ಸಾರಾಂಶ
ಕೂಡ್ಲಿಗಿ: ವಿದ್ಯಾರ್ಥಿಗಳು ಪಠ್ಯದ ಜತೆಗೆ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಾನಾಮಡುಗು ದಾಸೊಹ ಮಠದ ಧರ್ಮಾಧಿಕಾರಿ ದಾ.ಮ. ಐಮುಡಿ ಶರಣಾರ್ಯರು ತಿಳಿಸಿದರು.
ತಾಲೂಕಿನ ಕಾನಹೊಸಹಳ್ಳಿ ಸಮೀಪದ ಕಾನಾಮಡುಗು ಗ್ರಾಮದ ಶ್ರೀ ಶರಣಬಸವೇಶ್ವರ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಕಾನಹೊಸಹಳ್ಳಿ ಪತ್ರಿಕಾ ಬಳಗ ಆಯೋಜಿಸಿದ್ದ ವಿದ್ಯಾರ್ಥಿಗಳ ಸಾಧನೆಯಲ್ಲಿ ಪತ್ರಿಕೆಗಳ ಪಾತ್ರ ಕುರಿತು ಸಂವಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮಾತನಾಡಿ, ಶಿಕ್ಷಕರು ತರಗತಿಯಲ್ಲಿ ನೀಡುವ ಪಠ್ಯಗಳಷ್ಟನ್ನೇ ಅಧ್ಯಯನ ಮಾಡುವುದರಿಂದ ಉತ್ತಮ ಅಂಕಗಳನ್ನು ಗಳಿಸಬಹುದು. ಪತ್ರಿಕೆಗಳನ್ನು ನಿತ್ಯ ಓದುವುದರಿಂದ ಜಗತ್ತಿನ ಮತ್ತು ದೇಶ, ರಾಜ್ಯ ಹಾಗೂ ಸ್ಥಳೀಯವಾಗಿ ಜರುಗುವ ವಿದ್ಯಮಾನಗಳನ್ನು ತಿಳಿಯುತ್ತದೆ. ಅಲ್ಲದೆ ಸಾಮಾನ್ಯ ಜ್ಞಾನ ಅರಿಯಲು ಸಾಧ್ಯವಾಗುತ್ತದೆ ಎಂದರು.ಲೇಖಕ ಪತ್ರಕರ್ತ ಭೀಮಣ್ಣ ಗಜಾಪುರ ಮಾತನಾಡಿ, ನಿತ್ಯವೂ ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಓದುವುದರಿಂದ ವ್ಯಕ್ತಿತ್ವ ವಿಕಸನದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಪೂರಕ ಜ್ಞಾನ ಸಿಗಲಿದೆ. ಹಾಗಾಗಿ ವಿದ್ಯಾರ್ಥಿಗಳು ಪತ್ರಿಕೆಗಳ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು.
ವಿದ್ಯಾರ್ಥಿಗಳು ಕೇವಲ ವಿಷಯಾಧಾರಿತ ಪುಸಕ್ತ ಅಧ್ಯಯನ ಮಾಡುತ್ತಾರೆ. ಶಾಲೆಯಲ್ಲಿ ಶಿಕ್ಷಕರು ಸಹ ನಿಗದಿಪಡಿಸಿ ಪಾಠ ಪ್ರವಚನ ಮಾತ್ರ ಮಾಡುತ್ತಾರೆ. ಆದರೆ, ಪತ್ರಿಕೆಗಳು ನಿತ್ಯವೂ ಪ್ರಮುಖ ಘಟನೆ, ಸಾಮಾನ್ಯ ಜ್ಞಾನ ನೀಡುತ್ತವೆ. ಅವುಗಳನ್ನು ಓದುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಲು ಮತ್ತು ವಾರ್ಷಿಕ ಪರೀಕ್ಷೆ ಎದುರಿಸಲು ಅನುಕೂಲವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಶಿಕ್ಷಕರ ತರಬೇತಿ ಕಾಲೇಜಿನ ಪ್ರಾಚಾರ್ಯ ಎಲ್.ಪಿ. ಸುಭಾ಼ಷಚಂದ್ರ, ಶ್ರೀ ಶರಣಬಸವೇಶ್ವರ ಪ್ರೌಢಶಾಲೆ ಮುಖ್ಯಶಿಕ್ಷಕ ಬೊಮ್ಮಣ್ಣ, ಪತ್ರಕರ್ತರಾದ ಹೂಡೇಂ ಕೃಷ್ಣಮೂರ್ತಿ, ಬಿ. ನಾಗರಾಜ, ಭೀಮಸಮುದ್ರ ರಂಗನಾಥ, ದಯಾನಂದ್ ಸಜ್ಜನ್, ಅಜೇಯ್, ಶಿಕ್ಷಕರಾದ ಆನಂದ ಪಾಟೀಲ್, ವಿರುಪಾಕ್ಷಪ್ಪ, ವಾಣಿ, ಶರತ್, ಸಿಬ್ಬಂದಿ ರುದ್ರೇಶ್, ಐಟಿಐ ಕಾಲೇಜಿನ ಪ್ರಾಚಾರ್ಯ ವಿರುಪಾಕ್ಷಪ್ಪ, ಸುಭಾಷ್ಚಂದ್ರ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಸಂತೋಷ ನಿರೂಪಿಸಿದರು. ಭದ್ರಪ್ಪ ಸ್ವಾಗತಿಸಿದರು.