ಸಾರಾಂಶ
ಅಂಕೋಲಾ: ಪ್ರಸ್ತುತ ಶಿಕ್ಷಣ ಪದ್ಧತಿಯಲ್ಲಿ ವಿಭಿನ್ನ ಆಧುನಿಕ ಹೊಸ ತಂತ್ರಜ್ಞಾನದ ಕಡೆ ಹೆಚ್ಚಿನ ಒಲವಿರುವುದರಿಂದ ವೈಜ್ಞಾನಿಕ, ವೈಚಾರಿಕ ಮನೋಭಾವ ಬೆಳೆಸಿಕೊಂಡು ಶಿಕ್ಷಕ ವಿದ್ಯಾರ್ಥಿಗಳಿಗೆ ಬೋಧಿಸಬೇಕು ಎಂದು ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಮಹಾದೇವ ಗೌಡ ತಿಳಿಸಿದರು.ಕೆಎಲ್ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಕನ ಸಾಧನೆಗೆ ಸಹಕಾರ ನೀಡಿದವರನ್ನು ಮರೆಯಬಾರದು. ಸಹಕಾರ ಪಡೆದವರು ದೊಡ್ಡವರಾಗುತ್ತಾರೆ. ಆದ್ದರಿಂದ ಕೇವಲ ಏಕಮುಖ ಚಿಂತನೆ ಇರಬಾರದು ಎಂದರು.ಕ್ರಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಚಾರ್ಯ ಡಾ. ವಿನಾಯಕ ಜಿ. ಹೆಗಡೆ ಮಾತನಾಡಿ, ಶಿಕ್ಷಕ ತನ್ನ ಶ್ರಮದಿಂದ ಎಷ್ಟು ಮೇಲ್ಮಟ್ಟಕ್ಕಾದರೂ ಸಾಗಬಹುದು. ಆದ್ದರಿಂದ ಶಿಕ್ಷಕ ಮತ್ತು ಪಾಲಕರ ಜವಾಬ್ದಾರಿ ವಿದ್ಯಾರ್ಥಿಗಳ ಮೇಲೆ ಅತಿಯಾಗಿರುತ್ತದೆ. ವಿದ್ಯಾರ್ಥಿಯ ಕೌಶಲ್ಯಗಳನ್ನು ಪ್ರಸ್ತುತ ಸನ್ನಿವೇಶಕ್ಕೆ ತರಲು ಇಂತಹ ಪ್ರದರ್ಶನಗಳು ಅಗತ್ಯ ಎಂದರು. ಕವಿತಾ ಪಟಗಾರ ಸಂಗಡಿಗರು ಪ್ರಾರ್ಥಿಸಿದರು. ವಿಜ್ಞಾನ ಸಂಘದ ಉಪಾಧ್ಯಕ್ಷ ರಾಘವೇಂದ್ರ ಅಂಕೋಲೆಕರ ಸ್ವಾಗತಿಸಿದರು. ಕಾರ್ಯದರ್ಶಿ ಪ್ರತೀಕ ನಾಯಕ ಪರಿಚಯಿಸಿದರು. ಮೇಘದರ್ಶಿನಿ ನಾಯಕ ನಿರೂಪಿಸಿದರು. ಖಜಾಂಚಿ ನಿಕಿತಾ ನಾಯಕ ವಂದಿಸಿದರು. ವಿಜ್ಞಾನ ವಸ್ತುಪ್ರದರ್ಶನದಲ್ಲಿ ಜೀವಕ್ರಿಯೆಗಳು, ಹಸಿರು ಮನೆ, ಸೌರಮಂಡಲ, ಜಲವಿದ್ಯುತ ಸ್ಥಾವರ, ಕೊಳಚೆ ನೀರಿನ ಪುರ್ನಬಳಕೆ, ಅಗ್ನಿಶಾಮಕ, ರೈತರಿಗೊಂದು ಕರೆ ಗಂಟೆ, ಅಪಘಾತ ತಡೆ ಮತ್ತು ರಸ್ತೆ ಸಂರಕ್ಷಣೆ, ಹನಿ ನೀರಾವರಿ, ಸ್ವಚ್ಛ ಪರಿಸರ, ಆಮ್ಲ ಮಳೆ, ತ್ಯಾಜ್ಯ ಮರುಬಳಕೆ ನದಿ ಶುಚಿಗೊಳಿಸುವಿಕೆ, ಜಲಕೃಷಿ ಮುಂತಾದ ಮಾದರಿಗಳು ವೈಜ್ಞಾನಿಕ ಮನೋಭಾವ ಬೆಳೆಸಲು ಕಾರಣವಾಯಿತು.