ಸಾರಾಂಶ
ಗ್ರಾಮಾಂತರ ಪ್ರದೇಶದಲ್ಲಿರುವ ಮಕ್ಕಳಲ್ಲಿ ಸುಪ್ತ ಪ್ರತಿಭೆಗಳಿವೆ. ಅವುಗಳನ್ನು ಗುರುತಿಸುವ ಕಾರ್ಯ ಆಗಬೇಕಿದೆ ಎಂದು ಬೆಸ್ಕಾಂ ನ ಮಾಜಿ ನಿರ್ದೇಶಕ ಬಿ.ಎಸ್.ವಸಂತಕುಮಾರ್ ಹೇಳಿದರು. ತುರುವೇಕೆರೆಯಲ್ಲಿ ಚಿಣ್ಣರ ಸಿರಿ ಮಕ್ಕಳ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಗ್ರಾಮಾಂತರ ಪ್ರದೇಶದಲ್ಲಿರುವ ಮಕ್ಕಳಲ್ಲಿ ಸುಪ್ತ ಪ್ರತಿಭೆಗಳಿವೆ. ಅವುಗಳನ್ನು ಗುರುತಿಸುವ ಕಾರ್ಯ ಆಗಬೇಕಿದೆ ಎಂದು ಬೆಸ್ಕಾಂ ನ ಮಾಜಿ ನಿರ್ದೇಶಕ ಬಿ.ಎಸ್.ವಸಂತಕುಮಾರ್ ಹೇಳಿದರು.ಪಟ್ಟಣದ ಜೆ.ಪಿ. ಆಂಗ್ಲ ಶಾಲಾ ಆವರಣದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಚಿಣ್ಣರ ಸಿರಿ ಮಕ್ಕಳ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸಲು ಲಯನ್ಸ್ ಕ್ಲಬ್ ಮಕ್ಕಳ ಸಪ್ತಾಹ ಏರ್ಪಡಿಸಿರುವುದು ಸ್ವಾಗತಾರ್ಹ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಉತ್ತಮ ವೇದಿಕೆಯಾಗಲಿದೆ. ಸುಮಾರು ೨೫ ವರ್ಷಗಳಿಂದ ತಾವು ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗ್ರಾಮಾಂತರ ಪ್ರದೇಶದ ಮಕ್ಕಳೇ ಹೆಚ್ಚು ಪ್ರತಿಭಾನ್ವಿತರಾಗಿ ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿ. ಅದರಲ್ಲೂ ಬಡವರ ಮಕ್ಕಳೆ ಹೆಚ್ಚು ಮೇಲುಗೈ ಸಾಧಿಸಿದ್ದಾರೆ. ಇಂತಹ ಸಂಘ ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಪ್ರತಿ ಮಕ್ಕಳು ಪಾಲ್ಗೊಂಡು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹಾಕುವ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಳ್ಳವಂತಾಗಬೇಕು. ಪ್ರತಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಲಯನ್ಸ್ ಕಾರ್ಯ ನಿಜಕ್ಕೂ ಶ್ಲಾಘನೀಯವೆಂದರು. ಬದರಿಕಾಶ್ರಮ ರಾಮಕೃಷ್ಣ ಮಠದ ಶ್ರೀ ಧರ್ಮವ್ರತಾನಂದಜೀ ಸ್ವಾಮೀಜಿಗಳು ಮಾತನಾಡಿ ಚಿಕ್ಕಂದಿನಿಂದಲೇ ಪೋಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ಹೊಮ್ಮಿಸುವ ಕೆಲಸ ಮಾಡಬೇಕಾಗಿದೆ. ತಮ್ಮ ಮಕ್ಕಳು ಸ್ಪರ್ಧೆಯಲ್ಲಿ ಸೋತ ಸಂಧರ್ಭದಲ್ಲಿ ಪೋಷಕರು ಅವರಿಗೆ ಆತ್ಮಸ್ಥೈರ್ಯ ತುಂಬಬೇಕು. ಮುಂಬರುವ ದಿನಗಳಲ್ಲಿ ಆ ಮಕ್ಕಳು ಮುಂದೆ ಗುರಿ ತಲುಪುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದರಲ್ಲೂ ಮುಖ್ಯವಾಗಿ ತಾಯಂದಿರು ಇಂತಹ ಕೆಲಸ ಮಾಡಬೇಕಾಗಿದೆ. ಇದಕ್ಕೆ ಪೂರಕವಾಗಿ ಬಿ.ಎಸ್.ವಸಂತ್ ಕುಮಾರ್ ಅವರು ಚಿಣ್ಣರ ಸಿರಿ ಕಾರ್ಯಕ್ರಮ ಆಯೋಜನೆಗೆ ಪ್ರಾಯೋಜಕತ್ವ ನೀಡುವ ಮೂಲಕ ತಾಲೂಕಿನ ಮಕ್ಕಳನ್ನು ಉತ್ತೇಜಿಸುತ್ತಿರುವುದು ಅವರು ಮಕ್ಕಳ ಮೇಲೆ ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ ಎಂದರು. ಲಯನ್ ಅಧ್ಯಕ್ಷ ಹೆಚ್.ಆರ್.ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಕೆ.ಲೋಕೇಶ್, ಗೆಳೆಯರ ಬಳಗದ ಅಧ್ಯಕ್ಷ ಪ್ರಕಾಶ್ ಗುಪ್ತಾ, ಟ್ರಸ್ಟ್ ಅಧ್ಯಕ್ಷ ಪಿ.ಎಚ್.ಧನಪಾಲ್, ಸಂಚಾಲಕ ಶಿವಾನಂದಯ್ಯ, ಸಹ ಸಂಚಾಲಕರುಗಳಾದ ಮಿಹಿರ ಕುಮಾರ್, ವಿರೂಪಾಕ್ಷ, ಸುನಿಲ್ ಬಾಬು, ಜಿ.ಸಿ.ಶ್ರೀನಿವಾಸ್, ಕಾರ್ಯದರ್ಶಿ ಕೆ.ಎನ್. ಸುರೇಶ್. ಖಜಾಂಚಿ ಟಿ.ಎಸ್.ರಾಮಕೃಷ್ಣ ಸೇರಿದಂತೆ ಲಯನ್ ಸದಸ್ಯರುಗಳು, ಪೋಷಕರು, ಶಿಕ್ಷಕರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು. ಮೂರು ದಿನ ನಡೆದ ಚಿಣ್ಣರ ಸಿರಿ ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ, ಮೆಮೊರಿ ಟೆಸ್ಟ್, ಸ್ಲೋ ಸೈಕಲ್, ಬಾಲ್ ಇಂದಿ ಬಕೆಟ್ ಮುಂತಾದ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿದ್ದು ನೂರಾರು ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ೧೫೦ ಕ್ಕೂ ಹೆಚ್ಚು ಮಕ್ಕಳು ಬಹುಮಾನ ಪಡೆದುಕೊಂಡರು.