ಕುಡಿಯುವ ನೀರಿನ ಸಮಸ್ಯೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಲಿ

| Published : Dec 16 2023, 02:00 AM IST

ಕುಡಿಯುವ ನೀರಿನ ಸಮಸ್ಯೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ನೀರಿನ ಸಮಸ್ಯೆ ಕಂಡುಬಂದರೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ವಿಶಾಲ್ ಆರ್. ಸೂಚನೆ ನೀಡಿದ್ದಾರೆ. ಬರ ನಿರ್ವಹಣೆ ಹಾಗೂ ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತು ಶುಕ್ರವಾರ ಆನ್‌ಲೈನ್‌ ಮೂಲಕ ಪ್ರಗತಿ ಪರಿಶೀಲನೆ ನಡೆಸಿದ ಅವರು ಸದ್ಯದ ಸ್ಥಿತಿಗತಿ ಮಾಹಿತಿ ಪಡೆದು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ.

ಹಾವೇರಿ: ಬರಗಾಲ ಇರುವುದರಿಂದ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಪ್ರಸ್ತುತ ವಿವಿಧ ಕುಡಿಯುವ ನೀರಿನ ಮೂಲದಿಂದ ಸರಬರಾಜು ಮಾಡಲಾಗುತ್ತಿರುವ ನೀರು ಸಮರ್ಪಕ ಎನಿಸದಿದ್ದರೆ ಖಾಸಗಿ ಕೊಳವೆಬಾವಿ, ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಟ್ಯಾಂಕರ್ ಬಳಸಬೇಕಾದರೆ ತ್ರಿಸದಸ್ಯ ಕಮಿಟಿ ಪರಿಶೀಲಿಸಿ ಕ್ರಮವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ವಿಶಾಲ್ ಆರ್. ಸೂಚನೆ ನೀಡಿದರು.

ಜಿಲ್ಲೆಯ ಬರ ನಿರ್ವಹಣೆ ಹಾಗೂ ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತು ಶುಕ್ರವಾರ ವಿಡಿಯೋ ಸಭೆಯ ಮೂಲಕ ಪ್ರಗತಿ ಪರಿಶೀಲನೆ ನಡೆಸಿದ ಅವರು, ತಹಸೀಲ್ದಾರ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಭಿಯಂತರರು ಒಳಗೊಂಡ ತಾಲೂಕು ಮಟ್ಟದ ತ್ರಿ ಸದಸ್ಯ ಸಮಿತಿ ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ ತೀರ್ಮಾನಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ದಾಸ್ತಾನು ಕುರಿತಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರು, ಬರ ನಿರ್ವಹಣೆಗಾಗಿ ಜಿಲ್ಲೆಯಲ್ಲಿ ಯಾವುದೇ ಅನುದಾನದ ಕೊರತೆ ಇರುವುದಿಲ್ಲ. ಆಯಾ ತಹಸೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಒಟ್ಟಾರೆ ₹೧೮.೬೫ ಕೋಟಿ ಅನುದಾನ ಲಭ್ಯವಿದೆ ಎಂದು ಮಾಹಿತಿ ನೀಡಿದರು.

ತಹಸೀಲ್ದಾರ್ ಹಾಗೂ ತಾಪಂ ಕಾರ್ಯನಿರ್ವಾಹಣಾಧಿಕಾರಿಗಳ ನೇತೃತ್ವದ ಸಮಿತಿಯು ತಾಲೂಕು ಮಟ್ಟದಲ್ಲಿ ಬರ ನಿರ್ವಹಣೆಯ ಉಸ್ತುವಾರಿ ಅಧಿಕಾರಿಗಳಾಗಿ ಕಾರ್ಯನಿರ್ವಸುತ್ತಿದ್ದಾರೆ. ಇದರ ಹೊರತಾಗಿಯೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೋಬಳಿವಾರು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಆಯಾ ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ನೇರವಾಗಿ ಭೇಟಿ ನೀಡಿ, ಕುಡಿಯುವ ನೀರು ಪೂರೈಕೆ ಹಾಗೂ ಜಾನುವಾರುಗಳಿಗೆ ಮೇವಿನ ದಾಸ್ತಾನು ಕುರಿತಂತೆ ವಾಸ್ತವವಾಗಿ ಪರಿಶೀಲಿಸಿ ಮಾಹಿತಿ ನೀಡಲು ನೇಮಕ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸಲಾಗುತ್ತಿದೆ. ಸದ್ಯ ಮೇವಿನ ಯಾವುದೇ ಕೊರತೆ ಇರುವುದಿಲ್ಲ ಎಂದು ವಿವರಿಸಿದರು.

