ಜನಸಾಮಾನ್ಯರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಲಿ: ಶಾಸಕ ನೇಮಿರಾಜ ನಾಯ್ಕ

| Published : Jul 06 2024, 12:54 AM IST

ಜನಸಾಮಾನ್ಯರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಲಿ: ಶಾಸಕ ನೇಮಿರಾಜ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳದಲ್ಲಿಯೇ ಮೂಲಭೂತ ಸಮಸ್ಯೆಗಳಿಗೆ ಅಧಿಕಾರಿಗಳ ಮೂಲಕ ಉತ್ತರಿಸಿದಲ್ಲದೇ ಸಹಾಯ ಒದಗಿಸಿಕೊಟ್ಟರು

ಕೊಟ್ಟೂರು: ಸಮಸ್ಯೆಗಳ ಮೂಟೆ ಹೊತ್ತು ಬರುವ ಜನರ ಆಶೋತ್ತರಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಶಾಸಕ ಕೆ.ನೇಮಿರಾಜ ನಾಯ್ಕ್ ಹೇಳಿದರು.ಪಟ್ಟಣದ ಎಪಿಎಂಸಿ ಆವರಣದ ಬಯಲು ಸಭಾಂಗಣದಲ್ಲಿ ಕೊಟ್ಟೂರು ತಾಲೂಕು ಆಡಳಿತ ಶುಕ್ರವಾರ ಆಯೋಜಿಸಿದ ಜಿಲ್ಲಾಧಿಕಾರಿ ಜನ ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ದಿವಾಕರ್ ಪ್ರತಿ ತಾಲೂಕಿನಲ್ಲಿ ಕೇವಲ ಸಭೆ ನಡೆಸಿ ಕುಂದು ಕೊರತೆಗಳನ್ನು ಆಲಿಸುವ ಕಾರ್ಯ ಮಾಡದೇ ಜನತೆಯ ಮನೆ ಬಾಗಿಲ ಬಳಿ ಸೈಕಲ್ ಪ್ರವಾಸದ ಮೂಲಕ ತೆರಳಿ ಪ್ರತಿಯೊಬ್ಬರ ಸಂಕಷ್ಟಕ್ಕೆ ಧ್ವನಿಯಾದರು. ಸ್ಥಳದಲ್ಲಿಯೇ ಮೂಲಭೂತ ಸಮಸ್ಯೆಗಳಿಗೆ ಅಧಿಕಾರಿಗಳ ಮೂಲಕ ಉತ್ತರಿಸಿದಲ್ಲದೇ ಸಹಾಯ ಒದಗಿಸಿಕೊಟ್ಟರು ಎಂದರು.

ಗೈರಾದ ಪಿಡಿಒಗಳ ಸಸ್ಪೆಂಡ್‌ಗೆ ಸೂಚನೆ: ನಂತರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಜನತೆಯಿಂದ ಸಮಸ್ಯೆ ಆಲಿಸಿದರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಕರೆದು ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಯುವಂತೆ ಸೂಚಿಸಿದರು. ಜನಸ್ಪಂದನೆಗೆ ಗೈರಾದ ತಾಲೂಕಿನ ಕೋಗಳಿ, ನಿಂಬಳಗೇರಿ ಗ್ರಾಪಂ ಪಿಡಿಒಗಳನ್ನು ಸಸ್ಪೆಂಡ್ ಮಾಡಿ ಕಾರಣ ಕೇಳಿ ಕೂಡಲೇ ನೋಟಿಸ್ ನೀಡುವಂತೆ ತಾಪಂ ಇಒ ವೈ.ರವಿಕುಮಾರಗೆ ತಾಕೀತು ಮಾಡಿದರು.

ಜನಸ್ಪಂದನೆಯಲ್ಲಿ ಉಡಾಫೆ ಉತ್ತರ ನೀಡಲು ಮುಂದಾದ ಜೆಜೆಎಂ ಅಧಿಕಾರಿಗಳಿಗೆ ಸಂಬಳ ಕಡಿತ ಸೇರಿದಂತೆ ಇತರ ಭತ್ಯೆಗಳು ಸರ್ಕಾರದಿಂದ ಸಿಗದಂತೆ ಸರ್ಕಾರಕ್ಕೆ ಪತ್ರ ವರದಿ ಕಳುಹಿಸಬೇಕೆಂದು ಅವರು ಇಒಗೆ ಸೂಚಿಸಿದರು.

ಜಿಲ್ಲಾಧಿಕಾರಿಗೆ ಸಲ್ಲಿಕೆಯಾದ ಅರ್ಜಿಗಳಲ್ಲಿ ಆಹಾರ-3, ಕಂದಾಯ-61, ಪಶುಪಾಲನೆ-1, ಭೂಮಾಪನ-3, ಸಾರಿಗೆ-3, ಪಪಂ-19, ಎಪಿಎಂಸಿ-1, ಆರೋಗ್ಯ-1, ಸಿಡಿಪಿಒ-4, ತೋಟಗಾರಿಕೆ-1, ತಾಪಂ-10, ಜೆಸ್ಕಾಂ-4, ಶಿಕ್ಷಣ-2, ಕೃಷಿ-12 ಸೇರಿದಂತೆ ಸಲ್ಲಿಕೆಯಾದ ಅರ್ಜಿಗಳಲ್ಲಿ ಜಿಲ್ಲಾಧಿಕಾರಿ ಸ್ಥಳದಲ್ಲಿಯೇ 12 ಅರ್ಜಿ ವಿಲೇವಾರಿ ಮಾಡಿದರು. 113ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು.

ಮದ್ಯವರ್ಜನ ಜಾಗೃತಿ ಮೂಡಿಸಿ: ಕೊಟ್ಟೂರಿನಲ್ಲಿ ಜನ ಮದ್ಯ ಸೇವನೆ ಹೆಚ್ಚಿಸಿದ್ದು, ಇದರ ಹತೋಟಿಗೆ ಮುಂದಾಗುವಂತೆ ಪಟ್ಟಣದ ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದಕ್ಕೆ ಜಿಲ್ಲಾಧಿಕಾರಿ, ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್‌ ಮತ್ತು ಆರೋಗ್ಯ ಅಧಿಕಾರಿಗಳು ಜಂಟಿಯಾಗಿ ಮದ್ಯವರ್ಜನದಂತಹ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಲು ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಮ್ ಶಾ, ಎಎಸ್ಪಿ ಸಲೀಂ, ಹರಪನಹಳ್ಳಿ ಉಪ ವಿಭಾಗ ಅಧಿಕಾರಿ ಚಿದಾನಂದ ಗುರುಸ್ವಾಮಿ, ತಾಪಂ ಇಒ ವೈ.ರವಿಕುಮಾರ್, ಡಿವೈಎಸ್ಪಿ ಮಲ್ಲಿಶೇಪ್ಪ ಮಲ್ಲಾಪುರ, ಪಪಂ ಮುಖ್ಯಾ ಅಧಿಕಾರಿ ನಸರುಲ್ಲ ಇದ್ದರು.

ತಹಶೀಲ್ದಾರ್ ಅಮರೇಶ್ ಜಿ.ಕೆ. ಸ್ವಾಗತಿಸಿದರು. ಗುರುಬಸವರಾಜ ನಿರೂಪಿಸಿದರು.