ವಿದ್ಯಾರ್ಥಿಗಳಲ್ಲಿ ದೇಶ ಸೇವೆಯ ಗುರಿ ಮೂಡಲಿ: ಕೆ.ಎಸ್.ಆನಂದ್

| Published : Aug 14 2024, 12:50 AM IST

ಸಾರಾಂಶ

ಕಡೂರು, ದೇಶ ಸೇವೆ ಮಾಡಬೇಕೆಂಬ ಗುರಿಯೊಡನೆ ಸೈನ್ಯಕ್ಕೆ ಸೇರುವ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಸರ್ಕಾರಿ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘಗಳ ಸಮಾರಂಭ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕಡೂರು

ದೇಶ ಸೇವೆ ಮಾಡಬೇಕೆಂಬ ಗುರಿಯೊಡನೆ ಸೈನ್ಯಕ್ಕೆ ಸೇರುವ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ 2024-25ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹಿಂದಿನ ದಿನಗಳಲ್ಲಿ ಸೈನ್ಯಕ್ಕೆ ಸೇರಿದರೆ ಸಾಯುವುದು ಖಂಡಿತ ಎಂಬ ಮಾತು ಸಾಮಾನ್ಯವಾಗಿತ್ತು. ಆದರೆ ವಾಸ್ತವದಲ್ಲಿ ಅದು ಸುಳ್ಳು. ನಮ್ಮ ತಾಯಿ ನೆಲವನ್ನು ರಕ್ಷಿಸಲು ಸೈನ್ಯಕ್ಕೆ ಸೇರುತ್ತೇವೆ ಎಂಬುದೇ ರೋಮಾಂಚಕಾರಿ ಸಂಗತಿ. ಕೇವಲ ಡಾಕ್ಟರ್ ಅಥವಾ ಇಂಜಿನಿಯರ್ ಆಗುವ ಬದಲಿಗೆ ದೇಶ ಸೇವೆ ಗುರಿ ಯೊಡನೆ ಸೈನ್ಯಕ್ಕೆ ಸೇರುವ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡಿದರೆ ನಮ್ಮ ಬಿ.ಎಸ್.ರಾಜು ಅಂತಹ ವೀರಯೋಧರ ದೇಶ ಸೇವೆ ಸಾರ್ಥಕವಾಗುತ್ತದೆ. ಹಾಗೆಯೇ ಕಾವ್ಯ ಅವರ ಸಾಧನೆ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗುತ್ತದೆ ಎಂದರು. ನಿವೃತ್ತ ಲೆಫ್ಟಿನೆಂಟ್ ಜನರಲ್ ರಾಜು ಬಗ್ಗವಳ್ಳಿ ಮಾತನಾಡಿ, ದೇಶಸೇವೆ ಮಾಡುವ ಅವಕಾಶ ದೊರೆತರೆ ಹಿಂದೆ ಸರಿಯದೆ ಮುನ್ನುಗ್ಗಬೇಕು. ನಮ್ಮ ದೇಶದಲ್ಲಿ ಸ್ವಚ್ಛತೆ ಮತ್ತು ಶಿಸ್ತು ಬಹು ಕಡಿಮೆಯೆಂಬುದು ಬೇಸರದ ಸಂಗತಿ. ಇವೆರಡೂ ಇಲ್ಲದ ದೇಶ ಮುಂದುವರಿಯಲು ಸಾಧ್ಯವಿಲ್ಲ. ಶಿಸ್ತು -ಸ್ವಚ್ಛತೆ ನಮ್ಮ ವ್ಯಕ್ತಿತ್ವ ರೂಪಿಸುತ್ತದೆ. ಮಕ್ಕಳಲ್ಲಿ ಶಿಸ್ತು ಕಲಿಕೆ ಮನೆ ಯಿಂದಲೇ ಆರಂಭವಾಗಿ ಶಾಲೆಯಲ್ಲಿ ಮುಂದುವರಿಯುತ್ತದೆ. ಚಲನೆಯಲ್ಲಿ ಜೀವವಿದೆ. ಜಡತೆಯಲ್ಲಿ ಸಾವಿದೆ ಎಂಬ ರಾಧಾಕೃಷ್ಣನ್ ಅವರ ಮಾತು ನಮಗೆ ಆದರ್ಶವಾಗಿರಬೇಕು. ನಾವ್ಯಾರೂ ನಿಂತ ನೀರಾಗದೆ ಹರಿವ ನೀರಾಗಬೇಕು. ಶೈಕ್ಷಣಿಕವಾಗಿ ಸಾಧನೆ ಮಾಡುವ ಜೊತೆ ದೇಶದ ರಕ್ಷಣೆ ಬಗ್ಗೆಯೂ ಚಿಂತನೆ ನಡೆಸಬೇಕು ಎಂದು ಮಾರ್ಗರ್ಶನ ನೀಡಿದರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಇಂದು ಕಾಲೇಜಿನ ಗೌರವಕ್ಕೆ ಪಾತ್ರರಾಗುತ್ತಿರುವ ಸಾಧಕ ರಾಜು ಬಗ್ಗವಳ್ಳಿ ಮತ್ತು ಕಾವ್ಯಅವರು ನಮ್ಮ ತಾಲೂಕು ಮತ್ತು ನಮ್ಮ ಜಿಲ್ಲೆಯವರೇ ಎಂಬುದು ನಮಗೆ ಸಂತೋಷದ ಸಂಗತಿ. ಅವರ ಸಾಧನೆಗೆ ಕಠಿಣ ಪರಿಶ್ರಮ ಕಾರಣ. ಯುವ ಸಮೂಹ ದೇಶ ಸೇವೆಗೆ ತಮ್ಮ ಜೀವನ ಮುಡುಪಾಗಿಡುವ ಮೂಲಕ ಅವರ ಸಾಧನೆ ಹಾದಿಯಲ್ಲಿ ಸಾಗಲು ಶ್ರಮ ಪಡಬೇಕು ಎಂದು ಕರೆ ನೀಡಿದರು.

