ವಿದ್ಯಾರ್ಥಿಗಳು ಕಾನೂನುಗಳ ಬಗ್ಗೆ ಅಧ್ಯಯನ ನಡೆಸಲಿ: ನಿವೃತ್ತ ನ್ಯಾಯಮೂರ್ತಿ ಬಿ.ಎ. ಪಾಟೀಲ

| Published : Jan 05 2025, 01:34 AM IST

ವಿದ್ಯಾರ್ಥಿಗಳು ಕಾನೂನುಗಳ ಬಗ್ಗೆ ಅಧ್ಯಯನ ನಡೆಸಲಿ: ನಿವೃತ್ತ ನ್ಯಾಯಮೂರ್ತಿ ಬಿ.ಎ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಎಲ್ಲ ಕಾನೂನುಗಳ ಬಗ್ಗೆ ಅಧ್ಯಯನ ನಡೆಸಬೇಕು. ನೀವು ವಕೀಲರಾದಾಗ ಯಾವುದೇ ರೀತಿಯ ತೊಂದರೆಗಳು ಎದುರಾಗದಂತೆ ನ್ಯಾಯಾಲಯದ ನಿಯಮಗಳನ್ನು ಕಲ್ಪಿತ ನ್ಯಾಯಾಲಯದ ಮೂಲಕ ಕಲಿಯಲು ಅವಕಾಶವಿದೆ.

ಹುಬ್ಬಳ್ಳಿ:

ವಾದ ಮಾಡುವಾಗ ಕಾನೂನುಗಳ ಬಗ್ಗೆ ಅರಿವಿರವೇಕು. ವಿದ್ಯಾರ್ಥಿಗಳು ಕಾನೂನುಗಳ ಬಗ್ಗೆ ಆಳವಾದ ಅಧ್ಯಯನ ನಡೆಸಬೇಕಾಗುತ್ತದೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ.ಎ. ಪಾಟೀಲ ಹೇಳಿದರು.