ಜನವರಿ ೧ರೊಳಗೆ ವೈದ್ಯಕೀಯ ಕಾಲೇಜ್ ಆಡಳಿತ ವಿಭಾಗ ಹಾಗೂ ವಿದ್ಯಾರ್ಥಿ ನಿಲಯ ಕಟ್ಟಡ ಪೂರ್ಣಗೊಳಿಸುವುದಾಗಿ ಮಾಹಿತಿ ನೀಡಿದ್ದಾರೆ. ಜನವರಿ ವೇಳೆಗೆ ಕಂದಾಯ ಗ್ರಾಮಗಳ ಘೋಷಣೆಗೆ ಸಿದ್ಧತೆ ಕೈಗೊಳ್ಳಲಾಗುವುದು. ಕಂದಾಯ ನ್ಯಾಯಾಲಯ ಪ್ರಕರಣಗಳು, ಆರ್‌ಟಿಸಿ ತಿದ್ದುಪಡಿ ಹಾಗೂ ಮ್ಯೂಟೇಷನ್ ಸೇರಿದಂತೆ ವಿವಿಧ ಕಂದಾಯ ಇಲಾಖೆಯ ಪ್ರಗತಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಅಭಿಲೇಖನಾಲಯ ಗಣೀಕರಣಗೊಳಿಸಲು ಸರ್ಕಾರ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಹಾನಗಲ್ ತಹಸೀಲ್ದಾರ್ ಕಚೇರಿಯನ್ನು ಪೈಲೆಟ್ ಯೋಜನೆಗೆ ಆಯ್ಕೆ ಮಾಡಿದೆ. ಗಣೀಕರಣಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ, ಇ-ಆಫೀಸ್ ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಗರಹುಕುಂ ಸಮಿತಿಗಳ ರಚನೆಗೆ ಜಿಲ್ಲೆಯ ಮೂರು ತಾಲೂಕುಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪೈಕಿ ರಾಣಿಬೆನ್ನೂರ ತಾಲೂಕಿನ ಸಮಿತಿಗೆ ಅನುಮೋದನೆ ದೊರೆತಿದೆ. ಉಳಿದ ತಾಲೂಕುಗಳ ಸಮಿತಿಗಳ ರಚನೆಗೆ ತ್ವರಿತವಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು. ಇ-ಜನ್ಮ ತಂತ್ರಾಂಶ ಹೊರತುಪಡಿಸಿ ವಿವಿಧ ಮರಣ ದಾಖಲೆ ಬಳಸಿಕೊಂಡು ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಮರಣಹೊಂದಿರುವ ಫಲಾನುಭವಿಗಳ ಪಿಂಚಣಿ ರದ್ದುಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಒಟ್ಟಾರೆ ೧೭,೪೩೪ ಮರಣ ಹೊಂದಿದವರ ಪಿಂಚಣಿಯನ್ನು ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಸಮಾಧಾನ: ಹಿರೇಕೆರೂರು, ರಟ್ಟಿಹಳ್ಳಿ, ಸವಣೂರಿನಲ್ಲಿ ಆರ್‌ಟಿಸಿ ಮ್ಯೂಟೇಷನ್ ಹಾಗೂ ಕಂದಾಯ ಪ್ರಕರಣಗಳ ವಿಲೇವಾರಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಒಂದು ವಾರದೊಳಗಾಗಿ ಬಾಕಿ ಪ್ರಕರಣಗಳ ಇತ್ಯರ್ಥಪಡಿಸಲು ಸವಣೂರು ಹಾಗೂ ಹಾವೇರಿ ಉಪವಿಭಾಗಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ವಿಶಾಲ್ ಆರ್. ತಾಕೀತು ಮಾಡಿದರು. ಜಿಲ್ಲೆಯ ಎಲ್ಲ ತಾಲೂಕುಗಳ ಬಗರಹುಕುಂ ಸಮಿತಿಗಳನ್ನು ತ್ವರಿತವಾಗಿ ರಚಿಸುವ ನಿಟ್ಟಿನಲ್ಲಿ ಮಾಹಿತಿ ಪಡೆದು ಸರ್ಕಾರಕ್ಕೆ ತ್ವರಿತವಾಗಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ, ಜಿಪಂ ಉಪ ಕಾರ್ಯದರ್ಶಿ ಎಸ್.ಜಿ. ಮುಳ್ಳಳ್ಳಿ, ಉಪ ವಿಭಾಗಾಧಿಕಾರಿಗಳಾದ ಚೆನ್ನಪ್ಪ, ತಹಸೀಲ್ದಾರ್ ಶಂಕರ್, ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಉಪನಿರ್ದೇಶಕ ಪ್ರದೀಪ ಹಾಗೂ ವಿವಿಧ ತಾಲೂಕುಗಳಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸವಣೂರು ಉಪವಿಭಾಗಾಧಿಕಾರಿ ಮಹಮ್ಮದ್ ಖಿಜರ್, ಗ್ರಾಮೀಣ ನೀರು ಸರಬರಾಜು ಕಾರ್ಯ ನಿರ್ವಾಹಕ ಅಭಿಯಂತರ ನಾಯಕ್, ಎಲ್ಲ ತಾಲೂಕು ತಹಸೀಲ್ದಾರಗಳು, ತಾಪಂ ಕಾರ್ಯನಿರ್ವಾಹಣಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.