ಸಾರಾಂಶ
ಹೂವಿನಹಡಗಲಿ: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳು, ಮೀಸಲಾತಿ ಮಧ್ಯೆ ಶಿಕ್ಷಣದಲ್ಲಿ ದೊಡ್ಡ ಸಾಧನೆ ಮಾಡುವ ಛಲ ಇರಬೇಕು ಎಂದು ರಾಜ್ಯ ಪಂಚಮಸಾಲಿ ನೌಕರರ ತಾಲೂಕ ಘಟಕ ಅಧ್ಯಕ್ಷ ವಿ.ಬಿ. ಜಗದೀಶ ಹೇಳಿದರು.
ಪಟ್ಟಣದ ಜಿಬಿಆರ್ ಕಾಲೇಜಿನ ಗುರು ಕುಮಾರೇಶ್ವರ ಸಭಾ ಭವನದಲ್ಲಿ, ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ, ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಯಲ್ಲಿ ಸಾಕಷ್ಟು ಅನ್ಯಾಯವಾಗುತ್ತಿದೆ. ಈ ಸಮಾಜದ ಮಕ್ಕಳು ಹೆಚ್ಚು, ಅಭ್ಯಾಸದ ಕಡೆಗೆ ಗಮನ ಹರಿಸಿ ಅಧಿಕ ಅಂಕಗಳನ್ನು ಪಡೆದು ಉನ್ನತ ಹುದ್ದೆಗೆ ಹೋಗಬೇಕೆಂದು ಹೇಳಿದರು.ಸಮಾಜದ ಬಡ ಮಕ್ಕಳಿಗೆ ವಸತಿ ನಿಲಯಗಳಲ್ಲಿ ಅವಕಾಶ ಇಲ್ಲದೇ ಸಾಕಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಂಘದಿಂದ ತಾಲೂಕ ಕೇಂದ್ರದಲ್ಲಿ, ವಸತಿ ನಿಲಯ ತೆರೆಯುವಂತಹ ನಿರ್ಧಾರ ಮಾಡಲಾಗಿದೆ. ಜತೆಗೆ ಪಂಚಮಸಾಲಿ ಬಡ ವಿದ್ಯಾರ್ಥಿ ಅಧಿಕ ಅಂಕ ಪಡೆದವರಿಗೆ ಬ್ಯಾಂಕ್‌ನಿಂದ ₹5 ಸಾವಿರ ಸಹಾಯಧನ ನೀಡಲಾಗುತ್ತಿದೆ. ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಬ್ಯಾಂಕ್‌ನಿಂದ ₹2 ಲಕ್ಷವರೆಗೂ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಸಂಘದ ಅಧ್ಯಕ್ಷ ಎ.ವೀರಣ್ಣ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 8 ಸಾವಿರ ವರ್ಷಗಳ ಇತಿಹಾಸವಿದೆ. ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ವಿವಿಧ ಕಡೆಗಳಲ್ಲಿ ಬ್ಯಾಂಕ್‌ಗಳನ್ನು ತೆರೆದು ಆ ಮೂಲಕ ಸಮಾಜದ ಯುವಕರಿಗೆ ನೌಕರಿ ನೀಡುವಂತಹ ಕೆಲಸವಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಪ್ರತಿಭಾ ಪುರಸ್ಕಾರ ಮಾಡಿ ಬೆನ್ನು ತಟ್ಟುವಂತಹ, ಕೆಲಸ ಮಾಡಿರುವುದು ಶ್ಲಾಘನೀಯ ಎಂದರು.ಉಪನ್ಯಾಸಕ ಸತೀಶ ಮಾತನಾಡಿ, ಸೋಮಾರಿಗಳು ಯಾವೊತ್ತು ಸಮಾಜದ ಮಾನವ ಸಂಪನ್ಮೂಲ ಆಗಲು ಸಾಧ್ಯವಿಲ್ಲ. ಸಂಘ, ಸಂಸ್ಥೆ, ಸಮಾಜ, ಶಿಕ್ಷಕ, ಗುರು ಮತ್ತು ಸರ್ಕಾರಗಳು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕಿದೆ. ಜವಾಬ್ದಾರಿಗಳಿಂದ ನಯವಾಗಿ ನುಣಿಚಿಕೊಳ್ಳುವ ಕೆಲಸ ಮಾಡಿದರೇ ಅದು ಸಮಾಜಕ್ಕೆ ಮಾರಕವಾಗುತ್ತದೆ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಸಮಾಜದ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಐಎಎಸ್, ಐಪಿಎಸ್ ಹಾಗೂ ಕೆಎಎಸ್‌ನಂತಹ ತರಬೇತಿ ಕೇಂದ್ರಗಳನ್ನು ತೆರೆದು ಆ ಮೂಲಕ ಅವರಿಗೆ ಮಾಗದರ್ಶನ ನೀಡುವಂತಹ ಕೆಲಸ ಆಗಬೇಕಿದೆ. ನಮ್ಮ ಮಕ್ಕಳಲ್ಲಿ ತಾಂತ್ರಿಕ ಹಾಗೂ ನೈತಿಕ ಶಿಕ್ಷಣದ ಮೌಲ್ಯಗಳನ್ನು ಬಿತ್ತುವಂತಹ ಕೆಲಸ ಈ ಸಮಾಜ ಮತ್ತು ಗುರುಗಳಿಂದ ಆಗಬೇಕಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ತಮ್ಮನ್ನ ತಾವು ಒರೆಗೆ ಹಚ್ಚಿಕೊಳ್ಳುವಂತಹ ಕೆಲಸ ಆಗಬೇಕೆಂದು ಹೇಳಿದರು.ಮುಂಡರಗಿ ವಿಭಾಗದ ಸಿಂಗಟಾಲೂರು ಯೋಜನೆಯ ಇಇ ಐಗೋಳ್ ಪ್ರಕಾಶ,ಬಸೆಟ್ಟಿ ಪ್ರಕಾಶ, ಎ.ಕೊಟ್ರಗೌಡ, ಟಿ.ಪಿ. ವೀರೇಂದ್ರ, ಗಡ್ಡಿ ಶಿವಕುಮಾರ, ಯು.ಆನಂದ, ಬಿ.ಬಿ. ಅಸುಂಡಿ, ಎಚ್.ಕೆ. ಮಹೇಶ, ಹೊಂಬಳಗಟ್ಟಿ ಪ್ರಕಾಶ, ಸೊಪ್ಪಿನ ವೀರಣ್ಣ ಇದ್ದರು.
ರಾಜ್ಯ ಸಮಿತಿ ಸದಸ್ಯ ಎಚ್.ಜಿ.ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.ಇದೇ ಸಂದರ್ಭದಲ್ಲಿ ನಿವೃತ್ತ ನೌಕರರನ್ನು ಹಾಗೂ ಎಸ್ಸೆಸ್ಸೆಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.