ಸಾರಾಂಶ
ಶಿವಮೊಗ್ಗ ದಸರಾದ ಕೊನೆಯ ದಿನ ನಡೆಯುವ ಬನ್ನಿ ಮುಡಿಯುವ ಸಂದರ್ಭದಲ್ಲಿ ರಾಜಕಾರಣಿಗಳ ಹಿಂಬಾಲಕರ ಹಾವಳಿಗೆ ನಿಯಂತ್ರಣ ಹೇರಬೇಕು ಎಂದು ಆಗ್ರಹಿಸಿ ಸಾಮಾನ್ಯ ನಾಗರೀಕರ ಒಕ್ಕೂಟದ ಪ್ರಮುಖರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಾಡಹಬ್ಬ ದಸರಾದಲ್ಲಿ ಬನ್ನಿ ಮುಡಿಯುವ ಸಂದರ್ಭವು ರಾಜಕಾರಣಗಳ ಶಕ್ತಿ ಪ್ರದರ್ಶನದ ಅಖಾಡವಾಗಬಾರದು. ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾಮಾನ್ಯ ನಾಗರೀಕರ ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.ಶಿವಮೊಗ್ಗ ದಸರಾ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ತನ್ನದೇ ಆದ ವಿಶೇಷತೆಯಿದ್ದು, ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಬನ್ನಿ ಮುಡಿಯುವ ಸಂದರ್ಭದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಲಕ್ಷಾಂತರ ಜನರು ಸೇರುತ್ತಾರೆ.ನಗರದ ಎಲ್ಲ ದೇವಾನುದೇವತೆಗಳ ದರ್ಶನವಿದ್ದು, ಇಂತಹ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ಸಾರ್ವಜನಿಕರು ಕಾಯುತ್ತಿರುತ್ತಾರೆ. ಆದರೆ ಈ ಸಂರ್ಭದಲ್ಲಿ ರಾಜಕಾರಣಿಗಳ ಹಿಂಬಾಲಕರು ವೇದಿಕೆಗೆ ನುಗ್ಗುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗು ಕಾರಣ ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ವೇದಿಕೆಯಲ್ಲಿ ನಿಂತು ಕೈ ಬೀಸುವುದು, ತಮ್ಮ ನಾಯಕರ ಪರವಾಗಿ ಘೋಷಣೆ ಕೂಗುವುದು, ಶಕ್ತಿ ಪ್ರದರ್ಶನ ಮಾಡುವುದು ಮಾಡುತ್ತಾರೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ ಎಂದು ಮನವಿದಾರರು ತಿಳಿಸಿದರು.ಸಂಸದರು, ಸಚಿವರು, ಶಾಸಕರು, ಅಧಿಕಾರಿಗಳು, ಪುರೋಹಿತರನ್ನು ಬಿಟ್ಟು ಇತರೆ ಯಾವ ಹಿಂಬಾಲಕರಿಗೂ ಇಲ್ಲಿ ಕೂಗುವುದಕ್ಕಾಗಲಿ, ವೇದಿಕೆಯನ್ನು ಬಲವಂತವಾಗಿ ಹತ್ತುವುದಕ್ಕಾಗಲಿ ಅವಕಾಶ ಕೊಡಕೂಡದು. ಅಲ್ಲದೇ ಕೆಲವು ಹಿಂಬಾಲಕರು ಸಾರ್ವಜನಿಕರನ್ನು ಬೆದರಿಸುವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದು ಕೋರಿದ್ದಾರೆ.
ಈ ಸಂದರ್ಭದಲ್ಲಿ ವಕೀಲರಾದ ಸುರೇಶ್ ಬಾಬು, ನಿರಂಜನ್, ಹಾಗೂ ಸಾಮಾನ್ಯ ನಾಗರೀಕರ ಒಕ್ಕೂಟದ ಪ್ರಮುಖರಾದ ಮೋಹನ್, ಯಶ್ವಂತ್ ಶೆಟ್ಟಿ, ಕಾರ್ತಿಕ್ ವಿಶ್ವನಾಥ್, ರಾಜು, ಸಿದ್ದು, ಗುರು ಸೇರಿದಂತೆ ಹಲವರಿದ್ದರು.