ಸಾರಾಂಶ
ಧಾರವಾಡ:
ಇಲ್ಲಿಯ ಆರ್‌ಎಂಎಸ್ ರೈಲ್ವೆ ಅಂಚೆ ಕಚೇರಿಯನ್ನು ಹುಬ್ಬಳ್ಳಿಗೆ ಸ್ಥಳಾಂತರಿಸುವುದನ್ನು ಕೈ ಬಿಡುವುದು ಸೇರಿದಂತೆ ಇಲ್ಲಿಯ ಧಾರವಾಡ ವಕೀಲರ ಸಂಘದಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ತುರ್ತು ಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯವಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.ಹಿರಿಯ ನ್ಯಾಯವಾದಿ, ಹೋರಾಟಗಾರ ಬಿ.ಡಿ. ಹಿರೇಮಠ ಸೇರಿದಂತೆ ಹಿರಿಯ ನ್ಯಾಯವಾದಿಗಳು ಸಭೆಯಲ್ಲಿ ಭಾಗವಹಿಸಿ, ಉತ್ತರ ಕರ್ನಾಟಕ ನ್ಯಾಯಯುತ ಬೇಡಿಕೆಗಳನ್ನು ಹೋರಾಟದಿಂದಲೇ ಪಡೆಯುವ ಪರಿಸ್ಥಿತಿ ನಮ್ಮ ಜನತೆಗೆ ಬಂದಿರುವುದು ದುಃಖಕರ ಸಂಗತಿ. ಇಲ್ಲಿಯ ಅನೇಕ ಜ್ವಲಂತ ನ್ಯಾಯಯುತವಾದ ಬೇಡಿಕೆಗಳಿಗೆ ಹೋರಾಟ ಮಾಡಿಯೇ ಪಡೆಯಬೇಕಿದೆ. 2012ರಲ್ಲಿ ಬೆಳಗಾವಿಯ ಸುವರ್ಣಸೌಧ ಉದ್ಘಾಟನೆ ವೇಳೆ ಆಗಿನ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ, ಉತ್ತರ ಕರ್ನಾಟಕದ ಭಾಗದ ಜನರ ನ್ಯಾಯಯುತವಾದ ಬೇಡಿಕೆ, ಅಭಿವೃದ್ಧಿಯ ತೀರ್ಮಾನಗಳು ಈ ಸೌಧದಲ್ಲಿಯೇ ಆಗಬೇಕು ಎಂದಿದ್ದರು. ಆದರೆ, ಈ ಮಾತು ಸತ್ಯವಾಗುತ್ತಿಲ್ಲ. ಉದ್ಘಾಟನೆಗೊಂಡ 12 ವರ್ಷಗಳಾದರೂ ವರ್ಷಕ್ಕೊಂದು ಅಧಿವೇಶನಕ್ಕೆ ಮಾತ್ರ ಇದು ಸೀಮಿತವಾಗಿದೆ. ಸರ್ಕಾರದ ಎಲ್ಲಾ ಇಲಾಖೆಗಳನ್ನು ಬೆಳಗಾವಿಗೆ ತರುವ ಇಚ್ಛಾಶಕ್ತಿಯ ಕೊರತೆ ಸ್ಥಳೀಯ ಜನ ಪ್ರತಿನಿಧಿಗಳಲ್ಲಿ ಎದ್ದು ಕಾಣುತ್ತಿದೆ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು.
ಇವು ನಿರ್ಣಯಗಳು:ಕೂಡಲೆ ಬೆಳಗಾವಿಯಲ್ಲಿ ಸುವರ್ಣಸೌಧದ ಮಗ್ಗಲಿಗೆ ಆಡಳಿತ ಸೌಧವು ನಿರ್ಮಾಣವಾಗಬೇಕು. ಹು-ಧಾ ಮಹಾನಗರ ಪಾಲಿಕೆ ವಿಭಜಿಸಿ ಧಾರವಾಡವನ್ನು ಪ್ರತ್ಯೇಕ ಮಹಾನಗರ ಪಾಲಿಕೆ ಎಂದು ಇದೇ ಅಧಿವೇಶನದಲ್ಲಿ ಘೋಷಿಸಬೇಕು. ಕೃಷ್ಣಾ ಮೇಲ್ದಂಡೆ ರೈತರ ಸಮಸ್ಯೆಗಳನ್ನು ಕೂಡಲೇ ಇತ್ಯರ್ಥಪಡಿಸಬೇಕು. ಮಹದಾಯಿ ಮತ್ತು ಕಳಸಾ ಬಂಡೂರಿ ಬಗ್ಗೆ ಸರ್ವ ಪಕ್ಷಗಳ ನಿಯೋಗವನ್ನು ತೆಗೆದುಕೊಂಡು ಪ್ರಧಾನಿ ಹಾಗೂ ಕೇಂದ್ರ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಯೋಜನೆ ಕಾರ್ಯ ರೂಪಕ್ಕೆ ತರಲು ಕೇಂದ್ರವನ್ನು ಒತ್ತಾಯಿಸಬೇಕು. ತುಂಗಾ ಮೇಲ್ದಂಡೆ ಹಾಗೂ ರೈತರುಗಳಿಂದ ಸ್ವಾಧೀನ ಪಡಿಸಿಕೊಂಡ ಜಮೀನುಗಳಿಗೆ ಪರಿಹಾರ ವಿತರಿಸಲು ತೀರ್ಮಾನಿಸಬೇಕು. ಡಾ. ನಂಜುಂಡಪ್ಪ ವರದಿಯ ಅನುಷ್ಠಾನದ ಪ್ರಕ್ರಿಯೆ ಈ ಅಧಿವೇಶನದಲ್ಲಿ ವಿಶೇಷ ಅನುದಾನ ನೀಡಲು ತೀರ್ಮಾನಿಸಬೇಕು ಎಂದು ನಿರ್ಣಯಗಳನ್ನು ಮಂಡಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ, ಪ್ರಧಾನ ಕಾರ್ಯದರ್ಶಿ ಎಸ್.ಎಂ. ಹೆಬ್ಬಳ್ಳಿ, ಆಶಿಷ್ ಮಗದುಮ್, ಎಸ್.ಎಂ. ಹೆಬ್ಬಳ್ಳಿ, ಪ್ರಕಾಶ ಎಚ್. ರಟಗೇರಿ, ಮತ್ತಿತರರು ಇದ್ದರು.