ಹಳ್ಳಿಹಳ್ಳಿಗಳಿಗೂ ಕನ್ನಡ ಸಾಹಿತ್ಯದ ಸೊಬಗು ಹರಡಲಿ: ಕಸಾಪ ಅಧ್ಯಕ್ಷ ಮಾನ ಮಂಜೇಗೌಡ

| Published : Nov 27 2024, 01:04 AM IST

ಹಳ್ಳಿಹಳ್ಳಿಗಳಿಗೂ ಕನ್ನಡ ಸಾಹಿತ್ಯದ ಸೊಬಗು ಹರಡಲಿ: ಕಸಾಪ ಅಧ್ಯಕ್ಷ ಮಾನ ಮಂಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತ್ಯ ಪರಿಷತ್ ಮೊದಲ ಬಾರಿಗೆ ಹಳ್ಳಿಯ ಕಡೆ ಬಂದು ಕನ್ನಡ ಕಾರ್ಯಕ್ರಮ ಮಾಡುವುದು ತುಂಬಾ ಖುಷಿಯಾಗಿದೆ. ಹಲ್ಮಿಡಿ ಶಾಸನದ ಬಗ್ಗೆ ನಮಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಲು ಈ ಕಾರ್ಯಕ್ರಮ ಉತ್ತಮವಾಗಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ಕನ್ನಡ ಸಾಹಿತ್ಯದ ಸೊಬಗು ಪ್ರತಿ ಹಳ್ಳಿಗಳಿಗೂ ತಲುಪಿಸುವ ಕೆಲಸ ಆಗಬೇಕಿದೆ ಎಂದು ಕಸಾಪ ಅಧ್ಯಕ್ಷ ಮಾನ ಮಂಜೇಗೌಡ ತಿಳಿಸಿದರು.

ತಾಲೂಕಿನ ನಾರಾಯಣಪುರ ಗ್ರಾಪಂ ವ್ಯಾಪ್ತಿಯ ಕನ್ನಡದ ಮೊಟ್ಟಮೊದಲ ಶಿಲಾಶಾಸನ ದೊರೆತ ಹಲ್ಮಿಡಿ ಗ್ರಾಮದಲ್ಲಿ ನಮ್ಮ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಹಲ್ಮಿಡಿ ಶಾಸನ ಪುರಾತನ ಶಾಸನವಾಗಿದ್ದು, ಕದಂಬರ ಇತಿಹಾಸವನ್ನು ತಿಳಿಸುತ್ತದೆ. ನಮ್ಮ ನಡೆ ಹಳ್ಳಿಯ ಕಡೆ ಎಂಬ ವಿನೂತನ ಕಾರ್ಯಕ್ರಮವನ್ನು ಬೇಲೂರು ತಾಲೂಕು ಸಾಹಿತ್ಯ ಪರಿಷತ್ ಹಮ್ಮಿಕೊಂಡಿದೆ. ಸಾಮಾನ್ಯರಿಗೆ ಕನ್ನಡ ನಾಡು- ನುಡಿ, ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನಾರಾಯಣಪುರ ಗ್ರಾಪಂ ಅಧ್ಯಕ್ಷರಾದ ಶಶಿಕಲಾ ಮೋಹನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಪರಿಷತ್ ಮೊದಲ ಬಾರಿಗೆ ಹಳ್ಳಿಯ ಕಡೆ ಬಂದು ಕನ್ನಡ ಕಾರ್ಯಕ್ರಮ ಮಾಡುವುದು ತುಂಬಾ ಖುಷಿಯಾಗಿದೆ. ಹಲ್ಮಿಡಿ ಶಾಸನದ ಬಗ್ಗೆ ನಮಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಲು ಈ ಕಾರ್ಯಕ್ರಮ ಉತ್ತಮವಾಗಿದೆ ಎಂದರು.

ಸಂಶೋಧಕ ಹಾಗೂ ಸಾಹಿತಿ ಡಾ. ಶ್ರೀವತ್ಸಾ ಎಸ್ ಟಿ ಇವರು ಹಲ್ಮಿಡಿ ಶಾಸನದ ಬಗ್ಗೆ ಪ್ರಾತ್ಯಕ್ಷಿಕೆ ಪರಿಚಯ, ಸ್ಲೈಡ್ ಪ್ರದರ್ಶನವನ್ನು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತಿಳಿಸುತ್ತಾ, ಹಲ್ಮಿಡಿ ಶಿಲಾ ಶಾಸನವೂ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಲು ಸಹಾಯ ಮಾಡಿದೆ ಎಂದರು.ಮಾಜಿ ಸದಸ್ಯ ಮಂಜುನಾಥ್ ಮಾತನಾಡಿ, ಹಲ್ಮಿಡಿ ಶಾಸನದ ಬಗ್ಗೆ ಜನರಿಗೆ ಉಪಯುಕ್ತ ಮಾಹಿತಿಯನ್ನು ತಿಳಿಸುವ ಕೆಲಸವನ್ನು ಕಸಾಪ ಮಾಡುತ್ತಿದೆ ಎಂದ ಅವರು, ಗ್ರಾನೈಟ್ ರಾಜಶೇಖರ್ ಅವರು ಹಲ್ಮಿಡಿ ಶಾಸನದ ಪುನರ್ ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಷಯ ಎಂದರು.

ಕಸಾಪ ಮಾಜಿ ಅಧ್ಯಕ್ಷ ಆನಂದ್ ಮಾತನಾಡಿ, ಈ ಕಾರ್ಯಕ್ರಮವು ಕನ್ನಡ ಮನಸ್ಸುಗಳಿಗೆ ಉಪಯುಕ್ತವಾದ ಕಾರ್ಯಕ್ರಮವಾಗಿದೆ. ಹಲ್ಮಿಡಿಯಲ್ಲಿ ಭಾಷಾ ಸಂಶೋಧನ ಕೇಂದ್ರವನ್ನು ಸ್ಥಾಪಿಸಲು ಸರ್ಕಾರವನ್ನು ಎಲ್ಲರೂ ಒತ್ತಾಯಿಸಬೇಕು ಎಂದು ಮನವಿ ಮಾಡಿದರು.

ಕಸಾಪ ಕಾರ್ಯದರ್ಶಿ ಮಹೇಶ್, ಹೋಬಳಿ ಅಧ್ಯಕ್ಷ ಹಲ್ಮಿಡಿ ಚನ್ನೇಗೌಡ,ಸಂಘಟನಾ ಕಾರ್ಯದರ್ಶಿ ಬೊಮ್ಮಡಿಹಳ್ಳಿ ಕುಮಾರ್, ಗೌರವ ಅಧ್ಯಕ್ಷ ಶಿವಮೂರ್ತಿ, ಕೋಶಾಧ್ಯಕ್ಷ ಗುರುರಾಜ್ , ಕೇಶವಮೂರ್ತಿ, ಗುರುಸಿದ್ದಪ್ಪ, ಮಲ್ಲೇಶ್, ಗಿರೀಶ್, ಪಾಲಾಕ್ಷ, ಸೋಮೇಶ್ ಇದ್ದರು.