ತಾಪಂ ಸಭಾಭವನದಲ್ಲಿ ಆಡಳಿತಾಧಿಕಾರಿ ಪ್ರಕಾಶ ಹಾಲಮ್ಮನವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ತಾಪಂ ಕೆಡಿಪಿ ಹಾಗೂ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು.
ತಾಪಂ ಕೆಡಿಪಿ ಸಭೆಯಲ್ಲಿ ಆಡಳಿತಾಧಿಕಾರಿ
ಕನ್ನಡಪ್ರಭ ವಾರ್ತೆ ಕುಮಟಾ
ತಾಪಂ ಸಭಾಭವನದಲ್ಲಿ ಆಡಳಿತಾಧಿಕಾರಿ ಪ್ರಕಾಶ ಹಾಲಮ್ಮನವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ತಾಪಂ ಕೆಡಿಪಿ ಹಾಗೂ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು.ಜೆಜೆಎಂ ಎಂಜಿನಿಯರ್ ಮಣಿಕಂಠ ಪೂಜಾರಿ ಮಾತನಾಡಿ, ತಾಲೂಕಿನಲ್ಲಿ ಗ್ರಾಪಂ ಮಟ್ಟದಲ್ಲಿ ಎಲ್ಲೆಡೆ ಸಮರ್ಪಕ ನೀರಿನ ಮೂಲಗಳಿಲ್ಲ. ಹೀಗಾಗಿ ಜೆಜೆಎಂ ಯೋಜನೆಯಡಿ ನೀಡಲಾದ ಎಲ್ಲ ನಲ್ಲಿ ಸಂಪರ್ಕಗಳಿಗೆ ಬಹುಗ್ರಾಮ ಯೋಜನೆ ೨೦೨೭ರಲ್ಲಿ ಪೂರ್ಣಗೊಂಡ ಬಳಿಕವೇ ಸಮರ್ಪಕವಾಗಿ ನೀರಿನ ಬಿಡುಗಡೆ ಸಾಧ್ಯವಾಗಲಿದೆ. ಗ್ರಾಮ ಮಟ್ಟದಲ್ಲಿ ಈಗಾಗಲೇ ನೀರಿನ ಸಂಪನ್ಮೂಲ ಇರುವ ಕಡೆಗಳಲ್ಲಿ ಪರಸ್ಪರ ಹೊಂದಾಣಿಕೆಯಲ್ಲಿ ಸಾಧ್ಯವಾದಷ್ಟು ಹೊಸ ಜೆಜೆಎಂ ನಲ್ಲಿಗಳಿಂದಲೂ ನೀರು ಕೊಡಲಾಗುತ್ತಿದೆ. ಆದರೆ ನೀರಿನ ಸಂಪನ್ಮೂಲ ಇಲ್ಲದಿರುವ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಾಧ್ಯವಾಗಿಲ್ಲ. ಜೆಜೆಎಂ ಯೋಜನೆಗೆ ಪೂರ್ಣ ಪ್ರಮಾಣದಲ್ಲಿ ಬಹುಗ್ರಾಮ ಯೋಜನೆಯ ನೀರಿನ ಮೂಲವನ್ನೇ ಅವಲಂಬಿಸಲಾಗಿದೆ. ಕೆಲವೆಡೆ ಮಾತ್ರ ಸದ್ಯ ಬೋರ್‌ವೆಲ್ ಮುಂತಾದವುಗಳನ್ನು ಬಳಸಲಾಗಿದೆ.
