ಸಾರಾಂಶ
ಮುದಗಲ್ ಸಮೀಪದ ಸುಕ್ಷೇತ್ರ ಅಂಕಲಿ ಮಠದಲ್ಲಿ ಗುರುವಂದನಾ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ಕನ್ನಡಪ್ರಭ ವಾರ್ತೆ ಮುದಗಲ್
ಜಾತಿ ಮತ ಪಂಥ ತೊರೆದು ಭಾವೈಕ್ಯತೆಗೆ ಹೆಸರಾಗಿ ಶ್ರೀಮಠಕ್ಕೆ ಆಗಮಿಸುವ ಭಕ್ತರನ್ನು ಉದ್ಧರಿಸಿ ಸ್ವಾರ್‍ಯಸದ ಬದುಕು ಸಾಗಿಸಲು ಅಂಕಲಿ ಮಠ ಪ್ರೇರಣೆಯಾಗಲಿ ಎಂದು ಶಿರಹಟ್ಟಿ ಜಗದ್ಗುರು ಫಕೀರ ಸಿದ್ದರಾಮ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.ಮುದಗಲ್ ಸಮೀಪದ ಸುಕ್ಷೇತ್ರ ಅಂಕಲಿ ಮಠದಲ್ಲಿ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಗುರುವಂದನಾ ಕಾರ್ಯಕ್ರವನ್ನು ಉದ್ಘಾಟಿಸಿ ಆಶೀರ್ವಚ ನೀಡಿ, ಅಂಕಲಿ ಮಠಕ್ಕೂ ಶಿರಹಟ್ಟಿ ಮಠಕ್ಕೂ ಅವಿನಾಭಾವ ಸಂಬಂಧವಿದ್ದು ಎರಡು ಮಠಗಳು ಭಕ್ತರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸುತ್ತಿವೆ. ಭಾರತ ದೇಶದ ತ್ರಿವರ್ಣ ಧ್ವಜದಲ್ಲಿನ ಬಣ್ಣ ಹೋಲುವಂತೆ ಶ್ರೀಮಠದ ಪೀಠಾಧಿಪತಿ ಧರಿಸುವ ಉಡುಪು ಕೂಡ ತ್ರಿವರ್ಣ ಧ್ವಜದ ಬಣ್ಣ ಬಿಂಬಿಸುವುದರ ಮೂಲಕ ಭಾವೈಕ್ಯತೆಗೆ ಹೆಸರಾಗಿದೆ ಎಂದು ಬಣ್ಣಿಸಿದರು.ಗುರುವಂದನಾ ಕಾರ್ಯಕ್ರಮದಲ್ಲಿ ಶ್ರೀಗಳ ತುಲಾಭಾರ ಎಲ್ಲರ ಗಮನ ಸೆಳೆದಿದ್ದು, ವೀರಭದ್ರ ಸ್ವಾಮೀಜಿಗಳಿಗೆ ಶುಭ ಕೋರಿದರು. ಹುನಗುಂದ ಮತ ಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಲೆಕ್ಕಿಹಾಳ ಪ್ರಾಸ್ತಾವಿಕ ವಾಗಿ ಮಾತನಾಡಿ, ಶ್ರೀಮಠ ದ ಗುರು ಪರಂಪರೆ ಮತ್ತು ಭಕ್ತರ ನಡುವಿನ ಗುರು ಶಿಷ್ಯರ ಸಂಬಂಧದ ಬಗ್ಗೆ ಹೇಳಿದರು. ಇದೇ ವೇಳೆ ಕನ್ನಡ ಕೋಗಿಲೆ ಖ್ಯಾತಿ ಮಹನ್ಯ ಗುರು ಪಾಟೀಲ್ ಮತ್ತು ಅರ್ಜುನ ಇಟಗಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆದವು. ಶ್ರೀಮಠದ ಚರಿತಾಮೃತ ಗ್ರಂಥವನ್ನು ನಾಡಿನ ಹರ ಗುರು ಚರ ಮೂರ್ತಿಗಳ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಯಿತು. ವೇದಿಕೆ ಮೇಲೆ ಜಿಲ್ಲೆ ಹಾಗೂ ಅಂತರ ಜಿಲ್ಲೆ ಹರ ಗುರು ಚರ ಮೂರ್ತಿಗಳು ಸಾನ್ನಿಧ್ಯ ವಹಿಸಿದ್ದರು.