ಸಾರಾಂಶ
ಸಿದ್ದಾಪುರ: ಕನ್ನಡ ಸಾಹಿತ್ಯ ಪರಿಷತ್ತು ಸಿದ್ದಾಪುರ ಘಟಕದ ವತಿಯಿಂದ ಇಲ್ಲಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ದಸರಾ ಯುವ ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಸ್ವರಚಿತ ಕವನ ವಾಚಿಸಿದರು.ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಪೂರ್ಣಿಮಾ ನಾಯ್ಕ, ಮೇಘನಾ ನಾಯ್ಕ, ಜಾನಕಿ ಬಡಗಿ, ಶರತ್, ರಾಧಿಕಾ ನಾಯ್ಕ, ಅರ್ಚನಾ ಗೌಡ, ಪ್ರಿಯಾ ಹೊಸೂರ, ಅಕ್ಷತಾ ನಾಯ್ಕ, ತೃಪ್ತಿ ನಾಯ್ಕ, ದಿವ್ಯಾ ಗೌಡ, ವಿನೂತಾ ಗೌಡ, ಮೈತ್ರಿ ಹಾಗೂ ಶಿರಸಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ದಿವ್ಯಶ್ರೀ ಗೌಡ ಸ್ವರಚಿತ ಕವನ ವಾಚಿಸಿದರು. ಕವಿಗೋಷ್ಠಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ದಸರಾ ಯುವ ಕವಿಗೋಷ್ಠಿಗೆ ಚಾಲನೆ ನೀಡಿದ ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ನೆಲದ ಇತಿಹಾಸ ತಿಳಿದುಕೊಳ್ಳಬೇಕು. ನಿಮ್ಮ ಊರು, ಹಿರಿಯರು ಬಗ್ಗೆ ಮೊದಲು ಅರಿತುಕೊಳ್ಳಬೇಕು. ಶಿಕ್ಷಣ ಎನ್ನುವುದು ಬದುಕಿನ ಆರ್ಥಿಕ ಮಜಲಿಗೆ ವೇದಿಕೆಯೇ ಹೊರತು ಜ್ಞಾನಕ್ಕಲ್ಲ. ಅಡವಿಯೊಳಗಿರುವ ಪಕ್ಷಿ ಮತ್ತು ಪ್ರಾಣಿಗಳ ಬದುಕನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಸತೀಶ ನಾಯ್ಕ ಮಾತನಾಡಿ, ಎಲ್ಲಿಯವರೆಗೆ ಸಂಸ್ಕಾರ ಹಾಗೂ ಶಿಸ್ತು ರೂಢಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಏನೇ ಸಾಧನೆ ಮಾಡಿದರೂ ಶೂನ್ಯ ಎಂದರು. ಬರಹಗಾರ ಹಾಗೂ ಕೆಪಿಎಸ್ ಮಳಗಿಯ ಅಧ್ಯಾಪಕ ಗಂಗಾಧರ ನಾಯ್ಕ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ ಭಾಶಿ ಮಾತನಾಡಿದರು. ಈ ಸಂದರ್ಭದಲ್ಲಿ ಪತ್ರಕರ್ತ ಯಶವಂತ ತ್ಯಾರ್ಸಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ, ಹಾಳದಕಟ್ಟಾ ಸರ್ಕಾರಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ರತ್ನಾಕರ ನಾಯ್ಕ ಉಪಸ್ಥಿತರಿದ್ದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ವಾಣಿ ಡಿ.ಎಸ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ವಿನೂತಾ ಗೌಡ ನಿರೂಪಿಸಿದರು. ಉಪನ್ಯಾಸಕ ರತ್ನಾಕರ ನಾಯ್ಕ ಬಹುಮಾನ ವಿತರಣಾ ಸಮಾರಂಭ ನಡೆಸಿಕೊಟ್ಟರು. ಅಣ್ಣಪ್ಪ ಶಿರಳಗಿ ವಂದಿಸಿದರು.