ಯುಪಿಎಸ್ ಸಿ ಪರೀಕ್ಷೆಯಲ್ಲಿ ಐಎಫ್ ಎಸ್ ಗೆ ಆಯ್ಕೆಯಾದ ವೈ.ಎಸ್.ಕಾವ್ಯ ಮಾತನಾಡಿ, ಓದು ಎಂದರೆ ಬರೀ ಬಾಯಿಪಾಠ ಮಾಡಿ ಅಂಕ ಪಡೆಯುವುದಲ್ಲ. ಪಠ್ಯದ ಸಾರಾಂಶ ಮನನ ಮಾಡಿಕೊಂಡರೆ ಉತ್ತಮ ಅಂಕ ಪಡೆಯುವುದು ಕಷ್ಟವಲ್ಲ ಎಂದರು. ಕಾರ್ಯಕ್ರಮದಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ರಸಾಯನ ಶಾಸ್ತ್ರ ಉಪನ್ಯಾಸಕ ವಿ. ಉಮೇಶ್ ಮತ್ತು ವರ್ಗಾವಣೆಯಾದ ಕೆ.ಎಸ್. ಮಂಜುಳಾ ಅವರನ್ನು ಗೌರವಿಸಲಾಯಿತು. ಕಾಲೇಜು ಪ್ರಾಂಶುಪಾಲ ಡಾ.ತವರಾಜು, ಡಾ.ಬಸವರಾಜು, ಉಪನ್ಯಾಸಕ ಫಣಿರಾಜು ಮತ್ತಿತರರು ಇದ್ದರು.13ಕೆಕೆಡಿಯು1.

ಕಡೂರು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘಗಳ ಉದ್ಘಾಟನಾ ಸಮಾರಂಭ ನಡೆಯಿತು.