ಓದಿನ ಜತೆಯಲ್ಲಿ ವಿದ್ಯಾರ್ಥಿಗಳು ಕಲಾಸಕ್ತಿ ಬೆಳೆಸಿಕೊಳ್ಳಲಿ: ಮುಲ್ಲಂಗಿ ನಂದೀಶ

| Published : Jul 11 2025, 11:48 PM IST

ಓದಿನ ಜತೆಯಲ್ಲಿ ವಿದ್ಯಾರ್ಥಿಗಳು ಕಲಾಸಕ್ತಿ ಬೆಳೆಸಿಕೊಳ್ಳಲಿ: ಮುಲ್ಲಂಗಿ ನಂದೀಶ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ “ಯುವ ಸೌರಭ” ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೇಯರ್ ಮುಲ್ಲಂಗಿ ನಂದೀಶ ಚಾಲನೆ ನೀಡಿದರು.

ಬಳ್ಳಾರಿ: ಓದಿನ ಜತೆಯಲ್ಲಿ ವಿದ್ಯಾರ್ಥಿಗಳು ಕಲಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ಮೇಯರ್ ಮುಲ್ಲಂಗಿ ನಂದೀಶ ಕರೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ “ಯುವ ಸೌರಭ” ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಲೆ ಆಸ್ವಾದಿಸುವ ಮನಸ್ಥಿತಿ ಬಹಳ ಮುಖ್ಯ. ವಿದ್ಯಾರ್ಥಿಗಳು ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತವಾಗಿರಬಾರದು. ತಮ್ಮಲ್ಲಿನ ಕಲಾ ಪ್ರತಿಭೆಗಳನ್ನು ಹೊರಹಾಕಬೇಕು. ಸಾಂಸ್ಕೃತಿಕವಾಗಿ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಮಾತನಾಡಿ, ಶಿಕ್ಷಣ ಎಂದರೆ ಕೇವಲ ವಿದ್ಯಾಭ್ಯಾಸವಲ್ಲ, ಬದಲಾಗಿ ವಿದ್ಯಾರ್ಥಿಗಳು ಕಲೆ, ಕವನ, ಕವಿತೆ, ಸಾಹಿತ್ಯ ಬರವಣಿಗೆ, ವಿದ್ಯೆ-ವಿನಯ ಅಳವಡಿಸಿಕೊಂಡರೆ ದೇಶದ ಸಂಸ್ಕೃತಿ ಸಮೃದ್ಧಿಗೆ ಬೆಳಕಾಗುತ್ತದೆ ಎಂದರು.

ಯುವಕರು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಯುವಕರಲ್ಲಿನ ಕಲೆಯನ್ನು ಪ್ರೋತ್ಸಾಹಿಸುವುದಕ್ಕಾಗಿಯೇ ‘ಯುವ ಸೌರಭ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ವೇದಿಕೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಯುವನಿಧಿ’ ಯೋಜನೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ವಿವಿಯ ಕುಲಪತಿಯವರೊಂದಿಗೆ ಚರ್ಚಿಸಲಾಗಿದೆ ಎಂದರು.

ವಿವಿಯ ಕುಲಪತಿ ಪ್ರೊ. ಎಂ. ಮುನಿರಾಜು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಒತ್ತಡ ಜೀವನದಲ್ಲಿ ಕಲೆ ನೆಮ್ಮದಿಯ ಪಾಠ ಕಲಿಸುತ್ತದೆ. ಕಲಾಭ್ಯಾಸಕ್ಕೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ನಾಟಕ ವಿಭಾಗವಿದ್ದು, ವಿದ್ಯಾರ್ಥಿಗಳಿಗೆ ಕಲಾ ಶಿಕ್ಷಣ ಬೋಧನೆ ಮಾಡುವ ಕೆಲಸವಾಗುತ್ತಿದೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ: ಬಳಿಕ ಕಾರ್ಯಕ್ರಮದಲ್ಲಿ ಕಂಪ್ಲಿ ಎಮ್ಮಿಗನೂರಿನ ಜ್ಞಾನೇಶ್ವರ ತಂಡದಿಂದ ಸುಗಮ ಸಂಗೀತ, ಬಳ್ಳಾರಿಯ ನಟರಾಜ ಕುಚುಪುಡಿ ನೃತ್ಯ-ಸಂಗೀತ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಸಮೂಹ ನೃತ್ಯ, ಸಂಡೂರು ತಾಲೂಕು ವಿ. ನಾಗಲಾಪುರದ ಶರಣಬಸವ ಎಚ್‌. ಅವರ ಜಾನಪದ ಗೀತೆ, ಸಿರಿಗೇರಿಯ ಎನ್. ಮಣಿಕಂಠ ಸಂಗಡಿಗರಿಂದ ಬಯಲಾಟ (ಭಾರ್ಗವ ರಾಮ), ಬಳ್ಳಾರಿಯ ಎಂ.ಎಸ್. ಹರ್ಷ ತಂಡದಿಂದ ತಾಷರಂಡೋಲ್, ಸಂಡೂರು ತಾಲೂಕಿನ ಎಂ. ಬಸಾಪುರದ ಆರ್. ನಾಗರಾಜ ತಂಡದಿಂದ ಡೊಳ್ಳು ಕುಣಿತ ಹಾಗೂ ಇತರ ವೈವಿಧಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಾಗವಹಿಸಿದ ಎಲ್ಲ ತಂಡಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಕುಲಸಚಿವ (ಮೌಲ್ಯಮಾಪನ) ಪ್ರೊ. ಎನ್.ಎಂ. ಸಾಲಿ, ಕರ್ನಾಟಕ ಬಂಜಾರ ಸಂಸ್ಕೃತಿ ಅಕಾಡೆಮಿ ಸದಸ್ಯ ಪ್ರೊ. ಶಾಂತನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಉಪಸ್ಥಿತರಿದ್ದರು.