ಸಾರಾಂಶ
ಶಿವಮೊಗ್ಗ: ಹಿಂದುಳಿದ ಸಮಾಜಗಳು ಒಗ್ಗಟ್ಟಾಗಬೇಕಿದೆ. ಆ ಮೂಲಕ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಹೇಳಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಸವಿತಾ ಸಮಾಜ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದುಳಿದ ಸಮಾಜಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿಯಾಗಿದೆ. ಅದರೆ ಈ ಸಮಾಜಗಳು ಆರ್ಥಿಕವಾಗಿ , ರಾಜಕೀಯವಾಗಿ, ಸಾಮಾಜಿಕವಾಗಿ ಹಿಂದುಳಿದಿರುವುದು ವಿಷಾದನೀಯ. ಆದ್ದರಿಂದ ನೀವೆಲ್ಲಾ ಮುಂದೆ ಬರಬೇಕು ಎಂದು ಕರೆ ನೀಡಿದರು.ಈ ಸಮಾಜವು ಕೇವಲ ಸೇವೆಗೆ ಮಾತ್ರ ಸಿಮೀತವಾಗದೆ. ಆರ್ಥಿಕವಾಗಿ ಸದೃಢವಾಗಬೇಕು. ಅದಕ್ಕಾಗಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ತಂದಿದ್ದು, ಅದರ ಫಲವನ್ನು ನೀವೆಲ್ಲಾ ಪಡೆಯುವ ಮೂಲಕ ಸರ್ವತೋಮುಖ ಬೆಳವಣಿಗೆ ಆಗಬೇಕು ಎಂದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರವರು ಸಂವಿಧಾನ ರಚಿಸಿದ ಉದ್ದೇಶವೇ ಇಂತಹ ಸಮಾಜಗಳು ತಮ್ಮ ಹಕ್ಕನ್ನು ಪಡೆಯಬೇಕೆಂದು. ಆ ನಿಟ್ಟಿನಲ್ಲೆ ಶಿಕ್ಷಣ, ಸಂಘಟನೆ, ಹೋರಾಟದ ಮಹತ್ವ ಮತ್ತು ಅಗತ್ಯತೆಯನ್ನು ತಿಳಿಸಿಕೊಟ್ಟಿದ್ದಾರೆ. ಹಿಂದುಳಿದ ಸಮಾಜಗಳು ಈ ಜಗತ್ತಿನಲ್ಲಿ ಮುಂದೆ ಬರಬೇಕೆಂದರೆ ಶಿಕ್ಷಣ ಪಡೆಯಲೆಬೇಕು. ನಿಮ್ಮೊಳಗಿನ ಕೀಳರಿಮೆ ಬಿಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಹೋರಾಟದ ಹಾದಿಯಲ್ಲಿ ಎಲ್ಲವನ್ನು ಪಡೆಯಬೇಕು ಎಂದ ಅವರು, ಉಜ್ವಲ ಭವಿಷ್ಯ ಮುಂದಿನ ದಿನಗಳಲ್ಲಿ ನಿಮಗಾಗಿ ಕಾಯುತ್ತಾ ಇದೆ ಎಂದು ಹೇಳಿದರು.ಕುವೆಂಪು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಅತಿಥಿ ಉಪನ್ಯಾಸಕ ಡಾ.ಜಿ.ರಘುನಂದನ್ ಮಾತನಾಡಿ, ಶಿವನ ಬಲಗಣ್ಣಿನಿಂದ ಹುಟ್ಟಿದವರು ನಾವು. ನಮ್ಮ ವೃತ್ತಿಯನ್ನು ಗೌರವದಿಂದ ಮಾಡುತ್ತಿದ್ದೇವೆ. ನಮ್ಮನ್ನು ನಿಂದನೆ ಮಾಡುವವರು ಹೊಗಳುವ ಕಾಲ ಬಂದೇ ಬರುತ್ತದೆ. ಅಲ್ಲಿಯವರೆಗೂ ನಮ್ಮ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಾ ಹೋಗಬೇಕು. ನಾವು ಹುಟ್ಟಿರೋದೆ ಪ್ರಕೃತಿಯಿಂದ ಅದರೊಟ್ಟಿಗೆ ನಡೆಯೋಣ. ನಾವು ನಮಗಾಗಿ ಕೆಲಸ ಮಾಡದೆ ಸಮಾಜಕ್ಕಾಗಿ ದುಡಿಯುತ್ತಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ಎಂ.ಜಿ.ಬಾಲು, ತಾಲೂಕು ಸವಿತಾ ಸಮಾಜ ಅಧ್ಯಕ್ಷ ಬಿ.ಎನ್.ಧರ್ಮರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್ ಹಾಗೂ ಸಮಾಜದ ಮುಖಂಡರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.