ಬಡ-ಶೋಷಿತ ಸಮುದಾಯದವರ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಲಿ

| Published : Sep 28 2024, 01:32 AM IST

ಸಾರಾಂಶ

ಪರಿಶಿಷ್ಟ ಸಮುದಾಯದವರಿಗೂ ಸಾಮಾಜಿಕ ಜಗತ್ತಿನಲ್ಲಿ ಸಹಬಾಳ್ವೆ ನಡೆಸಲು ಅವಕಾಶ ನೀಡಬೇಕು.

ಬಳ್ಳಾರಿ: ಸಮಾಜದಲ್ಲಿ ಶೋಷಣೆಗೊಳಗಾದ ಪರಿಶಿಷ್ಟ ಸಮುದಾಯ ವರ್ಗದವರ ಅಭಿವೃದ್ಧಿಗೆ ಅವರಿಗಾಗಿಯೇ ಇರುವ ಯೋಜನೆಗಳನ್ನು ಸಕಾಲದಲ್ಲಿ ತಲುಪಿಸುವ ಮೂಲಕ ಪರಿಶಿಷ್ಟ ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೂ ಬದುಕು ರೂಪಿಸುವ ಕೆಲಸವಾಗಬೇಕು ಎಂದು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರ ಅಭಿವೃದ್ಧಿ, ಕಲ್ಯಾಣ, ಏಳಿಗೆಗೆ ವಿವಿಧ ಇಲಾಖೆಗಳು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಕುರಿತು ಏರ್ಪಡಿಸಿದ್ದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಅವರು ಮಾತನಾಡಿದರು.

ಅತ್ಯಂತ ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದೀರಿ; ಸಾಮಾಜಿಕ ಕಳಕಳಿಯ ಜವಾಬ್ದಾರಿ ಹೊಂದಬೇಕು. ಪರಿಶಿಷ್ಟ ಸಮುದಾಯದವರಿಗೂ ಸಾಮಾಜಿಕ ಜಗತ್ತಿನಲ್ಲಿ ಸಹಬಾಳ್ವೆ ನಡೆಸಲು ಅವಕಾಶ ನೀಡಬೇಕು. ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ಇಲಾಖೆ ಕಚೇರಿಗಳಲ್ಲಿಯೂ ಮೀಸಲಾತಿ ಉದ್ಯೋಗಾವಕಾಶ ಕಲ್ಪಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದರು.

ಜಿಲ್ಲೆಯಲ್ಲಿನ ಮಾಜಿ ದೇವದಾಸಿಯರ ಪುನರ್ವಸತಿಗೆ ಕ್ರಮ ವಹಿಸಬೇಕು. ವಸತಿ ರಹಿತರಿಗೆ ವಸತಿ ಯೋಜನೆಯಡಿ ಮನೆ ನೀಡಬೇಕು. ನಿವೇಶನ ಇಲ್ಲದಿದ್ದಲ್ಲಿ ಸರ್ಕಾರವೇ ಖರೀದಿಸಿ ಮಾಜಿ ದೇವದಾಸಿಯರಿಗೆ ನೀಡಬೇಕು. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು. ಜಿಲ್ಲೆಯಲ್ಲಿ ದೇವದಾಸಿಯರ ಏಳ್ಗೆಗಾಗಿ ರೂಪಿಸಿದ ಕಾರ್ಯಯೋಜನೆಗಳ ಬಗ್ಗೆ ಪೂರಕ ಮಾಹಿತಿಯೊಂದಿಗೆ ಸಮಿತಿಗೆ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

2011ರ ಜನಗಣತಿ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲಿನ ಒಟ್ಟು 14,00,970 ಜನಸಂಖ್ಯೆ ಪೈಕಿ ಪರಿಶಿಷ್ಟ ಜಾತಿಯಲ್ಲಿ 1,33,180 ಪುರುಷರು ಮತ್ತು 1,34,213 ಮಹಿಳೆಯರು ಇದ್ದಾರೆ. ಪರಿಶಿಷ್ಟ ಪಂಗಡದಲ್ಲಿ 1,31,119 ಪುರುಷರು ಮತ್ತು 1,31,553 ಮಹಿಳೆಯರು ಇದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 65 ದೌರ್ಜನ್ಯ ಪ್ರಕರಣಗಳು ನಡೆದಿದ್ದು, 127 ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಅಧಿಕಾರಿಗಳು ಎಸ್‌ಸಿ, ಎಸ್‌ಟಿ ವಸತಿನಿಲಯಗಳಿಗೆ ನಿಯಮಿತ ಭೇಟಿ ನೀಡಬೇಕು. ಅಲ್ಲಿನ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಗುಣಮಟ್ಟದ ಆಹಾರ ಪೂರೈಕೆಯಾಗಬೇಕು. ಮಕ್ಕಳು ಕುಟುಂಬ ತೊರೆದು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್‌ನಲ್ಲಿರುತ್ತಾರೆ. ಭೇಟಿ ನೀಡುವುದರಿಂದ, ಅಧಿಕಾರಿಗಳು ನಮ್ಮ ಜೊತೆ ಇದ್ದಾರೆ; ಸರ್ಕಾರವು ನಮ್ಮ ಜೊತೆಗಿದೆ ಎಂಬ ಭಾವನೆ ಮೂಡುತ್ತದೆ. ಅಧಿಕಾರಿಗಳು ಮಕ್ಕಳಿಗೆ ನೈತಿಕ ಬಲ ತುಂಬುವ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಕೃಷಿ, ಪಶು ಸಂಗೋಪನಾ, ಇಂಧನ, ಮೀನುಗಾರಿಕೆ, ಸಹಕಾರ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನದಡಿಯ ಕಾರ್ಯಕ್ರಮಗಳ ಕುರಿತು ಚರ್ಚಿಸಿ ಮಾಹಿತಿ ಪಡೆದುಕೊಂಡರು.

ಸಭೆಯಲ್ಲಿ ಬಿ.ಜಿ. ಗೋವಿಂದಪ್ಪ, ಐಹೊಳೆ ದುರ್ಯೋಧನ, ಕೃಷ್ಣ ನಾಯಕ, ಕರೆಮ್ಮ, ಶಾಂತರಾಮ್ ಬುಡ್ನ ಸಿದ್ದಿ, ಜಗದೇವ್ ಗುತ್ತೇದಾರ್, ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಪಿ.ಸೀನ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್, ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಎಸ್ಪಿ ಡಾ.ಶೋಭಾರಾಣಿ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಪ್ರಗತಿ ಪರಿಶೀಲನೆಯಲ್ಲಿ ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಅವರು ಪಾಲ್ಗೊಂಡು ಅಧಿಕಾರಿಗಳ ಜೊತೆ ಚರ್ಚಿಸಿದರು.