ಶಿಕ್ಷಕರು ಮಕ್ಕಳ ಮನೋವೈಜ್ಞಾನಿಕ ನೆಲೆಗಟ್ಟಿನಲ್ಲಿ ಶಿಕ್ಷಣ ನೀಡಲಿ: ಸಿ.ವಿ. ಚಂದ್ರಶೇಖರ

| Published : Dec 29 2024, 01:17 AM IST

ಶಿಕ್ಷಕರು ಮಕ್ಕಳ ಮನೋವೈಜ್ಞಾನಿಕ ನೆಲೆಗಟ್ಟಿನಲ್ಲಿ ಶಿಕ್ಷಣ ನೀಡಲಿ: ಸಿ.ವಿ. ಚಂದ್ರಶೇಖರ
Share this Article
  • FB
  • TW
  • Linkdin
  • Email

ಸಾರಾಂಶ

ಕುಷ್ಟಗಿ ಪಟ್ಟಣದ ಶ್ರೀ ವಿಜಯ ಚಂದ್ರಶೇಖರ ಶಿಕ್ಷಣ ಸಂಸ್ಥೆಯ ಶಿಕ್ಷಕರಿಗೆ ಎರಡು ದಿನಗಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಪ್ತ ಸಮಾಲೋಚನೆಯ ಮೂಲಭೂತ ಕೌಶಲ್ಯಗಳು ಎಂಬ ತರಬೇತಿ ಕಾರ್ಯಕ್ರಮ ನಡೆಯಿತು.

ಕುಷ್ಟಗಿ: ಶಿಕ್ಷಕರು ಮಕ್ಕಳನ್ನು ಮನೋವೈಜ್ಞಾನಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಎಸ್‌ವಿಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ.ವಿ. ಚಂದ್ರಶೇಖರ ಹೇಳಿದರು.

ಪಟ್ಟಣದ ಶ್ರೀ ವಿಜಯ ಚಂದ್ರಶೇಖರ ಶಿಕ್ಷಣ ಸಂಸ್ಥೆಯ ಶಿಕ್ಷಕರಿಗೆ ಆಯೋಜಿಸಿದ್ದ ಎರಡು ದಿನಗಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಪ್ತ ಸಮಾಲೋಚನೆಯ ಮೂಲಭೂತ ಕೌಶಲ್ಯಗಳು ಎಂಬ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ, ಕೈ ಬರವಣಿಗೆಯ ಗ್ಲೋಬಲ್ ಚಾಂಪಿಯನ್ ಪ್ರಶಸ್ತಿ ಪುರಸ್ಕೃತ ರೋಸ್ಲಿನ್ ರಿಚರ್ಡ್ ಮಾತನಾಡಿ, ಮಕ್ಕಳ ಮನೋವೈಜ್ಞಾನಿಕ ಸ್ಥಿತಿಗತಿಯ ಬಗ್ಗೆ ದೇಶಾದ್ಯಂತ ಪಾಲಕರಿಗೆ ಶಿಕ್ಷಕರಿಗೆ ಸರಿಯಾದ ತಿಳಿವಳಿಕೆ ಇರದಿರುವುದು ಇಂದಿನ ಶೈಕ್ಷಣಿಕ ವ್ಯವಸ್ಥೆಗಳಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದರು.

ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತಗಳ ಮಕ್ಕಳ ಮನೋವೈಜ್ಞಾನಿಕ ಸ್ಥಿತಿಯ ಬಗ್ಗೆ ಇತ್ತೀಚೆಗೆ ದೇಶಾದ್ಯಂತ ಸಮೀಕ್ಷೆ ಕೈಗೊಳ್ಳಲಾಯಿತು. ಆ ಸಮೀಕ್ಷೆಯು ಈ ಹಂತದ ಮಕ್ಕಳ ಮಾನಸಿಕ ಸ್ಥಿತಿ ಕುರಿತು ಶಿಕ್ಷಕರಿಗೆ ಮತ್ತು ಪಾಲಕರಿಗೆ ಸರಿಯಾದ ತಿಳಿವಳಿಕೆ ಇಲ್ಲ ಎಂಬ ಸಂಗತಿಯನ್ನು ಬಹಿರಂಗಪಡಿಸಿದೆ ಎಂದರು.

