಳ ಕಿರುಪರೀಕ್ಷೆಯಲ್ಲಿ ಗೈರಾಗುತ್ತಿದ್ದಾರೆ. ಆ ವಯಸ್ಸಿನ ಬಾಲಕಿಯರು ಬಾಲ್ಯವಿವಾಹವಾಗುವ ಮಾಹಿತಿಯೂ ಇದೆ. ಇಂಥ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಪೋಷಕರು ತಮ್ಮ ಜವಾಬ್ದಾರಿಯನ್ನು ಅರಿಯಬೇಕಾಗಿದೆ. ಶಾಲೆ ಮಕ್ಕಳಿಗೆ ಬಿಸಿಯೂಟ ಸೌಲಭ್ಯ ಇದ್ದರೂ ರಕ್ಷಹೀನತೆ, ಚರ್ಮ ಕಾಯಿಲೆ, ಅನಿಮೀಯಾ ಸಮಸ್ಯೆ ಕಂಡುಬಂದಿದೆ. ಈ ಕುರಿತ ಎಲ್ಲರೂ ಗಮನಿಸಿ, ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಗ್ರಾಪಂ ವ್ಯಾಪ್ತಿಯ ಜನಪ್ರತಿನಿಧಿಗಳು, ಅಧಿಕಾರಿಗಳು ನಿಗದಿಯಾದ ಸಮಯಕ್ಕೆ ಮಕ್ಕಳ ಗ್ರಾಮಸಭೆ ನಡೆಸದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಶಾಲಾ ಮೈದಾನ, ಶೌಚಾಲಯ ಇತರೆ ಮೂಲಸೌಕರ್ಯಗಳಿಗೆ ಆದ್ಯತೆ ನೀಡಬೇಕೆಂದು ತಿಳಿಸಿದರು.

ಪವರ್ ಸ್ಕೂಲ್ ಕಂಪನಿ ಮುಖ್ಯಸ್ಥ ಪ್ರಕಾಶಂ ಮಾತನಾಡಿ, ಕರ್ನಾಟಕದಲ್ಲಿನ ಎಲ್ಲ ಕಂಪನಿಗಳಿಂದ ಒಟ್ಟು ₹೩ ಸಾವಿರ ಕೋಟಿ ಸಾಮಾಜಿಕ ಹೊಣೆಗಾರಿಕೆಯ ನಿಧಿ ಇದೆ. ಗ್ರಾಮಾಂತರ ಭಾಗಗಳಿಗೆ ವಿನಿಯೋಗಿಸಲು ಕಂಪನಿಗಳು ಉತ್ಸುಕರಾಗಬೇಕಿದೆ. ನಮ್ಮ ಕಂಪನಿಯಿಂದ ಗ್ರಾಮಾಂತರ ಶಾಲೆಗಳಿಗೆ ಶೌಚಾಲಯ, ಆಟಿಕೆ ಮತ್ತು ಕ್ರೀಡಾ ಸಾಮಗ್ರಿಗಳನ್ನು ನೀಡಲು ಬಯಸಿದ್ದೇವೆ ಹಾಗೂ ಶಿಕ್ಷಕರಿಗೂ ತರಬೇತಿ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ದುರ್ಗಪ್ಪ, ಕಳೆದ 4 ವರ್ಷದಲ್ಲಿ ತಾಲೂಕಿನಲ್ಲಿ ₹೨ ಕೋಟಿಗೂ ಹೆಚ್ಚು ಸಿಎಸ್‌ಆರ್ ಫಂಡ್ ಶಾಲೆಗಳಿಗೆ ವಿನಿಯೋಗಿಸಲಾಗಿದೆ. ೪೦ ಸಾವಿರ ಮಕ್ಕಳು ಸೌಲಭ್ಯಗಳನ್ನು ಪಡೆದಿದ್ದಾರೆ. ಈ ಹಂತದಲ್ಲಿ ಶಿಕ್ಷಕ ಶರಣ ಕುಮಾರ್ ಹೆಗ್ಡೆ ಅವರ ತಂಡದ ಪರಿಶ್ರಮ ಗಮನೀಯ ಎಂದರು.

ಇಂಡಿಯಾ ಸುಧಾರ್ ಸಂಸ್ಥೆಯ ಕಿರಣ್ ಮಾತನಾಡಿ, ಹರಿಹರ ತಾಲೂಕಿನಲ್ಲಿ ೧೬ ಶಾಲೆಗಳಿಗೆ ಶೌಚಾಲಯ ನಿರ್ಮಿಸಿದ್ದು, ವರ್ಷದ ನಂತರ ಸಮೀಕ್ಷೆ ನಡೆಸಿ, ಶೌಚಾಲಯಗಳ ಬಳಕೆ, ಸ್ವಚ್ಛತೆ, ವಿದ್ಯಾರ್ಥಿಗಳ ಹಾಜರಾತಿ ಪಡೆಯುತ್ತೇವೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಮಾತನಾಡಿ, ನರೇಗಾ ಯೋಜನೆಯಲ್ಲಿ ಶಾಲಾ ಮೈದಾನವನ್ನು ಸಮತಟ್ಟು ಮಾಡಿ, ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು ಎಂದರು.

ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್‌ಕುಮಾರ್ ಹೆಗಡೆ, ಸರ್ಕಾರಿ ನೌಕರರ ಸಂಘದ ಖಚಾಂಚಿ ಗಿರೀಶ್, ವಿವಿಧ ಸಂಘಟನೆಗಳ ಶಿಕ್ಷಕರಾದ ಸತೀಶ್, ಮಲ್ಲಿಕಾರ್ಜುನ್, ಮಂಜಪ್ಪ ಬಿದರಿ, ಆನಂದ್, ಕೆ.ಭೀಮಪ್ಪ, ಹನುಮಂತ ನಾಯ್ಕ್, ಮುಖಂಡರಾದ ಚಂದ್ರಪ್ಪ, ಮನೋಹರ್, ವಿವಿಧ ಕಂಪನಿಗಳ ವಿನೋದ್ ಮುರುಗೋಡ್, ಸೌಂದರ್ಯ ರಾಜನ್, ಗ್ರಾಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ, ಚನ್ನಬಸಪ್ಪ, ಪಿಡಿಒ ರವಿ, ಗ್ರಾಪಂ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

- - - -೩೦ಎಂಬಿಆರ್೧:

ಮಿಟ್ಲಕಟ್ಟೆ ಸರ್ಕಾರಿ ಶಾಲೆಯಲ್ಲಿ ಜಿಪಂ ಸಿಇಒ ಸುರೇಶ್ ಇಟ್ನಾಳ್ ಶೌಚಾಲಯವನ್ನು ಉದ್ಘಾಟಿಸಿದರು.