ಸಾರಾಂಶ
ಕುಮಟಾ: ವಿದ್ಯಾರ್ಥಿಗಳು ಅನೈತಿಕ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಯಾಗಿದೆ. ಈ ನೆಲದ ಕಾನೂನನ್ನು ಎಲ್ಲರೂ ಅರಿತು ಗೌರವಿಸಬೇಕು ಎಂದು ಸಿಪಿಐ ಯೋಗೀಶ ಕೆ.ಎಂ. ತಿಳಿಸಿದರು. ಇಲ್ಲಿನ ಡಾ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಾದಕ ವ್ಯಸನ, ರಸ್ತೆ ಸುರಕ್ಷತೆ ಹಾಗೂ ಸೈಬರ್ ಕ್ರೈಂ ಕುರಿತಾದ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುವಜನತೆ ಕೊಲೆ, ಸುಲಿಗೆ, ದರೋಡೆಯಂಥ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಹೆಚ್ಚಿದೆ. ರಸ್ತೆಯಲ್ಲಿ ಸಂಚಾರ ನಿಯಮವನ್ನು ಸರಿಯಾಗಿ ಪಾಲಿಸದೆ, ವಾಹನ ಪರವಾನಗಿಯೂ ಇಲ್ಲದೆ ಅನೇಕ ವಿದ್ಯಾರ್ಥಿಗಳು ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾಗುತ್ತಿದ್ದಾರೆ. ಇದರಿಂದ ಹಲವಾರು ಪ್ರಾಣಹಾನಿಯಾಗಿದೆ ಎಂದರು. ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯಗಳ ಸೇವನೆಯೂ ಹೆಚ್ಚಾಗುತ್ತಿದ್ದು, ನಾನಾ ಅವಾಂತರಗಳಿಗೂ ಕಾರಣವಾಗುತ್ತಿದೆ. ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಕೂಡಲೆ ಎಚ್ಚೆತ್ತು ದುಶ್ಚಟಗಳಿಂದ, ಕೆಟ್ಟ ಸಂಗದಿಂದ ದೂರವಿದ್ದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು. ಪಿಎಸ್‌ಐ ಮಂಜುನಾಥ ಗೌಡ ಸೈಬರ್ ಕ್ರೈಂ ಕುರಿತು ಮಾತನಾಡಿ, ಶಾಲಾ- ಕಾಲೇಜುಗಳಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು, ಮೊಬೈಲ್ ಹಾಗೂ ಕಂಪ್ಯೂಟರ್ ಮೂಲಕ ಎದುರಾಗುವ ಅಪಾಯಗಳ ಬಗ್ಗೆ ಜಾಗೃತಿ ತಿಳಿದಿರಬೇಕು. ಪಾಲಕರು ಶಿಕ್ಷಕರು ಹಾಗೂ ಸಾರ್ವಜನಿಕರು ಒಟ್ಟಾಗಿ ವಿದ್ಯಾರ್ಥಿಗಳ ಸುರಕ್ಷತೆಗೆ ಮತ್ತು ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. ಪ್ರಾಚಾರ್ಯೆ ರೇವತಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಯುನಿಯನ್ ಕಾರ್ಯದರ್ಶಿ ಡಾ. ಅರವಿಂದ ನಾಯಕ ಸ್ವಾಗತಿಸಿ ಪರಿಚಯಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ಮಂಜುನಾಥ ವೆರ್ಣೆಕರ್ ವಂದಿಸಿದರು.ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಜಲಜಕ್ಕ ಪ್ರಥಮ
ಶಿರಸಿ: ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆಯಿಂದ ನಗರದ ಅರಣ್ಯ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ಜಲಜಾಕ್ಷಿ ಲಕ್ಷ್ಮೀನಾರಾಯಣ ಹೆಗಡೆ ಆಲ್ಮನೆ ಅವರು ಸಿರಿಧಾನ್ಯ ಕಾರ ಪಾಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ₹೫ ಸಾವಿರ ಬಹುಮಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಸಿರಿಧಾನ್ಯ ಪಾಕ ಸ್ಪರ್ಧೆಯನ್ನು ಸಿರಿಧಾನ್ಯ ಕಾರ, ಸಿರಿಧಾನ್ಯ ಸಿಹಿ ಹಾಗೂ ಮರೆತು ಹೋದ ಹಳೆ ಕಾಲದ ತಿಂಡಿಗಳ ಸ್ಪರ್ಧೆಗಳನ್ನಾಗಿ ವಿಂಗಡಿಸಲಾಗಿತ್ತು.ಸಿರಿಧಾನ್ಯ ಕಾರ ಪಾಕ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಜಲಜಾಕ್ಷಿ ಅವರು ಕಾನಗೋಡ ಗ್ರಾಪಂಗೆ ನಾಲ್ಕು ಬಾರಿ ಆಯ್ಕೆಯಾಗಿ ಎರಡು ಬಾರಿ ಅಧ್ಯಕ್ಷರಾಗಿದ್ದರಲ್ಲದೇ, ಈಗಲೂ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಡಳ್ಳಿ ಸೊಸೈಟಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.