ಕೋವಿಡ್ ನಂತರದ ಕಾಲಘಟ್ಟದಲ್ಲಿ ಮಕ್ಕಳು ಸಾಮಾಜಿಕ ಜಾಲತಾಣ ಮೊಬೈಲ್ ಫೋನ್ ಹಾಗೂ ಗ್ಯಾಜೆಟ್‌ಗಳಿಗೆ ಅಂಟಿಕೊಂಡಿದ್ದರಿಂದ ಮನೋವೈಜ್ಞಾನಿಕ ಬೆಳವಣಿಗೆ ಕುಂಠಿತಗೊಂಡಿದೆ. ಮಾನಸಿಕ ನಡತೆಯಲ್ಲಿ ಭಾರಿ ಬದಲಾವಣೆಯಾಗಿದೆ. ಅದನ್ನು ಸರಿಪಡಿಸದಿದ್ದರೆ ಅವರ ಭವಿಷ್ಯಕ್ಕೆ ಮಾರಕವಾಗಲಿದೆ ಎಂಬ ಅಂಶವನ್ನು ಸಮೀಕ್ಷಾ ವರದಿ ಹೇಳಿದ್ದು, ಶಿಕ್ಷಕರು, ಪಾಲಕರು, ಮಕ್ಕಳ ವರ್ತನೆಯನ್ನು ವಿಶ್ಲೇಷಿಸಿ ಪರಿಹಾರ ಕಂಡುಕೊಳ್ಳುವುದು ಮುಖ್ಯವಾಗಿದೆ ಎಂದರು.

ಕೈ ಬರವಣಿಗೆಯು ಮಗುವಿನ ಮಾನಸಿಕ ಬೆಳವಣಿಗೆ ಹಾಗೂ ಸಂವೇದನೆಯ ಅಭಿವ್ಯಕ್ತಿ. ಈ ಕಲೆ ಇಂದು ನಶಿಸಿ ಹೋಗುತ್ತಿರುವುದು ದುರಂತದ ಸಂಕೇತ. ಕೈ ಬರವಣಿಗೆ ಎಂದರೆ ಮೆದುಳಿನ ಬರವಣಿಗೆ. ಹೀಗಾಗಿ, ಈ ಕಲೆಗೆ ಶಿಕ್ಷಕರು ಪ್ರಾಥಮಿಕ ಹಂತದಲ್ಲಿ ಹೆಚ್ಚು ಒತ್ತು ನೀಡಬೇಕು. ಮಗುವನ್ನು ಬೆಳೆಸಲು ಪರಂಪರಾಗತವಾಗಿ ಬಂದ ಕೌಶಲ್ಯಗಳನ್ನು ಇಂದಿನ ಪಾಲಕರು ನಿರ್ಲಕ್ಷಿಸಿದ್ದಾರೆ. ಇದು ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಮನೋವೈಜ್ಞಾನಿಕ ನಿಟ್ಟಿನಲ್ಲಿ ಶಿಕ್ಷಣ ನೀಡಬೇಕು ಎಂದರು.

ಆಯುಷ್ ವೈದ್ಯಾಧಿಕಾರಿಗಳಾದ ಡಾ. ಮಂಜುನಾಥ್ ಅನಗೌಡರ ಮಾತನಾಡಿ, ಶಾಲೆಗಳು ಕೈ ಶುಚಿತ್ವದ ವಾರವನ್ನು ಆಚರಿಸುವ ಮೂಲಕ ಮಕ್ಕಳಲ್ಲಿ ಕೈ ಶುಚಿತ್ವ ಕಾಪಾಡಿಕೊಳ್ಳುವ ಮಹತ್ವವನ್ನು ತಿಳಿ ಹೇಳಬೇಕಿದೆ. ಕೈ ಶುಚಿತ್ವ ಇಲ್ಲದಿರುವುದು ಶೇ. 90ರಷ್ಟು ರೋಗಗಳಿಗೆ ಮೂಲ ಕಾರಣ. ಮನೋವೈಜ್ಞಾನಿಕ ಸ್ಥಿತಿ ಬಗ್ಗೆ ಸಮಾಜದಲ್ಲಿ ಕಳಂಕದ ಭಾವ ಇದೆ. ಇದು ಎಲ್ಲ ಸಮಸ್ಯೆಗಳಿಗೆ ಮೂಲ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಪ್ರಶಾಂತ ಹಿರೇಮಠ, ಶಾಲಾ ಶೈಕ್ಷಣಿಕ ನಿರ್ದೇಶಕ ಭೀಮರಾವ್ ಕುಲಕರ್ಣಿ ಹಾಜರಿದ್ದರು 35 ಜನ ಶಿಕ್ಷಕರು ಪಾಲ್ಗೊಂಡಿದ್ದರು.