ಸಾರಾಂಶ
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ
ರಂಗಕರ್ಮಿಗಳು ಮತ್ತು ಕಲಾವಿದರು ಹೆಚ್ಚಾಗಿ ಅಧ್ಯಯನಶೀಲರಾಗುವುದರ ಜೊತೆಗೆ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ವಿಶಿಷ್ಠ ದೃಷ್ಟಿಕೋನ ಹೊಂದಿದಾಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗಲಿದೆ ಎಂದು ಉಪನ್ಯಾಸಕ ಎಂ. ಸೋಮೇಶ್ ಉಪ್ಪಾರ್ ಹೇಳಿದರು.ಇಲ್ಲಿನ ದುರ್ಗಾದಾಸ ಕಲಾಮಂದಿರದಲ್ಲಿ ರಂಗಬಿಂಬ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ ಪ್ರಾಯೋಜಿತ ಕಾರ್ಯಕ್ರಮದಡಿಯಲ್ಲಿ ರಂಗ ಶ್ರಾವಣ ಸಂಭ್ರಮದಲ್ಲಿ ಜಿ. ಸೋಮಣ್ಣ ಗೊಲ್ಲರಹಳ್ಳಿ ತಂಡದವರಿಂದ ಸುಗಮ ಸಂಗೀತ ಹಾಗೂ ಬಸವರಾಜ ಟಿ. ತಂಡದವರಿಂದ ಸೀತಾ ಮಂಡೋದರಿ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ನಿರ್ದೇಶಕರು ಪ್ರೇಕ್ಷಕರಿಗೆ ಸದಾ ಉತ್ತಮ ಮೌಲ್ಯಗಳಿಂದ ಕೂಡಿದ ಉತ್ತಮ ನಾಟಕ ನೀಡಬೇಕೆಂದು ನಿರಂತರ ಪ್ರಯತ್ನಶೀಲರಾಗಿರುತ್ತಾರೆ. ಈ ಹಿನ್ನೆಲೆ ನಿರ್ದೇಶಕರು, ರಂಗಕರ್ಮಿಗಳು ಮತ್ತು ಕಲಾವಿದರು ಹೆಚ್ಚು ಅಧ್ಯಯನಶೀಲರಾಗುವ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವುದರಿಂದ ಉತ್ತಮ ನಾಟಕಗಳ ಪ್ರದರ್ಶನವಾಗುತ್ತಿರುವುದು ಸಂತಷದ ಸಂಗತಿಯಾಗಿದೆ ಎಂದು ಅವರು ಹೇಳಿದರು.ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಬೆಳಸಿಕೊಂಡು ಹೋಗುವುದು ಬಹಳ ಮುಖ್ಯ. ಶಿಕ್ಷಣದ ಜೊತೆಯಲ್ಲಿ ಕಲೆ ಮುಂದುವರೆಸಿಕೊಂಡು ಹೋದರೆ ಸಾಧನೆಗೆ ಸಹಕಾರಿ ಎಂದರು.
ರಂಗ ಶಿಕ್ಷಕ ಈಡಿಗರ ವೆಂಕಟೇಶ್ ಮಾತನಾಡಿ, ಮರಿಯಮ್ಮನಹಳ್ಳಿ ರಂಗ ಪರಿಸರದಲ್ಲಿ ಹುಟ್ಟಿ ಬೆಳೆದ ನನ್ನನ್ನು ನಿರಂತರ ರಂಗ ಚಟುವಟಿಕೆಗಳು ಒಬ್ಬ ರಂಗಶಿಕ್ಷಕನನ್ನಾಗಿ ಬೆಳೆಸಿವೆ ಎಂದು ಹೇಳಿದರು.ಪಪಂ ಸದಸ್ಯೆ ಪೂಜಾ ಅಶ್ವಿನಿ ನಾಗರಾಜ ಮಾತನಾಡಿದರು.
ಪಪಂ ಉಪಾಧ್ಯಕ್ಷೆ ಲಕ್ಷ್ಮೀ ರೋಗಾಣಿ ಮಂಜುನಾಥ ಕಾರ್ಯಕ್ರಮ ಉದ್ಘಾಟಿಸಿದರು.ರಂಗಬಿಂಬದ ಅಧ್ಯಕ್ಷೆ ಎಂ. ಗಾಯತ್ರಿದೇವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ. ಕೆ. ನಾಗರತ್ನಮ್ಮ, ಪಪಂ ಸದಸ್ಯ ಕೆ. ಮಂಜುನಾಥ, ಲಲಿತ ಕಲಾರಂಗದ ಅಧ್ಯಕ್ಷ ಎಚ್. ಮಂಜುನಾಥ, ಗಾಯಕ ಸಂತೋಷ ಕುಮಾರ್ ಚಂದುಕರ, ರಂಗ ನಿರ್ದೇಶಕ ಸರದಾರ ಬಿ. ಸೋನು ಡ್ಯಾನ್ಸ್ ಅಕಾಡೆಮಿ ಸೋನು ಭಾಗವಹಿಸಿದ್ದರು.ಜಿ. ಸೋಮಣ್ಣ ಗೊಲ್ಲರಹಳ್ಳಿ ತಂಡದವರಿಂದ ಸುಗಮ ಸಂಗೀತ ನಡೆಯಿತು. ಕೆ. ತಿಪ್ಪಣ್ಣ ಹಾರ್ಮೋನಿಯಂ, ಜಿ. ಕೆ. ಮೌನೇಶ್ ತಬಲಾ ಸಾಥ್ ನೀಡಿದರು.
ನಂತರ ಬಸವರಾಜ ಟಿ. ತಂಡದವರಿಂದ ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನಂ ಮಾಹಕಾವ್ಯದಿಂದ ಆಯ್ದ ಭಾಗವನ್ನು ಆಧರಿಸಿದ ಸರದಾರ ಬಿ. ನಿರ್ದೇಶನದಲ್ಲಿ ಸೀತಾ ಮಂಡೋದರಿ ನಾಟಕ ಪ್ರದ್ರರ್ಶನಗೊಂಡಿತು. ನಾಟಕಕ್ಕೆ ನಾಗಲಾಪುರದ ಶರಣಬಸವ ಗಾಯನ ನೀಡಿದರು.ಮರಿಯಮ್ಮನಹಳ್ಳಿಯ ಸೋನು ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ನೀಡಿದರು.
ಜಿ. ಮಲ್ಲಪ್ಪ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಕೃತಿ ಎನ್. ದೇವನಕೊಂಡ ಸ್ವಾಗತಿಸಿದರು. ಕೆ. ನಾಗೇಶ ನಿರೂಪಿಸಿದರು. ರಂಗಬಿಂಬದ ಕಾರ್ಯದರ್ಶಿ ಸಿ.ಕೆ. ನಾಗರಾಜ ವಂದಿಸಿದರು.