ಸಾರಾಂಶ
ಸಿದ್ದರಾಮಯ್ಯನವರು ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನ್ಯಾಯಾಲಯ ತೀರ್ಪು ಕೊಟ್ಟ ಮೇಲೆ ರಾಜ್ಯದ ಜನ ನಿಮ್ಮನ್ನು ಒಪ್ಪಲ್ಲ. ನಿಮ್ಮ ಸುತ್ತಮುತ್ತಲಿನ ಪಟಾಲಂಗಳ ಮಾತು ಕೇಳಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ - ಬಸನಗೌಡ ಪಾಟೀಲ ಯತ್ನಾಳ ಸಲಹೆ ನೀಡಿದರು.
ಬೈಲಹೊಂಗಲ : ಸಿದ್ದರಾಮಯ್ಯನವರು ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನ್ಯಾಯಾಲಯ ತೀರ್ಪು ಕೊಟ್ಟ ಮೇಲೆ ರಾಜ್ಯದ ಜನ ನಿಮ್ಮನ್ನು ಒಪ್ಪಲ್ಲ. ನಿಮ್ಮ ಸುತ್ತಮುತ್ತಲಿನ ಪಟಾಲಂಗಳ ಮಾತು ಕೇಳಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ತನಿಖೆ ಎದುರಿಸಿ. ಆಗದಿದ್ದರೆ ರಾಜೀನಾಮೆ ನೀಡಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಲಹೆ ನೀಡಿದರು.
ಬೈಲಹೊಂಗಲದ ವೀರರಾಣಿ ಕಿತ್ತೂರು ಚನ್ನಮ್ಮನ ಐಕ್ಯ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ, ಪುಷ್ಪ ನಮನ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯನವರಿಗೆ ಇರುವವಷ್ಟು ಶಕ್ತಿ ಯಾರಿಗೂ ಇಲ್ಲ. ನಿಮ್ಮ ಹಿಂದು ವಿರೋಧಿ ನೀತಿ ಬಿಡಿ. ಕುಂಕುಮ ಹಚ್ಚಿಕೊಳ್ಳಲು ತಿರಸ್ಕರಿಸಿದ್ದೀರಿ. ಹಾಲುಮತ ಸಮಾಜದ ಪೇಟೆ ಸುತ್ತಿಕೊಳ್ಳಲು ನಿರಾಕರಿಸುತ್ತೀರಿ ಎಂದ ಅವರು, ಕಾಂಗ್ರೆಸಿನವರೇ ಸಿದ್ದರಾಮಯ್ಯ ಅವರನ್ನು ಬಲಿಪಶು ಮಾಡಿದ್ದಾರೆ. ಮುಡಾ ಹಗರಣ ಬಹುದಿನಗಳ ಹಿಂದಿನ ಪ್ರಕರಣ. ಈಗ ಅದನ್ನು ಬಯಲಿಗೆಳೆದಿದ್ದು ಮೂಲ ಕಾಂಗ್ರೆಸ್ಸಿಗರೇ. ಅದರ ವಿರುದ್ಧ ಬಿಜೆಪಿ ಸಮರ್ಪಕವಾಗಿ ಹೋರಾಟ ಮಾಡಿದ್ದರಿಂದ ಈ ಪರಿಸ್ಥಿತಿ ಬಂದಿದೆ ಎಂದರು. ರೇಣುಕಾಚಾರ್ಯ ಅವರನ್ನು ಮೊದಲು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಹೇಳಿದರು.