ಉದ್ಯಾವರ: ಕಲೆ, ಸಾಹಿತ್ಯ, ನಾಟಕ, ಸಂಗೀತ ಮತ್ತು ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಿರುವ ನಿರಂತರ್ ಉದ್ಯಾವರ್ ನೇತೃತ್ವದಲ್ಲಿ ಜು.31ರಿಂದ ಅ.2ರವರೆಗೆ ನಡೆಯುವ ಮೂರು ದಿನದ ನಿರಂತರ್ ಬಹುಭಾಷಾ ಸಿನಿಮಾ ಉತ್ಸವ-2026 ರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಬಲಾಯಿಪಾದೆ ಶ್ರೀ ನಾರಾಯಣಗುರು ಯುವ ವೇದಿಕೆ ಉದ್ಯಾನವನದಲ್ಲಿ ನಡೆಯಿತು.ವಿವಿಧ ಧರ್ಮದ ಸಾಮಾಜಿಕ ಮುಖಂಡರು ಪೋಸ್ಟರ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಉಡುಪಿ ಶ್ರೀ ನಾರಾಯಣಗುರು ಯುವ ವೇದಿಕೆಯ ಗೌರವಾಧ್ಯಕ್ಷ ಸದಾಶಿವ ಕಟ್ಟೆಗುಡ್ಡೆ, ಸಾಮಾಜಿಕ ಕಳಕಳಿ ಮತ್ತು ಬದ್ಧತೆಯ ಸಿನಿಮಾಗಳು ಸಮಾಜದಲ್ಲಿ ಬದಲಾವಣೆ ಮತ್ತು ಹೊಸತನಕ್ಕೆ ಕಾರಣವಾಗುತ್ತವೆ ಎಂದರು.

ಉಡುಪಿ ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ರೋಯ್ಸ್ ಫರ್ನಾಂಡಿಸ್, ಉದ್ಯಾವರ ಗ್ರಾಪಂ ಮಾಜಿ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಉಡುಪಿ ಸಿಂಡಿಕೇಟ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಖ್ಯ ವ್ಯವಸ್ಥಾಪಕ ಜೀವನ್ ಡಿಸೋಜಾ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಕಾರ್ಯದರ್ಶಿ ಜೋನ್ ಗೋಮ್ಸ್, ಕೋಶಾಧಿಕಾರಿ ವಿಲ್ಫ್ರೆಡ್ ಡಿಸೋಜಾ ಇದ್ದರು.

ನಿರಂತರ್ ಉದ್ಯಾವರ ಅಧ್ಯಕ್ಷ ರೋಷನ್ ಕ್ರಾಸ್ಟೋ ಸ್ವಾಗತಿಸಿದರು. ರೊನಾಲ್ಡ್ ಡಿಸೋಜಾ ಧನ್ಯವಾದ ಸಮರ್ಪಿಸಿದರು. ನಿರಂತರ ಉದ್ಯಾವರದ ಸ್ಥಾಪಕ ಸ್ಟೀವನ್ ಕುಲಾಸೊ ನಿರೂಪಿಸಿದರು. 31ರಂದು ಸೂತನ್ ಗೌಡ ನಿರ್ದೇಶನದ ಕನ್ನಡ ಸಿನಿಮಾ ವಲವಾರ, ಆ.1ರಂದು ಅನೀಶ್ ಪೂಜಾರಿ ವೇಣೂರು ನಿರ್ದೇಶನದ ತುಳು ಸಿನಿಮಾ ದಸ್ಕತ್ ಮತ್ತು ಆ.2 ರಂದು ಸ್ಟ್ಯಾನಿ ಬೆಳಾ ನಿರ್ದೇಶನದ ಕೊಂಕಣಿ ಸಿನಿಮಾ ಬಾಪಾಚೆ ಪುತಾಚೆ ನಾಂವಿಂ ಪ್ರದರ್ಶನವಾಗಲಿದೆ. ಉದ್ಯಾವರ ಗುಡ್ಡೆಅಂಗಡಿಯಲ್ಲಿರುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ವಟಾರದಲ್ಲಿರುವ ಕ್ಸೇವಿಯರ್ ಸಭಾಭವನದಲ್ಲಿ ಪ್ರತಿದಿನ 6.30ಕ್ಕೆ ಈ ಸಿನಿಮಾಗಳು ಉಚಿತ ಪ್ರವೇಶದೊಂದಿಗೆ ನಡೆಯಲಿದೆ.