ಪ್ರಸ್ತುತ ಬಹುಗ್ರಾಮ ಯೋಜನೆ ಪ್ರಗತಿಯಲ್ಲಿದ್ದು ಪೈಪ್‌ಲೈನ್ ಕಾಮಗಾರಿ ಮುಗಿದಿದೆ. ಕೆಲವೆಡೆ ಅರಣ್ಯ ಇಲಾಖೆಯ ಅನುಮತಿ ಕಾರಣದಿಂದ ಸ್ವಲ್ಪ ತಡೆಯಾಗಿದ್ದರೂ ಸದ್ಯ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಆಗ ಜೆಜೆಎಂ ಸಂಪರ್ಕಗಳಿಗೆ ಬಹುಗ್ರಾಮ ಯೋಜನೆಯ ನೀರನ್ನೇ ಜೋಡಿಸಿ ಪೂರೈಸಲಾಗುವುದು ಎಂದರು.ಸಭೆಯಲ್ಲಿ ತಾಲೂಕಿನಲ್ಲಿ ೧೭ ಮತ್ಸ್ಯಾಶ್ರಯ ಮನೆಗಳಿಗೆ ಸಿಆರ್‌ಝೆಡ್ ನಿಯಮಾವಳಿಗಳ ಕಾರಣದಿಂದ ಗ್ರಾಪಂಯಿಂದ ಮನೆ ನಿರ್ಮಾಣಕ್ಕೆ ಅನುಮತಿ ಸಿಗದೇ ಮೀನುಗಾರ ಫಲಾನುಭವಿಗೆ ಸಮಸ್ಯೆಯಾಗಿರುವ ಕುರಿತು ಚರ್ಚೆಯಾಯಿತು. ಒಟ್ಟೂ ೩೩ ಮನೆಗಳು ಮಂಜೂರಾಗಿದ್ದು ಅದರಲ್ಲಿ ೧೭ ಮನೆಗಳಿಗೆ ಮನೆ ನಿರ್ಮಾಣಕ್ಕೆ ನಿರಾಕ್ಷೇಪಣೆ ಸಿಗುವುದು ಕಷ್ಟವಾಗಿದೆ. ಹೊಲನಗದ್ದೆ, ಕಾಗಾಲ ಹಾಗೂ ಧಾರೇಶ್ವರ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಸಮಸ್ಯೆ ಎದುರಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿ ತಿಳಿಸಿದರು.
ಪ್ರತಿಕ್ರಿಯಿಸಿದ ಇಒ ರಾಜೇಂದ್ರ ಭಟ್, ಗ್ರಾಪಂಯಿಂದ ಅನುಮತಿಗೆ ಸಮಸ್ಯೆಯಿಲ್ಲ, ಆದರೆ ಅನುಮತಿಯನ್ನು ಮೀನುಗಾರಿಕೆ ಇಲಾಖೆಗೆ ಅವರು ಬರೆದುಕೊಡಲು ಸಾಧ್ಯವಿಲ್ಲ. ಅವರು ಮನೆ ನಿರ್ಮಾಣ ಅನುಮತಿಗೆ ಆನ್‌ಲೈನ್ ಮೂಲಕ ದಾಖಲೆ ಸೇರಿಸಬೇಕಾಗುತ್ತದೆ. ಫಲಾನುಭವಿಯ ಸ್ಥಾನವು ಸಿಆರ್‌ಝೆಡ್ ವ್ಯಾಪ್ತಿಯಲ್ಲಿದ್ದರೆ ಅದನ್ನು ದಾಖಲಿಸಬೇಕಾಗುತ್ತದೆ. ಸಿಆರ್‌ಝೆಡ್ ನವರಿಂದ ಫಲಾನುಭವಿ ಎನ್‌ಒಸಿ ಪಡೆದರೆ ಸಮಸ್ಯೆಯಿಲ್ಲ. ಈಬಗ್ಗೆ ಕ್ರಮವಾಗಲಿ ಎಂದರು.ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಭಾರತಿ ಆಚಾರ್ಯ ಅರಣ್ಯ ಅತಿಕ್ರಮಣದಾರರ ಮರುಅರ್ಜಿ ಪರಿಶೀಲನೆ ಸಂಬಂಧಿತ ವಿಷಯಕ್ಕೆ ಪ್ರತಿಕ್ರಿಯಿಸಿ, ಅರಣ್ಯ ಅತಿಕ್ರಮಣದಾರರ ವಸ್ತುಸ್ಥಿತಿ ಮಹಜರಿಗೆ ಪಿಡಿಒ ನೇತೃತ್ವದ ತಂಡಕ್ಕೆ ಮಾರ್ಗದರ್ಶನ ನೀಡಲಾಗಿದೆ. ಆದರೆ ಈವರೆಗೆ ಕಾಗಾಲ ಪಂಚಾಯಿತಿಯಿಂದ ಮಾತ್ರ ವರದಿ ಬಂದಿದೆ. ಉಳಿದ ಯಾವ ಪಂಚಾಯಿತಿಯಿಂದಲೂ ವರದಿ ಬಂದಿಲ್ಲ ಎಂದರು.
ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ಪ್ರಕಾಶ ಹಾಲಮ್ಮನವರ, ಈ ಬಗ್ಗೆ ಕೂಡಲೇ ಕ್ರಮವಾಗಬೇಕು. ಜಂಟಿ ಇಲಾಖೆ ಮಹಜರಿಗೆ ಪಾಲ್ಗೊಳ್ಳಬೇಕಾದ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ಅರಣ್ಯ ಅತಿಕ್ರಮಣದಾರರಿಗೆ ಸಂಬಂಧಿಸಿದ ವರದಿ ಸಲ್ಲಿಕೆ ವಿಳಂಬವಾಗುತ್ತದೆ ಎಂದರು. ಸಮಾಜ ಕಲ್ಯಾಣ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ ಹಾಸಿಗೆ ಬೇಡಿಕೆ ಈಡೇರಿಲ್ಲ ಎಂದು ಭಾರತಿ ಆಚಾರ್ಯ ತಿಳಿಸಿದರು.ಹೆಸ್ಕಾಂ ಎಇ ರಾಜೇಶ ಮಡಿವಾಳ, ತಾಲೂಕಿನ ವಿವಿಧ ಪಂಚಾಯಿತಿಗಳಿಂದ ಹೆಸ್ಕಾಂ ಬಿಲ್ ಬಾಕಿ ಸದ್ಯ ₹೮೧ ಲಕ್ಷಕ್ಕೇರಿದೆ ಎಂದರು. ಪಂಚಾಯಿತಿಯ ಸ್ಥಳೀಯ ಸಂಪನ್ಮೂಲಗಳು ಸಾಲುತ್ತಿಲ್ಲ. ೧೫ನೇ ಹಣಕಾಸು ಅನುದಾನ ಬಿಡುಗಡೆ ಬಗ್ಗೆ ರಾಜ್ಯಮಟ್ಟದಲ್ಲೇ ಚರ್ಚೆ ನಡೆಯುತ್ತಿದೆ. ಪಂಚಾಯತದ ತೆರಿಗೆ ಆಕರಣೆ ಬಳಿಕ ಹೆಸ್ಕಾಂ ಬಿಲ್‌ಗೂ ಆದ್ಯತೆ ನೀಡಲಾಗುವುದು ಎಂದರು.
ಮಂಜೂರಾದ ೧೨೯೦ ಕಾರ್ಮಿಕರ ಸುರಕ್ಷತಾ ಕಿಟ್ ಪೈಕಿ ೯೨೫ ವಿತರಿಸಲಾಗಿದೆ. ೩೬೫ ಬಾಕಿ ಇದೆ ಎಂದು ಕಾರ್ಮಿಕರ ಅಧಿಕಾರಿ ತಿಳಿಸಿದರು. ಅರಣ್ಯ ಇಲಾಖೆಯು ನೆಡುತೋಪು ನಿರ್ಮಾಣ ಸಂದರ್ಭದಲ್ಲಿ ಅಕೇಶಿಯಾ, ಸಾಗುವಾನಿಯಂತಹ ಗಿಡಗಳನ್ನು ನೆಡುವುದಾದರೂ ನಿಯಮಾವಳಿ ತಕ್ಕಂತೆ ಬೆಳೆಯಬೇಕು. ಹೆಚ್ಚಿನಂಶ ಅರಣ್ಯ ಗಿಡಗಳು, ಹಣ್ಣುಹಂಪಲು ಗಿಡಗಳನ್ನೇ ಬೆಳೆಸುವುದು ಸೂಕ್ತ ಎಂದು ಅರಣ್ಯಾಧಿಕಾರಿಗೆ ತಿಳಿಸಲಾಯಿತು. ಉಳಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ಮಂಡಿಸಿದರು.