ತೆರಿಗೆ ಹಣ ಪ್ರಾಮಾಣಿಕವಾಗಿ ಬಳಕೆಯಾಗಲಿ: ಶಾಸಕ ಸಿದ್ದು ಸವದಿ

| Published : Dec 23 2024, 01:01 AM IST

ಸಾರಾಂಶ

ಸರ್ಕಾರದ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡಲ್ಲಿ ಸಾರ್ವಜನಿಕರ ಹಣ ಅಪವ್ಯಯವಾಗುವುದು ತಪ್ಪುತ್ತದೆ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸರ್ಕಾರದ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡಲ್ಲಿ ಸಾರ್ವಜನಿಕರ ಹಣ ಅಪವ್ಯಯವಾಗುವುದು ತಪ್ಪುತ್ತದೆ. ಸಾರ್ವಜನಿಕರ ತೆರಿಗೆ ಹಣ ಪ್ರಾಮಾಣಿಕವಾಗಿ ಬಳಕೆಯಾಗಿ ಗುಣಮಟ್ಟದ ಕೆಲಸಗಳಾಗಬೇಕೆಂದು ಶಾಸಕ ಸಿದ್ದು ಸವದಿ ನುಡಿದರು.

ರಬಕವಿ ಚಿಕ್ಕೋಡಿ ಕ್ರೀಡಾಂಗಣದಲ್ಲಿ ನಡೆದ ₹೪೨೧ ಕೋಟಿ ವೆಚ್ಚದ ಕೇಂದ್ರ ಪುರಸ್ಕೃತ ಅಮೃತ್ ೨.೦ ಯೋಜನೆಯಡಿ ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ರಬಕವಿ-ರಾಂಪುರ ನಗರಕ್ಕೆ ಸುಧಾರಿತ ನೀರು ಸರಬರಾಜು ಯೋಜನೆ ಶಂಕು ಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ತಮ್ಮ ಹೊಲಗಳಲ್ಲಿ ಪೈಪ್‌ಲೈನ್ ಅಳವಡಿಕೆ ಮಾಡಿದ ಆರವತ್ತು ವರ್ಷಗಳ ಕಾಲ ಯಾವುದೇ ಲೋಪ ಕಾಣುವುದಿಲ್ಲ. ಆದರೆ ಸರ್ಕಾರದ ಕಾಮಗಾರಿಗಳಲ್ಲಿ ಕೇವಲ ಒಂದು ವರ್ಷ ಕಳೆಯೊದರಲ್ಲಿ ತೊಂದರೆಗಳು ಆರಂಭಗೊಳ್ಳುತ್ತವೆ. ಇಂಥ ಕಳಪೆ ಮತ್ತು ಅಜಾಗರೂಕತೆ ಕಾಮಗಾರಿಗಳು ನಿಲ್ಲಬೇಕು ಎಂದ ಅವರು, ಸರ್ಕಾರಗಳು ಜನತೆಯ ಸೌಕರ್ಯಕ್ಕಾಗಿ ಹತ್ತಾರು ಯೋಜನೆಗಳಿಗೆ ಅನುದಾನ ನೀಡುತ್ತವೆ. ಆದರೆ ಕಾಮಗಾರಿಗಳಲ್ಲಿ ವಿಳಂಬ, ಕಳಪೆ ಮತ್ತು ಅವೈಜ್ಞಾನಿಕತೆ ಕಾರಣಕ್ಕೆ ಯಶಸ್ಸಾಗುವುದಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಅನುದಾನ ಅಪವ್ಯಯವಾಗದಂತೆ ಜನೋಪಯೋಗಿಯಾಗುವಂತೆ ಕಾಮಗಾರಿ ನಿರ್ವಹಿಸಬೇಕೆಂದರು.