ಇಲ್ಲಿನ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವವಿದ್ಯಾಲಯದ 10ನೇ ರಾಷ್ಟ್ರೀಯ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಎಲ್ಲ ಕಾನೂನುಗಳ ಬಗ್ಗೆ ಅಧ್ಯಯನ ನಡೆಸಬೇಕು. ನೀವು ವಕೀಲರಾದಾಗ ಯಾವುದೇ ರೀತಿಯ ತೊಂದರೆಗಳು ಎದುರಾಗದಂತೆ ನ್ಯಾಯಾಲಯದ ನಿಯಮಗಳನ್ನು ಕಲ್ಪಿತ ನ್ಯಾಯಾಲಯದ ಮೂಲಕ ಕಲಿಯಲು ಅವಕಾಶವಿದೆ. ಯಾವುದೇ ಮೊಕದ್ದಮೆಯಲ್ಲಿ ಒಬ್ಬರೂ ಮಾತ್ರ ಜಯಶಾಲಿಗಳಾಗುತ್ತಾರೆ. ಮೊಕದ್ದಮೆ ಬಗ್ಗೆ ವಾದ ಮಾಡುವುದು ವಕೀಲರ ಮೊದಲ ಹೆಜ್ಜೆಯಾಗಿರುತ್ತದೆ. ಸತತ ಪ್ರಯತ್ನದಿಂದ ಯಶಸ್ಸು ದೊರೆಯುವುದು. ಹೀಗಾಗಿ ಪ್ರಕರಣದ ವಾಸ್ತವ ಹಾಗೂ ವಿಶ್ಲೇಷಣೆ ಕುರಿತು ಸಂಪೂರ್ಣವಾಗಿ ತಿಳಿದುಕೊಂಡು ವಾದ ಮಾಡಬೇಕು. ನ್ಯಾಯಾಧೀಶರಿಗೆ ಪ್ರಕರಣದ ಕುರಿತು ಮನವರಿಕೆ ಮಾಡುವಲ್ಲಿ ನೀವು ಯಶಸ್ವಿಯಾಗಬೇಕಾಗುತ್ತದೆ ಎಂದರು. ನಿಮಗೆ ದೊರೆಯುವ ಅವಕಾಶವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ದಕ್ಷತೆ ಎಂಬುದು ಬಹಳ ಪ್ರಮುಖವಾಗಿರಬೇಕು. ಯಾವುದೇ ಕೆಲಸವನ್ನು ಪ್ರೀತಿ ಮತ್ತು ವಾತ್ಸಲ್ಯದಿಂದ ಮಾಡಬೇಕು. ವೃತ್ತಿಯಲ್ಲಿ ಸೋಲು, ಗುಲುವು ಸಾಮಾನ್ಯ. ಯಶಸ್ಸು ಪಡೆಯಲು ಸೂಕ್ತ ಮಾರ್ಗವನ್ನು ನಾವು ಕಂಡುಕೊಳ್ಳಬೇಕಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಕೋವಿಡ್ ನಂತರದಲ್ಲಿ ವರ್ಚುವಲ್ ಕೋರ್ಟ್ ಆರಂಭಗೊಂಡಿವೆ. ನಾವು ಕುಳಿತು ಸ್ಥಳದಿಂದಲ್ಲೇ ಎಲ್ಲ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ವಕೀಲರಿಗೆ ಎಲ್ಲ ವಿಷಯಗಳ ಬಗ್ಗೆ ಜ್ಞಾನವಿರಬೇಕು. ಪ್ರಶ್ನೆಗಳಿಗೆ ಪ್ರತ್ಯುತ್ತರ ನೀಡುವಲ್ಲಿ ಯಶಸ್ವಿಯಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಡಾ. ಸಿ. ಬಸವರಾಜು ಮಾತನಾಡಿ, ಕಿರಿಯರು ಹಿರಿಯರ ಜತೆ ಬೆರೆಯಬೇಕಾಗುತ್ತದೆ. ಮೊಕದ್ದಮೆಗಳ ಬಗ್ಗೆ ಯಾವ ರೀತಿ ವಾದ ಮಾಡಬೇಕು, ಯಾವ ಕೌಶಲ ಬೆಳೆಸಿಕೊಳ್ಳಬೇಕು ಎಂಬುದನ್ನು ಕಂಡುಕೊಳ್ಳಬೇಕು. ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದಿಂದ ಸಾಕಷ್ಟು ಬದಲಾವಣೆಗಳಾಗಿವೆ. ತಂತ್ರಜ್ಞಾನ ಸಹ ಅಭಿವೃದ್ಧಿ ಹೊಂದಿದೆ‌. ವಕೀಲ ವೃತ್ತಿ ಬದಲಾಗಿದೆ. ವಕೀಲ ವೃತ್ತಿಗೆ ಗೌರವ ತರುವ ನಿಟ್ಟಿನಲ್ಲಿ ತಯಾರಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸ್ಪರ್ಧೆಯಲ್ಲಿ ಗೋವಾ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಮತ್ತು ಆಂಧ್ರಪ್ರದೇಶ, ಬೆಂಗಳೂರು, ಮೈಸೂರು, ವಿಜಯಪುರ, ಬೆಳಗಾವಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ 28 ತಂಡಗಳು ಭಾಗವಹಿಸಿದ್ದವು. ಈ ವೇಳೆ ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ, ಕುಲಸಚಿವೆ ಅನುರಾಧ ವಸ್ತದ, ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ, ಸಹಾಯಕ ಪ್ರಾಧ್ಯಾಪಕರಾದ ಡಾ. ಅರ್ಚನಾ ಕೆ, ಐ.ಬಿ. ಬಿರಾದಾರ, ಗಿರೀಶಗೌಡ ಪಾಟೀಲ, ವಿವಿಯ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ಭೀಮಾಬಾಯಿ ಮುಲಗೆ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಸುನೀಲ ಬಗಾಡೆ ವಂದಿಸಿದರು.