ಸಾರಾಂಶ
ಹಳಿಯಾಳ: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಮ್ಮ ಕುಸ್ತಿಪಟುಗಳು ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ. ಆದರೆ ಅದು ಸಾಲದು. ನಮ್ಮ ಗುರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕವನ್ನು ಗೆಲ್ಲುವುದಾಗಬೇಕು. ಈ ಸಾಧನೆಯನ್ನು ಮಾಡುವ ಕುಸ್ತಿಪಟುವಿಗೆ ವೈಯಕ್ತಿಕವಾಗಿ ₹1 ಲಕ್ಷ ನಗದು ಬಹುಮಾನವನ್ನು ಹಾಗೂ ಅವರ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಬೇಕಾಗುವ ಸಕಲ ಸಹಕಾರವನ್ನು ನೀಡುವುದಾಗಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಘೋಷಿಸಿದರು. ಗುರುವಾರ ಪಟ್ಟಣದ ರುಡ್‌ಸೆಟಿ ಸಭಾಂಗಣದಲ್ಲಿ ವಿಆರ್‌ಡಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಮೈಸೂರಿನಲ್ಲಿ ಜರುಗಿದ ದಸರಾ ಸಿಎಂ ಕಪ್ 2024ರ ಕುಸ್ತಿ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಹಳಿಯಾಳ ತಾಲೂಕಿನ ಕುಸ್ತಿಪಟುಗಳನ್ನು ಸನ್ಮಾನಿಸಿ ಮಾತನಾಡಿದರು. ಕುಸ್ತಿ ಕ್ರೀಡೆಗೆ ತಾರಾಮೌಲ್ಯವನ್ನು ನೀಡಿ ಹಳಿಯಾಳದ ಕೀರ್ತಿಯನ್ನು ಬೆಳಗಿಸಿದ ಶ್ರೇಷ್ಠ ಪೈಲ್ವಾನ ಸಹೋದರರಾದ ಅಗ್ನೇಲ್ ಹಾಗೂ ಜುಜೆಯವರ ನಂತರ ಈಗ ಬಹುವರ್ಷಗಳಲ್ಲಿ ಕುಸ್ತಿಯಲ್ಲಿ ಹಳಿಯಾಳದ ಗರಿಮೆಯನ್ನು ಗೌರವವನ್ನು ಹೆಚ್ಚಿಸುವ ಸಾಧನೆಯನ್ನು ಉದಯೋನ್ಮುಖ ಕುಸ್ತಿಪಟುಗಳು ಮಾಡುತ್ತಿದ್ದಾರೆ ಎಂದರು.ಯುವಜನ ಸಬಲೀಕರಣ ಮತ್ತು ಕ್ರೀಡಾಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ರವಿ ನಾಯಕ ಮಾತನಾಡಿ, ತಾಲೂಕಿನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಶಾಸಕ ಆರ್.ವಿ. ದೇಶಪಾಂಡೆಯವರು ಸಹಕಾರ, ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.ವಿಆರ್‌ಡಿ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಮಾತನಾಡಿ, 2004ರಲ್ಲಿ ದೇಶಪಾಂಡೆಯವರ ಪ್ರಯತ್ನದಿಂದ ಹಳಿಯಾಳದಲ್ಲಿ ಮೊದಲ ಬಾರಿಗೆ ಬಾಲಕಿಯರ ಕುಸ್ತಿ ಸ್ಪರ್ಧೆಯು ಆಯೋಜನೆಯಾಯಿತು ಎಂದರು. ಸನ್ಮಾನ:
ಕಾರ್ಯಕ್ರಮದಲ್ಲಿ 2024ರ ದಸರಾ ಮಹಿಳಾ ಕಿಶೋರಿ ಪ್ರಶಸ್ತಿ ಪುರಸ್ಕೃತ ಶಾಲಿನಿ ಸಾವೇರ ಸಿದ್ದಿ, ಗಾಯತ್ರಿ ಸುತಾರ, ಮಹೇಶ ಗೌಡಾ, ಕೃಷ್ಣಾ ಯಮನಪ್ಪನವರ, ರೋಹನ ದೊಡ್ಮಣಿ, ಆಯಾನ್ ಕಕ್ಕೇರಿ, ಬಾಳು ಧಾಮಣೆಕರ, ಅಮೋಘ ಶಿರೋಡ್ಕರ, ವಿಜಯ ಭಂಗ್ಯಾನವರ, ಜ್ಞಾನೇಶ್ವರ ಹಳದುಳಕರ, ಶಾಯಿದ ದೇವಕಾರಿ, ಲೋಹಿತ ನಾಯ್ಕ, ಲೀನಾ ಸಿದ್ಧಿ, ಗೋಪವ್ವಾ ಕೊಡಕಿ, ಪ್ರಿನ್ಸಿಟಾ ಫರ್ನಾಂಡೀಸ್ ಸಿದ್ದಿ, ಲಕ್ಷ್ಮೀ ಪಾಟೀಲ, ಮನಿಷಾ ಸಿದ್ದಿ, ಪ್ರತಿಕ್ಷಾ ಭೋವಿ, ರಾಧಿಕಾ ಬಸ್ತವಾಡಕರ, ಕಾವ್ಯಾ ಧಾನವೆನ್ನವರ, ಕಾವೇರಿ ತಲಗೇರಿ, ಭುವನೇಶ್ವರಿ ಕೋಳಿವಾಡ ಅವರನ್ನು ಹಾಗೂ ತರಬೇತುದಾರರಾದ ತುಕಾರಾಮ ಗೌಡಾ, ಬಾಳಕೃಷ್ಣ ದಡ್ಡಿ, ಮಮತಾ ಕೇಳೋಜಿಯವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕುಸ್ತಿಪಟು, ಭಾರತೀಯ ಸೇನೆಯ ಯೋಧ ವೆಂಕಟೇಶ್ ಪಾಟೀಲ, ಸ್ಥಳೀಯ ಜನಪ್ರತಿನಿಧಿಗಳು, ಕುಸ್ತಿಪಟುಗಳು ಪಾಲ್ಗೊಂಡಿದ್ದರು.