ಸ್ವಾಗತದೊಡನೆ ಪ್ರಾಸ್ತಾವಿಕ ಮಾತುಗಳಾಡಿದ ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಧಾರವಾಡದ ಲೆಕ್ಕಾಧಿಕಾರಿ ಪ್ರಭಾವತಿ ಯಳಮೇಲಿ, ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ಜನತೆಗೆ ನೀರು ಪೂರೈಸಲು ೨೦೦೨ರಲ್ಲಿ ₹೯೩ ಕೋಟಿ ಮೊತ್ತದಲ್ಲಿ ಮಹೇಶವಾಡಗಿ ಹತ್ತಿರದ ಕೃಷ್ಣಾ ನದಿ ಮೂಲದಿಂದ ಕಾಮಗಾರಿಯಾಗಿದೆ. ಬನಹಟ್ಟಿ ನಗರಕ್ಕೆ ೨೦೨೧೫ರಲ್ಲಿ ೧.೫೦ ಲಕ್ಷ ಜನಸಂಖ್ಯೆಯ ದೃಷ್ಠಿಯಿರಿಸಿ ₹೧೭೨ ಕೋಟಿ ವೆಚ್ಚದಲ್ಲಿ ನೀರು ಪೂರೈಸಲು ಕಾಮಗಾರಿ ಪೂರ್ಣಗೊಳಿಸಿದೆ. ಬನಹಟ್ಟಿ ನಗರಕ್ಕೆ ನಗರೋತ್ಥಾನ ಹಂತ-೩ರಲ್ಲಿ ₹೧೭೬ ಕೋಟಿ ವೆಚ್ಚದಲ್ಲಿ ೨೧೨೧ರಲ್ಲಿ ಪೂರ್ಣಗೊಳಿಸಿದೆ. ರಬಕವಿ-ರಾಂಪೂರ ನಗರ ಪ್ರದೇಶಗಳಲ್ಲಿನ ಸಿಐ/ಪಿವ್ಹಿಸಿ ಕೊಳವೆಯಗಳು ತುಂಬ ಹಳೆಯದಾದ ಕಾರಣ ಅಮೃತ್.೦.೨ ಯೋಜನೆಯಡಿ ₹೪೨೧೦ ಲಕ್ಷಗಳ ವೆಚ್ಚದಲ್ಲಿ ಮಹಿಷವಾಡಗಿ ಬ್ಯಾರೇಜ್‌ನಿಂದ ಜಲ ಶುದ್ಧೀಕರಣ ಘಟಕದ ವರೆಗೆ ಒಟ್ಟು ೪೦೬ ಮಿ.ಮೀ. ವ್ಯಾಸದ ೪.೧೦ ಕಿ.ಮೀ. ಉದ್ದದ ಎಂ.ಎಸ್.ಏರು ಕೊಳವೆ ಮಾರ್ಗ, ರಬಕವಿ ನಗರದ ಜಲಶುದ್ಧೀಕರಣ ಘಟಕದ ಆವರಣದ ಪಂಪ್ ಮನೆಯಲ್ಲಿ ೧೦ ಎಚ್‌ಪಿ (೨) ಬ್ಲೂಸ್ಟರ್ ಪಂಪ್‌ಸೆಟ್‌ ಅಳವಡಿಸುವುದು. ರಬಕವಿ ಝೋನ್-೧, ೨ ರ ಒಟ್ಟು ೯೬.೯೮ ಕಿಮೀ.ನೀರು ಸರಬರಾಜು ವಿತರಣಾ ಕೋಲವೆ ಮಾರ್ಗ ಅಳವಡಿಸುವುದು ಮತ್ತು ೪೬೫೦ ಮೀಟರ್‌ಯುಕ್ತ ಮನೆಗಳಿಗೆ ಸಂಪರ್ಕ ಕಲ್ಪಿಸುವುದು. ಎಸ್‌ಎಂಎಸ್ ಮೂಲಭೂತ ಸೌಕರ್ಯ ಖಾಸಗಿ ಸಂಸ್ಥೆ ಠಾಣೆ ಇವರಿಗೆ ₹೩೨೭೮.೨೩ ಲಕ್ಷ ಯೋಜನಾ ಮೊತ್ತ ಮತ್ತು ₹೧೬೮.೯೭ ಲಕ್ಷ ನಿರ್ವಹಣಾ ಮೊತ್ತ ಸೇರಿ ಒಟ್ಟು ₹೩೪೪೭ ಲಕ್ಷಕ್ಕೆ ಗುತ್ತಿಗೆ ವಹಿಸಿದೆ. ಕಾಮಗಾರಿ ಮುಕ್ತಾಯಕ್ಕೆ ೧೮ ತಿಂಗಳು ಕಾಲಾವಧಿಯಿದೆಯೆಂದು ವಿವರಿಸಿದರು.

ವೇದಿಕೆಯಲ್ಲಿ ತಹಸೀಲ್ದಾರ್‌ ಗಿರೀಶ ಸ್ವಾದಿ, ನಗರಾಧ್ಯಕ್ಷೆ ವಿದ್ಯಾ ದಬಾಡಿ, ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ, ಸ್ಥಾಯಿ ಸಮಿತಿ ಚೇರ್‌ಮನ್ ಅರುಣ ಬುದ್ನಿ, ಪೌರಾಯುಕ್ತ ಜಗದೀಶ ಈಟಿ, ಯಲ್ಲಪ್ಪ ಪಾಟೀಲ, ಶೀಲಾ ಭಾವಿಕಟ್ಟಿ, ರಜಾಕ ಬಾಗವಾನ್, ಗೌರಿ ಮಿಳ್ಳಿ, ಯುನೂಸ್ ಚೌಗಲಾ, ಯಲ್ಲಪ್ಪ ಕಟಗಿ, ಬಸವರಾಜ ಗುಡೋಡಗಿ, ವಿ.ಎಲ್.ಚಂದ್ರಪ್ಪ, ಕೆ.ಪುಟ್ಟಯ್ಯ ಇದ್ದರು. ಮಲ್ಲಿಕಾರ್ಜುನ ದೇಸಾಯಿ ವಂದಿಸಿದರು.